ಸಿಟಿ ರೌಂಡ್ಸ್ ವೇಳೆ ಸಾರ್ವಜನಿಕರಿಂದ ದೂರಿನ ಸುರಿಮಳೆ, ಅಧಿಕಾರಿಗಳಿಗೆ ಸಿಎಂ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.18- ನಗರದ ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಇಂದು ದಿಢೀರ್ ಭೇಟಿಕೊಟ್ಟಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಳೆಯಿಂದ ಸಂತ್ರಸ್ತಕ್ಕೊಳಗಾದ ಮಹಿಳೆಯರು, ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಳೆದ 10 ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ. ಕಾಲುವೆಗೆ ನೀರು ನುಗ್ಗಿ ಮನೆಯಲ್ಲಿದ್ದ ಸಾಮಾನುಗಳೆಲ್ಲ ಕೊಚ್ಚಿ ಹೋಗಿವೆ. ತಿನ್ನಲು ಸಹ ನಮಗೆ ಏನೂ ಇಲ್ಲ. ನಮ್ಮ ಕಷ್ಟಗಳನ್ನು ಕೇಳಲು ಶಾಸಕರೂ ಬರುವುದಿಲ್ಲ. ಇನ್ನು ಅಧಿಕಾರಿಗಳ ಬಗ್ಗೆ ಹೇಳದಿರುವುದೇ ಬೇಡ ಎಂದು ಅನೇಕರು ಅಸಮಾಧಾನ ಹೊರಹಾಕಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು ದಿಢೀರನೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಗರ, ಎಚ್‍ಎಸ್‍ಆರ್ ಲೇಔಟ್, ಮಡಿವಾಳ ಸೇರಿದಂತೆ ಮತ್ತಿತರ ಕಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಿಎಂ ಬರುವುದನ್ನೇ ಕಾಯುತ್ತಿದ್ದ ಸಂತ್ರಸ್ತರು ನಾಡಿನ ದೊರೆಯ ಮುಂದೆ ತಮ್ಮ ಸಂಕಷ್ಟವನ್ನು ತೆರೆದಿಟ್ಟು ಅಧಿಕಾರಿಗಳಿಗೆ ಅಕ್ಷರಶಃ ಹಿಡಿಶಾಪ ಹಾಕಿದರು.

ಅಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸೌಮ್ಯ ಎಂಬ ಮಹಿಳೆ ಸಿಎಂ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ವರ್ಷ ಮಳೆಗಾದಲ್ಲಿ ಚರಂಡಿ ನೀರು ಮನೆಗೆ ನುಗ್ಗುತ್ತದೆ. ಮನೆಯಲ್ಲಿದ್ದ ಸಾಮಾನುಗಳು, ಧವಸಧಾನ್ಯಗಳು ಕೊಚ್ಚಿಹೋಗುತ್ತವೆ. 10 ವರ್ಷಗಳಿಂದ ಇಲ್ಲಿ ಸಮಸ್ಯೆಯಿದೆ. ನಮ್ಮ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳು ಬರುವುದಿಲ್ಲ, ಶಾಸಕರು ಕೂಡ ಬಗೆಹರಿಸುತ್ತಿಲ್ಲ. ನಾವು ಬಿಬಿಎಂಪಿಗೆ ತೆರಿಗೆ ಕಟ್ಟುತ್ತೇವೆ. ಆದರೂ ನಮ್ಮ ಸಂಕಷ್ಟಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಮಡಿವಾಳ ಕೆರೆ ವೀಕ್ಷಣೆ ಮಾಡಲು ಹೋದ ವೇಳೆ ಸಾರ್ವಜನಿಕರಿಂದ ಕೆಲವು ಅಹವಾಲುಗಳನ್ನು ಆಲಿಸಿದರು. ಈ ಕೆರೆಗೆ 10ರಿಂದ 15 ಚರಂಡಿಗಳ ನೀರು ಬರುತ್ತದೆ. ಪ್ರತಿ ವರ್ಷವು ನಮಗೆ ಗೋಳಾಟ ತಪ್ಪಿಲ್ಲ. ಕಡೆ ಪಕ್ಷ ನೀವಾದರೂ ಪರಿಹರಿಸಿ ಎಂದು ಮನವಿ ಮಾಡಿದರು.

