ಕಾಲೇಜುಗಳಿಗೆ ಕಂಪ್ಯೂಟರ್ ಸರಬರಾಜು ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8-ಉನ್ನತ ಶಿಕ್ಷಣ ಇಲಾಖೆಯ ಹೆಲ್ಪ್ ಎಜುಕೇಟ್ ಉಪಕ್ರಮದಡಿ ಕಾಗ್ನಿಜೆಂಟ್ ಸಂಸ್ಥೆ ನೀಡಿರುವ ಡಿ ಬಾಂಡೆಡ್ ಕಂಪ್ಯೂಟರ್‍ಗಳನ್ನು ವಿವಿಧ ಕಾಲೇಜುಗಳಿಗೆ ಹೊತ್ತು ಸಾಗುವ ವಾಹನಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಚಾಲನೆ ನೀಡಿದರು. ವಿವಿಧ ಹಂತಗಳಲ್ಲಿ 12,500 ಡಿ ಬಾಂಡೆಡ್ ಕಂಪ್ಯೂಟರ್‍ಗಳನ್ನು ಬೆಂಗಳೂರು ವಲಯದ ವಿವಿಧ ಕಾಲೇಜುಗಳಿಗೆ ಹಂಚಿಕೆ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರದೀಪ್, ಕಾಗ್ನಿಜೆಂಟ್ ಸಂಸ್ಥೆ ನೀಡಿರುವ ಕಂಪ್ಯೂಟರ್‍ಗಳಿಗೆ ಅಗತ್ಯ ಸಾಫ್ಟ್‍ವೇರ್‍ಅನ್ನು ರೋಟರಿ ಕ್ಲಬ್ ಅಪ್‍ಡೇಟ್ ಮಾಡಿಕೊಡುತ್ತಿದೆ. ಈ ಕಂಪ್ಯೂಟರ್‍ಗಳನ್ನು ಸರ್ಕಾರಿ ಪದವಿ ಕಾಲೇಜು, ಎಂಜಿನಿಯರಿಂಗ್ ಪದವಿ ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆಯ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದರು.
ಎಲ್ಲ ಸರ್ಕಾರಿ ಪದವಿ ಎಂಜಿನಿಯರಿಂಗ್ ತಾಂತ್ರಿಕ ಕಾಲೇಜುಗಳಿಗೆ 30 ಸಾವಿರ ಕಂಪ್ಯೂಟರ್‍ಗಳು ಬೇಕಾಗಿದ್ದು, ಕಾಗ್ನಿಜೆಂಟ್ ಕಂಪೆನಿ 12,500 ಕಂಪ್ಯೂಟರ್ ನೀಡಿದ್ದು, ಮತ್ತೆ 8 ಸಾವಿರ ಕಂಪ್ಯೂಟರ್‍ಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಉಳಿದ 10 ಸಾವಿರ ಕಂಪ್ಯೂಟರ್‍ಗಳನ್ನು ಬೇರೆ ಬೇರೆ ಕಂಪೆನಿಗಳಿಂದ ಪಡೆಯಲಾಗುವುದು. ಅಧ್ಯಾಪಕರಿಗೆ ತರಬೇತಿ ನೀಡುವುದು, ವಿದ್ಯಾರ್ಥಿಗಳಿಗೆ ನೆರವಾಗುವ ಹಾಗೂ ಕಾಲೇಜುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಎಲ್ ಎಜುಕೇಟ್ ಹೆಸರಿನಲ್ಲಿ ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಟಾಸ್ಕ್‍ಪೋರ್ಸ್ ರಚಿಸಲಾಗಿದ್ದು, ಕಂಪೆನಿಗಳನ್ನು ಸಂಪರ್ಕಿಸಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕಾಲೇಜಿಗೆ ನೆರವು ನೀಡುವಂತೆ ಕೋರಲಾಗುವುದು ಎಂದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮುಖ್ಯಸ್ಥ ನಾಗೇಂದ್ರ ಪ್ರಸಾದ್, ಕಾಗ್ನಿಜೆಂಟ್ ಸಂಸ್ಥೆಯ ನಿರ್ದೇಶಕ (ಸಿಎಸ್‍ಆರ್) ದೀಪಕ್ ಪ್ರಭು, ಉಪಾಧ್ಯಕ್ಷ ಹರಿಸಿಂಗ್, ಸೆಲ್ವಿ ಮುಂತಾದವರು ಉಪಸ್ಥಿತರಿದ್ದರು.

Facebook Comments