ಧ್ವನಿ ಮತದ ಮೂಲಕ ಅವಿಶ್ವಾಸ ನಿರ್ಣಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.26- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪ್ರಸ್ತಾವದ ಚರ್ಚೆಯ ನಂತರ ಧ್ವನಿ ಮತದ ಮೂಲಕ ನಿರ್ಧಾರ ಕೈಗೊಳ್ಳಲು ವಿಧಾನ ಸಭೆಯಲ್ಲಿ ತೀರ್ಮಾನಿಸಲಾಯಿತು.

ರಾಜ್ಯದಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿರುವ ಶಾಸಕರನ್ನು ಸದನಕ್ಕೆ ಕರೆಸಲು ಸಾಧ್ಯವಿಲ್ಲದಿರುವ ಹಿನ್ನೆಲೆಯಲ್ಲಿ ಆಡಳಿತ ಮತ್ತು ಕಾಂಗ್ರೆಸ್ ಈ ನಿರ್ಣಯಕ್ಕೆ ಬಂದಿದೆ.

ಅವಿಶ್ವಾಸ ನಿರ್ಣಯದ ಚರ್ಚೆಯ ನಂತರ ಮತ ವಿಭಜನೆ ಮಾಡುವ ಬದಲು ಧ್ವನಿ ಮತದ ಮೂಲಕ ನಿಷ್ಪಕ್ಷಪಾತವಾಗಿ ತೀರ್ಮಾನ ಮಾಡಲು ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ಕೋರಿದೆ. ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಸದನದ ಕಾರ್ಯಕಲಾಪಗಳ ತೀರ್ಮಾನದಂತೆ ಅಧಿವೇಶನದ ಕೊನೆಯ ದಿನ ನಾಲ್ಕು ಪ್ರಮುಖ ವಿಧೇಯಕಗಳ ಚರ್ಚೆಯಾಗಿ ಅಂಗೀಕಾರವಾಗಬೇಕಿದೆ.

ನಿಯಮ 69ರಡಿ ಸಾರ್ವಜನಿಕ ಮಹತ್ವದ ವಿಚಾರಗಳಿವೆ, ಗಮನ ಸೆಳೆಯುವ ಸೂಚನೆಗಳಿವೆ. ಅಲ್ಲದೇ ವಿರೋಧಿ ಪಕ್ಷದ ನಾಯಕರು ಮತ್ತಿತಕು ಪಾಸಿಟಿವ್ ಬಂದವರಿಗೆ ಸದನ ಪ್ರವೇಶಿಸಲು ಅವಕಾಶವಿಲ್ಲ. ಪಿಪಿಇ ಕಿಟ್ ಹಾಕಿಕೊಂಡು ಬರುವ ಮಾಹಿತಿ ಇದೆ. ಅದಕ್ಕೂ ಅವಕಾಶವಿಲ್ಲ. 25ಕ್ಕೂ ಹೆಚ್ಚು ಶಾಸಕರು 6-7 ಸಚಿವರಿಗೆ ಪಾಸಿಟಿವ್ ಬಂದಿದೆ. ಸಾಮಾಜಿಕ ಜವಾಬ್ದಾರಿ ಇದೆ. ಸದನದ ಘನತೆ, ಗೌರವ ಹೆಚ್ಚಿಸುವ ರೀತಿಯಲ್ಲಿ ತೀರ್ಮಾನವಾಗಬೇಕು ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ ನಾವು ನಮ್ಮ ಸಂಖ್ಯೆಯನ್ನು ಸದನದಲ್ಲಿ ನಿರೂಪಿಸಬೇಕು. ಕೊರೊನಾ ಪಾಸಿಟಿವ್ ಬಂದ ಸದಸ್ಯರು ಪಿಪಿಇ ಕಿಟ್ ಹಾಕಿಸಿಕೊಂಡು ಸದನಕ್ಕೆ ಬರಲಾಗದು ಎಂದು ಹೇಳಿದ್ದೀರಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯಾಗಲಿ ಚರ್ಚೆ ನಂತರ ಮತ ವಿಭಜನೆ ಮಾಡದೇ ಧ್ವನಿ ಮತದ ಆಧಾರದ ಮೇಲೆ ನಿರ್ಧಾರ ಮಾಡಬಹುದು.

