BBMP ಮುಖ್ಯ ಆಯುಕ್ತ ಗೌರವ್‍ಗುಪ್ತಾ, ಜೆಡಿಟಿಪಿ ಮಂಜೇಶ್ ವಿರುದ್ಧ ACBಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.24- ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಗೌರವ್ ಗುಪ್ತಾ ಹಾಗೂ ಉತ್ತರ ನಗರ ಯೋಜನೆ ಜಂಟಿ ನಿರ್ದೇಶಕ ಮಂಜೇಶ್ ವಿರುದ್ಧ ಎಸಿಬಿ ಮತ್ತು ಬಿಎಂಟಿಎಫ್‍ಗೆ ದಾಖಲೆ ಸಮೇತ ದೂರು ನೀಡಿದ್ದಾರೆ.

ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಅವರು, ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬಿಲ್ಡರ್ ಮಾಫಿಯಾದೊಂದಿಗೆ ಕೈ ಜೋಡಿಸಿ ಪಾಲಿಕೆ ಬೊಕ್ಕಸಕ್ಕೆ ಕೋಟ್ಯಂತರ ರೂ.ವಂಚಿಸಿದ್ದಾರೆ ಎಂದು ಆರೋಪಿಸಿದರು. ನಕ್ಷೆ ಮಂಜೂರಾತಿ ಶುಲ್ಕ ವಸೂಲಿಗೆ ಬಿಬಿಎಂಪಿಗೆ ಅವಕಾಶ ನೀಡಬಾರದು ಎಂದು ಸಲ್ಲಿಕೆಯಾದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ ಶುಲ್ಕ ವಸೂಲಿ ಮಾಡದಂತೆ ಪಾಲಿಕೆಗೆ ಆದೇಶಿಸಿದೆ.

ಇದರಿಂದ ಪ್ರತಿವರ್ಷ ಬಿಬಿಎಂಪಿ ಸಂಗ್ರಹಿಸುತ್ತಿದ್ದ 60 ಕೋಟಿ ರೂ.ಗಳಿಗೂ ಹೆಚ್ಚು ಆದಾಯ ಖೋತಾ ಆಗಿದೆ. ಇಂತಹ ಪರಿಸ್ಥಿತಿಗೆ ಗೌರವ್ ಗುಪ್ತಾ ಅವರೇ ಕಾರಣ. ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಒದಗಿಸದೆ. ದುರ್ಬಲ ವಕೀಲರ ಮೂಲಕ ವಾದ ಮಾಡಿಸಲು ಆಯುಕ್ತರೆ ಪ್ರಮುಖ ಕಾರಣ ಎಂದು ಅವರು ದೂರಿದರು.

ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತರಲು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶಗಳಿದ್ದರೂ ಆಯುಕ್ತರು ಬಿಲ್ಡರ್ ಮಾಫಿಯಾದೊಂದಿಗೆ ಶಾಮೀಲಾಗಿ ಕೈ ಚೆಲ್ಲಿ ಕುಳಿತಿದ್ದಾರೆ. ನಗರ ಯೋಜನೆ ಜಂಟಿ ನಿರ್ದೇಶಕರಾಗಿರುವ ಮಂಜೇಶ್ ಎಂಬಾತನ ಮಧ್ಯಸ್ತಿಕೆಯಲ್ಲಿ ಬಿಲ್ಡರ್‍ಗಳೊಂದಿಗೆ ಸಭೆ ನಡೆಸಿರುವ ಗೌರವ್ ಗುಪ್ತಾ ಅವರು, ಪ್ರಸ್ತುತ ಚಾಲ್ತಿಯಲ್ಲಿರುವ ನಕ್ಷೆ ಮಂಜೂರಾತಿ ಶುಲ್ಕದ ಬದಲಿಗೆ 2008ರಲ್ಲಿ ಜಾರಿಯಲ್ಲಿದ್ದ ಪ್ರಮಾಣದಷ್ಟು ಶುಲ್ಕ ಸಂಗ್ರಹಕ್ಕೆ ಸೂಚನೆ ನೀಡಿದ್ದಾರೆ.

ಆಯುಕ್ತರ ಈ ನಿರ್ಧಾರದಿಂದ ಪ್ರತಿವರ್ಷ ಸಂಗ್ರಹವಾಗುತ್ತಿದ್ದ 600 ಕೋಟಿ ರೂ.ಆದಾಯದ ಬದಲಿಗೆ ಕೇವಲ 130 ಕೋಟಿ ರೂ.ಮಾತ್ರ ಸಂಗ್ರಹವಾಗುತ್ತಿದೆ ಎಂದು ಅವರು ದೂರಿದರು.

ನ್ಯಾಯಾಲಯದ ಆದೇಶಕ್ಕೆ ಬದ್ಧರಾಗಿರಬೇಕು ಎಂಬ ಮುಚ್ಚಳಿಕೆ ಬರೆಸಿಕೊಂಡು ಬಿಲ್ಡರ್‍ಗಳಿಗೆ ಕಟ್ಟಡ ಕಟ್ಟಲು ಅನುಮತಿ ನೀಡುತ್ತಿರುವ ಆಯುಕ್ತರ ಧೋರಣೆ ಗಮನಿಸಿದರೆ ಅವರು ಬಿಲ್ಡರ್‍ಗಳಿಂದ ಕಿಕ್‍ಬ್ಯಾಕ್ ಪಡೆದಿರಬೇಕು ಎಂಬ ಗುಮಾನಿ ಇದೆ ಎಂದಿದ್ದಾರೆ.

ಆಯುಕ್ತರ ಈ ಮೂರ್ಖ ನಿರ್ಧಾರದ ಬಗ್ಗೆ ಬಿಬಿಎಂಪಿ ಆಡಳಿತಾಕಾರಿ ರಾಕೇಶ್‍ಸಿಂಗ್ ಅವರಿಗೆ ಮಾಹಿತಿ ನೀಡುತ್ತಿದ್ದಂತೆ ತಾವು ಹೊರಡಿಸಿದ್ದ ಆದೇಶದ ಪ್ರತಿಯನ್ನು ಕಡತದಿಂದ ತೆಗೆದುಹಾಕಿಸುವಲ್ಲಿ ಗೌರವ್ ಗುಪ್ತಾ ಯಶಸ್ವಿಯಾಗಿದ್ದಾರೆ.

ಇಡೀ ಬಿಬಿಎಂಪಿ ಇತಿಹಾಸದಲ್ಲೇ ಆಯುಕ್ತರೊಬ್ಬರು ಈ ಪ್ರಮಾಣದ ಭ್ರಷ್ಟಾಚಾರ ನಡೆಸಿರಲಿಲ್ಲ. ಹೀಗಾಗಿ ಗೌರವ್ ಗುಪ್ತಾ ಅವರನ್ನು ಆಯುಕ್ತ ಸ್ಥಾನದಿಂದ ತೆಗೆದುಹಾಕಬೇಕು ಎಂದು ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

Facebook Comments