ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ದಾನವೂ ಶ್ರೇಷ್ಠ: ಹಿರೇಮಠಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜೂ. 27- ಪುರಾತನ ಕಾಲದಲ್ಲಿ ಗೋದಾನ, ಭೂ ದಾನ ಅತ್ಯಂತ ಶ್ರೇಷ್ಠ ಎಂಬ ಮಾತಿತ್ತು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಕಂಪ್ಯೂಟರ್ ದಾನ ಮಾಡುವುದು ಶ್ರೇಷ್ಠವಾಗಿದೆ ಎಂದು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಹಿರೇಮಠದಲ್ಲಿ ಪಾಲಿಕೆ ಸದಸ್ಯೆ ಗಿರಿಜ ಧನಿಯಾಕುಮಾರ್ ಅವರು ಉಚಿತವಾಗಿ ನೀಡಿದ ಲ್ಯಾಪ್‍ಟಾಪ್‍ನ್ನು ಸಿಎಸ್‍ಐ ಬಡಾವಣೆಯ ವಿದ್ಯಾರ್ಥಿನಿ ಮಧುಮತಿ ಅವರಿಗೆ ವಿತರಿಸಿ ಅವರು ಮಾತನಾಡಿದರು.

ಗೋದಾನ, ಭೂದಾನ ಮಾಡುವುದು ಶ್ರೇಷ್ಠವಾದ ಕಾರ್ಯ. ಹಾಗೆಯೇ ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಕಲಿಯುತ್ತಿರುವ ಮಕ್ಕಳಿಗೆ ಕಂಪ್ಯೂಟರ್‍ನ್ನು ಉಚಿತವಾಗಿ ನೀಡುವುದು ಸಹ ಶ್ರೇಷ್ಠವಾದ ದಾನವಾಗಿದೆ ಎಂದು ಅವರು ಪುನರುಚ್ಚರಿಸಿದರು. ರೈತನಿಗೆ ಹಸು ಕೊಟ್ಟರೆ ಬದುಕು ಕಟ್ಟಿಕೊಳ್ಳುತ್ತಾನೆ. ಭೂಮಿ ನೀಡಿದರೆ ಬದುಕು ಕಟ್ಟಿಕೊಳ್ಳುವ ಜತೆಗೆ ತನ್ನ ಪರಿವಾರವನ್ನು ಸಾಕುತ್ತಿದ್ದರು.

ಆದರೆ ಪ್ರಸುತ್ತ ದಿನಗಳಲ್ಲಿ ಸುಸಜ್ಜಿತವಾದ ಕಂಪ್ಯೂಟರ್‍ನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದರೆ ವೈಯಕ್ತಿಕ ಭವಿಷ್ಯ ಕಟ್ಟಿಕೊಳ್ಳುವ ಜತೆಗೆ ದೇಶದ ಭವಿಷ್ಯವನ್ನು ಕಟ್ಟುವಂತಹ ಕೆಲಸ ಮಾಡುತ್ತಾರೆ ಎಂದರು.  ಪ್ರತಿಭಾವಂತ ವಿದ್ಯಾರ್ಥಿಗಳ ಕೈಯಲ್ಲಿ ಕಂಪ್ಯೂಟರ್ ಇದ್ದರೆ ಜಗತ್ತು ಇದ್ದಂತೆ.

ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ. ಪ್ರಜ್ಞಾವಂತರ ಕೈಯಲ್ಲಿ ಕಂಪ್ಯೂಟರ್ ಇದ್ದರೆ ಸ್ವರ್ಗವನ್ನೇ ಸೃಷ್ಠಿಸುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿ ಮಧುಮಿತ ಉತ್ತಮ ಭವಿಷ್ಯ ರೂಪಿಸಿಕೊಂಡು ಬದುಕು ರೂಪಿಸಿಕೊಳ್ಳಲಿ, ಈಕೆಯ ಬದುಕು ಉಜ್ವಲವಾಗಲಿ ಎಂದು ಶುಭ ಹಾರೈಸಿ ಆಶೀರ್ವದಿಸಿದರು.

ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಶ್ರೀಗಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಪೋಷಕರು ಸಹ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಲು ಶ್ರಮ ವಹಿಸಬೇಕು ಎಂದರು. ಪ್ರಸ್ತುತ ದಿನಗಳಲ್ಲಿ ಆನ್‍ಲೈನ್ ಶಿಕ್ಷಣ ಪದ್ದತಿ ಜÁರಿಗೆ ಬರುತ್ತಿದೆ. ಹೀಗಾಗಿ ಬಡ ಮಕ್ಕಳಿಗೆ ಉಚಿತವಾಗಿ ಲ್ಯಾಪ್‍ಟಾಪ್‍ಗಳನ್ನು ಸರ್ಕಾರವೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಧನಿಯಾಕುಮಾರ್, ಕರಾಟೆ ಕೃಷ್ಣಪ್ಪ, ಭಾಸ್ಕರಾಚಾರ್ಯ, ಪ್ರಭಾಕರ್, ಸಮಿಉಲ್ಲಾ, ಶ್ರೀನಿವಾಸ್, ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Facebook Comments