ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.7- ಇತ್ತೀಚೆಗೆ ಅಗಲಿದ ಮಾಜಿ ಸಚಿವರು, ಶಾಸಕರು, ಸಾಹಿತಿಗಳು ಸೇರಿದಂತೆ ವಿವಿಧ ಗಣ್ಯರಿಗೆ ವಿಧಾನಸಭೆಯಲ್ಲಿ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿಗದಿತ ಸಮಯಕ್ಕೆ ಸರಿಯಾಗಿ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ವಿಶ್ವೇಶ್ವರಹೆಗಡೆ ಕಾಗೇರಿ ಅವರು ವಂದೇ ಮಾತರಂ ಮೂಲಕ ಕಲಾಪವನ್ನು ಆರಂಭಿಸಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂತಾಪ ಸೂಚನೆಯನ್ನು ಮಂಡಿಸಿದರು.

ಕೇಂದ್ರದ ಮಾಜಿ ಸಚಿವ ರಾಮ್‍ವಿಲಾಸ್ ಪಾಸ್ವಾನ್, ರಾಜ್ಯದ ಮಾಜಿ ಸಚಿವ ಡಾ.ವೈ.ನಾಗಪ್ಪ, ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಬಸವಂತ್ ಐರೋಜಿ ಪಾಟೀಲ, ಕೆ.ಮಲ್ಲಪ್ಪ, ರತನ್‍ಕುಮಾರ್ ಕಟ್ಟೆಮಾರ್, ಕೇಂದ್ರದ ಮಾಜಿ ಸಚಿವ ಜಸತ್‍ಜಿಂಗ್, ಹಿರಿಯ ವಿಮರ್ಶಕ ಡಾ.ಜಿ.ಎಸ್.ಅಮೂರ, ಸಹಕಾರಿ ಧುರೀಣ ಡಾ.ವಿ.ಎಸ್.ಸೋಂದೆ ಹಾಗೂ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಎನ್.ಮಹೇಶ್, ಯು.ಟಿ.ಖಾದರ್ ಮಾತನಾಡಿದರು.

ಸಂತಾಪ ಸೂಚನೆ ನಿರ್ಣಯದ ಮೇಲೆ ಸಭಾಧ್ಯಕ್ಷರಾದ ವಿಶ್ವೇಶ್ವರಹೆಗಡೆ ಕಾಗೇರಿ ಮಾತನಾಡಿದರು. ಈ ಗಣ್ಯರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಮೃತರ ಕುಟುಂಬಕ್ಕೆ ಭಗವಂತ ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸಿದರು. ಸಂತಾಪ ನಿರ್ಣಯದ ಮೇಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕೇಂದ್ರದ ಮಾಜಿ ಸಚಿವರಾಗಿದ್ದ ರಾಮ್‍ವಿಲಾಸ್ ಪಾಸ್ವಾನ್ ಅವರು, ದೀನ ದಲಿತರು , ಬಡವರ ಬಗ್ಗೆ ಅಪಾರವಾದ ಕಾಳಜಿಹೊಂದಿದ್ದರು. ಮಾಜಿ ಸಚಿವ ವೈ.ನಾಗಪ್ಪ ಬಸವಣ್ಣನವರ ಅನುಯಾಯಿಯಾಗಿ ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಐದು ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಮಾಜಿ ಶಾಸಕರಾಗಿದ್ದ ಬಸವಂತ ಐರೋಜಿ ಪಾಟೀಲ್, ಕೆ.ಮಲ್ಲಪ್ಪ , ರತನ್‍ಕುಮಾರ್ ಕಟ್ಟೆಮಾರ್ ಅವರುಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವರಾಗಿದ್ದ ಜಸತ್ ಸಿಂಗ್ ಅವರು ನಾಲ್ಕು ಬಾರಿ ರಾಜ್ಯಸಭೆ ಸದಸ್ಯರು, ನಾಲ್ಕು ಬಾರಿ ಲೋಕಸಭೆ ಸದಸ್ಯರಾಗಿ ಹಣಕಾಸು, ವಿದೇಶಾಂಗ, ರಕ್ಷಣೆ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದರು. ಕ್ರೀಡಾ ಕ್ಷೇತ್ರದಲ್ಲೂ ಕೂಡ ವಿಶೇಷ ಆಸಕ್ತಿ ಹೊಂದಿ ಸಂಸದೀಯ ವ್ಯವಸ್ಥೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು.

