ಕಂಟೈನ್ಮೆಂಟ್ ವಲಯಗಳಲ್ಲಿ ಕಠಿಣ ಕಾನೂನು ಕ್ರಮ ಜಾರಿ : ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.8- ಕೋವಿಡ್ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಕಂಟೈನ್ಮೆಂಟ್ ವಲಯಗಳಲ್ಲಿ ಕಠಿಣ ಕಾನೂನು ಕ್ರಮ ಜಾರಿ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಟೈನ್ಮೆಂಟ್ ವಲಯದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲು ಮುಖ್ಯಮಂತ್ರಿ ಅವರು ಸೂಚನೆ ಕೊಟ್ಟಿದ್ದಾರೆ. ಅದರಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಆಗಮಿಸಿರುವ ತಜ್ಞರ ತಂಡ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಎಲ್ಲೆಲ್ಲಿ ಕಂಟೈನ್ಮೆಂಟ್ ವಲಯಗಳಿವೆಯೋ ಅಂತಹ ಕಡೆ ಬಿಗಿಯಾದ ಕ್ರಮ ಜರುಗಿಸುವಂತೆ ಸಲಹೆ ಮಾಡಿದ್ದಾರೆ. ಇದು ಅನಿವಾರ್ಯವಾಗಿದೆ ಎಂದರು.

ನಾವು ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಬೇಕೆ ಹೊರತು ಸೋಂಕಿತ ವ್ಯಕ್ತಿಗಳ ವಿರುದ್ಧವಲ್ಲ. ಇದು ಗುಣಮುಖವಾಗದ ರೋಗವೂ ಅಲ್ಲ. ಸೋಂಕು ಬಂದಿದೆ ಎಂಬ ತಕ್ಷಣವೇ ಯಾರೊಬ್ಬರೂ ಹೆದರಬೇಕಾದ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲೂ ಸೋಂಕು ಪೀಡಿತರಿಗೆ ತೊಂದರೆಯಾಗದಂತೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. 450 ಆ್ಯಂಬುಲೆನ್ಸ್ ಜೊತೆಗೆ ಹೆಚ್ಚುವರಿಯಾಗಿ 100 ಆ್ಯಂಬುಲೆನ್ಸ್‍ಗಳನ್ನು ತೆಗೆದುಕೊಳ್ಳುವಂv ಸಿಎಂ ಸೂಚನೆ ಕೊಟ್ಟಿದ್ದಾರೆ. ಮೊದಲು ಕೊರತೆ ಇದದ್ದು ನಿಜ ಎಂದು ತಪ್ಪನ್ನು ಒಪ್ಪಿಕೊಂಡರು.

ಈಗ ಕೋವಿಡ್ ಸಂಬಂಧದ ಕೆಲಸಗಳಿಗಾಗಿಯೇ ಆ್ಯಂಬುಲೆನ್ಸ್‍ಗಳನ್ನು ಮೀಸಲಿಡಲಾಗಿದೆ. ಅವರು ಈ ಕೆಲಸವನ್ನು ಬಿಟ್ಟು ಬೇರೇನೂ ಮಾಡುವಂತಿಲ್ಲ. ಪಾಸಿಟಿವ್ ರೋಗಿಗಳನ್ನು ಕರೆದುಕೊಂಡು ಹೋಗುವುದು, ಕ್ವಾರಂಟೈನ್‍ಗೆ ಜನರನ್ನು ರವಾನೆ ಮಾಡುವುದು ಈ ಆ್ಯಂಬುಲೆನ್ಸ್‍ಗಳ ಕೆಲಸ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಪ್ರಸ್ತುತ 330 ಆ್ಯಂಬುಲೆನ್ಸ್‍ಗಳು ಕಾರ್ಯ ನಿರ್ವಹಿಸುತ್ತವೆ. 108 ವತಿಯಿಂದ ಕೋವಿಡ್‍ಗೆ ಮೀಸಲಿಟ್ಟಿರುವುದು 30, ಆರೋಗ್ಯ ಇಲಾಖೆ ಹೆಚ್ಚುವರಿಯಾಗಿ ಬಾಡಿಗೆ ಪಡೆದಿರುವುದು 50, ಬಿಬಿಎಂಪಿ ವತಿಯಿಂದ 250 ನಿರ್ವಹಣೆ ಮಾಡುತ್ತವೆ ಎಂದು ವಿವರಿಸಿದರು.  ಇನ್ನು ಮುಂದೆ ಯಾವುದೇರ ರೋಗಿಯ ವೈದ್ಯಕೀಯ ವರದಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದರೆ ಪ್ರಯೋಗಾಲಯದಿಂದಲೇ ಬಿಬಿಎಂಪಿಗೆ ವಾರ್ರ್ ರೂಮ್‍ಗೆ ರವಾನೆಯಾಗಿದೆ.