ಮೇಲಿನ ಬಡಾವಣೆಗಳಿಂದ ನೀರು ಹರಿದುಬರುತ್ತಿರುವ ಕಾರಣ ನಿಮಗೆ ತೊಂದರೆಯಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಮುಂದಿನ ಜೂನ್ ಅಥವಾ ಮೇ ತಿಂಗಳೊಳಗೆ ಸಮಸ್ಯೆಯನ್ನು ಪರಿಹರಿಸಲಾಗುವುದು. ಏಕಕಾಲದಲ್ಲಿ ಇದನ್ನು ಬಗೆಹರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಕೆಲಸ ನಡೆಯಬೇಕು. ನನ್ನ ಮಾತಿನಲ್ಲಿ ನಂಬಿಕೆಯಿಡಿ ಎಂದು ಮನವಿ ಮಾಡಿದರು.

ಅಗರಕ್ಕೆ ಭೇಟಿ ನೀಡಿದ ವೇಳೆ ಅಲ್ಲಿಯೂ ಕೂಡ ಸಾರ್ವಜನಿಕರಿಂದ ಸಮಸ್ಯೆಗಳನ್ನು ಸಿಎಂ ಎದುರಿಸಬೇಕಾಯಿತು. ಪ್ರಮುಖವಾಗಿ ಮಳೆ ನೀರು, ಚರಂಡಿ, ರಾಜಕಾಲುವೆ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದರು. ಪ್ರತಿ ಬಾರಿ ಮಳೆ ಬಂದರೆ ಅತಿಹೆಚ್ಚು ಸಮಸ್ಯೆಗಳಾಗುವುದು ಇದೇ ಪ್ರದೇಶದಲ್ಲಿ. ಕಾಲುವೆ ವ್ಯವಸ್ಥೆ ಸರಿ ಇಲ್ಲದ ಕಾರಣ. ಪದೇ ಪದೇ ಸಮಸ್ಯೆಗಳು ಎದುರಾಗುತ್ತಿವೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಸಿಎಂಗೆ ಮನವಿ ಮಾಡಿಕೊಂಡರು.

ಬಿಬಿಎಂಪಿ ಅಧಿಕಾರಿಗಳು ಕಾಲಕಾಲಕ್ಕೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನವೇ ಕಾಲುವೆಗಳನ್ನು ಸರಿಪಡಿಸಿದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ವಾರ್ಡ್‍ಗಳಲ್ಲಿ ಸಭೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆಯಬೇಕಿತ್ತು. ಆದರೆ ಇದಾವುದೂ ಕೂಡ ಆಗುತ್ತಿಲ್ಲ ಎಂದು ದೂರಿದರು.

ಎಚ್‍ಎಸ್‍ಆರ್ ಲೇಔಟ್‍ನಲ್ಲೂ ಸಾರ್ವಜನಿಕರಿಂದ ದೂರುಗಳು ಎದುರಾದವು. ಕಳೆದ 20 ವರ್ಷಗಳಿಂದ ಮಳೆಗಾಲದಲ್ಲಿ ಸಮಸ್ಯೆಗಳಿವೆ. ಎಸ್‍ಟಿಪಿ ಘಟಕ ನಿರ್ಮಾಣವಾದರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಈ ಪ್ರದೇಶವು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಬಿಬಿಎಂಪಿ ಅಧಿಕಾರಿಗಳು ವೈಜ್ಞಾನಿಕವಾಗಿ ಕಾಮಗಾರಿಯನ್ನು ನಡೆಸಿಲ್ಲ. ನೀವಾದರೂ ಅಧಿಕಾರಿಗಳಿಗೆ ಬುದ್ದಿ ಹೇಳಿ ಎಂದು ಸ್ಥಳೀಯ ನಿವಾಸಿಗಳು ಬೇಡಿಕೊಂಡರು.

ಸಮಸ್ಯೆಗಳನ್ನು ಸಹನೆಯಿಂದಲೇ ಆಲಿಸಿದ ಸಿಎಂ ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದು ನಗರದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆಯನ್ನು ಕೊಟ್ಟರು.

Facebook Comments