ಕನ್ನಡ ಸಾಹಿತ್ಯದ ವಿಮರ್ಶಕರಾಗಿದ್ದ ಡಾ.ಜಿ.ಎಸ್.ಅಮೂರ ಅವರು ಕನ್ನಡ ಸಾಹಿತ್ಯವನ್ನು ಆಂಗ್ಲ ಭಾಷೆಗೆ ಪರಿಚಯಿಸುವ ಮೂಲಕ ಕನ್ನಡ ಭಾಷೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟರು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ 50 ಕೃತಿಗಳನ್ನು ರಚಿಸಿ ಪಂಪ , ರಾಜ್ಯೋತ್ಸವ, ಕೇಂದ್ರ ಸಾಹಿತ್ಯ ಅಕಾಡೆಮಿ, ಅಂಬಿಕಾತನಯ ದತ್ತ, ಮಾಸ್ತಿ, ಆಳ್ವಾಸ್ ನುಡಿಸಿರಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದುಕೊಂಡಾಡಿದರು.

ಶಿರಸಿ ಅರ್ಬನ್ ಬ್ಯಾಂಕ್‍ನ ನಿರ್ದೇಶಕರಾಗಿ 65 ವರ್ಷಗಳಕಾಲ ಸೇವೆ ಸಲ್ಲಿಸಿದ ಡಾ.ವಿ.ಎಸ್.ಸೋಂದೆ ಸಹಕಾರಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪತ್ರಕರ್ತರಾಗಿದ್ದ ರವಿಬೆಳೆಗೆರೆ ಅವರು ಸಿನಿಮಾ ವಿಮರ್ಶಕರಾಗಿ, ಬರಹಗಾರರಾಗಿ, ಸಂಭಾಷಣಕಾರರಾಗಿ ಪತ್ರಿಕೋದ್ಯಮಕ್ಕೆ ತಮ್ಮದೇ ಆದ ಕೊಡುಗಡೆ ನೀಡಿದ್ದಾರೆ ಎಂದು ಹೇಳಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೇಂದ್ರದ ಮಾಜಿ ಸಚವರಾಗಿದ್ದ ರಾಮ್‍ವಿಲಾಸ್‍ಪಾಸ್ವಾನ್ ಅವರು ಮಂಡಲ್ ಆಯೋಗದ ವರದಿಯನ್ನು ಅನುಷ್ಠಾನ ಗೊಳಿಸುವಲ್ಲಿ ಆತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಈ ವರದಿಯನ್ನು ಅನುಷ್ಠಾನ ಮಾಡಬಾರದು ಎಂದು ಕೆಲವರು ವಿರೋಧಿಸಿದಾಗ ಮಾಜಿ ಮುಖ್ಯಮಂತ್ರಿಗಳಾದ ಲಾಲೂಪ್ರಸಾದ್‍ಯಾದವ್, ಈಗಿನ ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್, ಶರದ್ ಯಾದವ್ ಸೇರಿದಂತೆ ಅನೇಕರ ಜತೆ ಹೋರಾಟ ಮಾಡಿದ್ದರು. ಒಂದು ರಾಷ್ಟ್ರ ಹಾಗೂ ಒಂದು ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದರು ಎಂದರು. ದಲಿತರು ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಿದ ಅಪರೂಪದ ರಾಜಕಾರಣಿ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಗೋವಿಂದಕಾರಜೋಳ, ಸಚಿವ ಜೆ.ಸಿ.ಮಾಧುಸ್ವಾಮಿ, ಸದಸ್ಯರಾದ ಎನ್.ಮಹೇಶ್, ಎಚ್.ಕೆ.ಕುಮಾರಸ್ವಾಮಿ, ಯು.ಟಿ.ಖಾದರ್ ಮಾತನಾಡಿದರು. ಮೃತರ ಗೌರವಾರ್ಥವಾಗಿ ಸದನದ ಸದಸ್ಯರೆಲ್ಲರೂ ಎದ್ದುನಿಂತು ಗೌರವ ಸಲ್ಲಿಸಿದರು.

Facebook Comments