ಬಳಿಕ ಬಿಬಿಎಂಪಿಯವರು ನೇರವಾಗಿ ಮನೆಗೆ ಆ್ಯಂಬುಲೆನ್ಸ್ ಕಳುಹಿಸಿ ಅಂಥವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಎಂದು ತಿಳಿಸಿದರು.  ನಮಗೆ ಹಾಸಿಗೆಗಳ ಕೊರತೆ ಎದುರಾಗಿಲ್ಲ. ಪ್ರಸ್ತುತ ಕೋವಿಡ್ ಕೇರ್ ಸೆಂಟರ್‍ನಲ್ಲಿ 2000 ಹಾಸಿಗೆಗಳು ಲಭ್ಯವಿದೆ.

ಪ್ರತಿದಿನ 200ರಿಂದ 300 ಜನ ಅಲ್ಲಿಗೆ ದಾಖಲಾಗಿ ಅಷ್ಟೇ ಪ್ರಮಾಣದಲ್ಲಿ ಡಿಸ್ಚಾರ್ಜ್ ಕೂಡ ಆಗುತ್ತಾರೆ. ಬಿಇಐಸಿಯಲ್ಲಿ 10000 ಹಾಸಿಗೆಗಳು ಸಿಗುವುದರಿಂದ ನಮಗೆ ಯಾವ ಸಮಸ್ಯೆಯೂ ಎದುರಾಗುವುದಿಲ್ಲ ಎಂದು ಪುನರುಚ್ಚರಿಸಿದರು.

ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ರೋಗಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು, ಊಟ, ತಿಂಡಿ ಸಮರ್ಪಕವಾಗಿ ನೀಡಬೇಕಾಗುತ್ತದೆ. ಹೀಗಾಗಿ ಬಿಇಐಸಿಯಲ್ಲಿ ಒಂದು ಸಾವಿರ ವೈದ್ಯರು ಹಾಗೂ 1,500 ಸಿಬ್ಬಂದಿಯನ್ನು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ಖಾಸಗಿಯವರು ಕೊಟ್ಟ ಮಾತಿನಂತೆ ನಮಗೆ ಹಾಸಿಗೆಗಳನ್ನು ನೀಡಲೇಬೇಕು. ಇಂದು ಅವರ ಜೊತೆ ಮಾತುಕತೆ ಇದೆ. ವೈದ್ಯರು ಆತ್ಮಸ್ಥೈರ್ಯ ಕಳೆದುಕೊಳ್ಳಬೇಕಾಗಿಲ್ಲ. ಕೊರೊನಾಗೆ ಭಯಪಡಬೇಡಿ. ನನ್ನ ಕುಟುಂಬದಲ್ಲೇ ಮೂವರಿಗೆ ಸೋಂಕು ಇತ್ತು. ಆದರೂ ನಾನು ಹೆದರಲಿಲ್ಲ. ವೈದ್ಯರಿಗೆ ನಾನೇ ಬ್ರಾಂಡ್ ಅಂಬಾಸಿಡರ್ ಯಾವುದೇ ಕಾರಣಕ್ಕೂ ಹೆದರದೆ ಧೈರ್ಯವಾಗಿ ತೊಡಗಿಕೊಳ್ಳಿ ಎಂದು ಸಲಹೆ ಮಾಡಿದರು.

ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಸೋಂಕು ಪ್ರಮಾಣ ಹೆಚ್ಚಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದಕ್ಕೂ ಮುನ್ನವೇ ಹೆಚ್ಚಾಗಿದೆ.ಆದರೆ ಈ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂಬ ಸುಳಿವು ಇರಲಿಲ್ಲ. ಜನರು ಭಯಭೀತರಾಗುವ ಅಗತ್ಯವಿಲ್ಲ ಸರ್ಕಾರ ನಿಮ್ಮ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.

Facebook Comments