ಇಲ್ಲದಿದ್ದರೆ ಸದಸ್ಯನನ್ನು ಕರೆಸುವ ತೀರ್ಮಾನ ಮಾಡಬೇಕಾಗುತ್ತದೆ ಎಂದರು. ಸಿದ್ದರಾಮಯ್ಯ ಮಾತನಾಡಿ ರಾಜ್ಯದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಹಲವು ಸಚಿವರು, ಶಾಸಕರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.

ಈಗಾಗಲೇ ಈ ಸದನದ ಸದಸ್ಯರು, ಲೋಕಸಭೆಯ ಹಾಗೂ ರಾಜ್ಯ ಸಭೆ ಇಬ್ಬರು ಸದಸ್ಯರು ಮರಣ ಹೊಂದಿದ್ದಾರೆ. ನಮಗೂ ಸಾಮಾಜಿಕ ಜವಾಬ್ದಾರಿ ಇದೆ.  ಅವಿಶ್ವಾಸ ನಿರ್ಣಯದ ಚರ್ಚೆ ನಡೆಯಲಿ. ಈ ಹಿಂದೆಯೂ ಮತ ವಿಭಜನೆ ನಡೆದಿದೆ. ಒಮ್ಮೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಅವಿಶ್ವಾಸ ನಿರ್ಣಯ ಮಂಡಿಸಿದೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ವಿಶ್ವಾಸ ಮತ ಯಾಚನೆ ಮಾಡಿದ್ದಾರೆ. ಈಗ ನಾವು ಅವಿಶ್ವಾಸ ನಿರ್ಣಯವನ್ನು ಸರ್ಕಾರದ ವಿರುದ್ಧ ತಂದಿದ್ದೇವೆ.

ಮಾನವೀಯತೆಯಿಂದ ಮತ ವಿಭಜನೆ ಬದಲು ಧ್ವನಿ ಮತದ ಮೂಲಕ ನಿಷ್ಪಕ್ಷಪಾತವಾಗಿ ನಿರ್ಧಾರ ಮಾಡಿ ಎಂದು ಮನವಿ ಮಾಡಿದರು. ಪಿಪಿಇ ಕಿಟ್ ಹಾಕಿಕೊಂಡು ಪಾಸಿಟಿವ್ ಬಂದ ಸದಸ್ಯರು ಸದನಕ್ಕೆ ಬರುವುದು ಬೇಡ. ಸಾಮಾಜಿಕ ಜವಾಬ್ದಾರಿ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಹಟ ಹಿಡಿಯುವುದಿಲ್ಲ. ಮನುಷ್ಯತ್ವ ಮುಖ್ಯ ಎಂದ ಅವರು ನಿಯಮ 69ರಡಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಬಗ್ಗೆ ನೋಟಿಸ್ ವಿಚಾರವನ್ನು ಸಹ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲೇ ಚರ್ಚೆ ಮಾಡಲಾಗುವುದು, ಇದು ಆತುರವಾಗಿ ಮಾಡುವುದಲ್ಲ. ಆರು ತಿಂಗಳಿಗೊಮ್ಮೆ ಸಿಗುವ ಅವಕಾಶ ಹೆಚ್ಚಾಗಿದೆ ಎಂದರು.

ನಂತರ ಸಭಾಧ್ಯಕ್ಷರು ಮಾತನಾಡಿ ಆಡಳಿತ- ಪ್ರತಿಪಕ್ಷ ನಿರ್ಧಾರ ಸಂಸದೀಯ ಪ್ರಬುದ್ಧತೆಯ ನಿದರ್ಶನವಾಗಿದೆ. ಮಾನವೀಯತೆ ಸಾಮಾಜಿಕ ಜವಾಬ್ದಾರಿ ಮುಖ್ಯ ಎಂಬುದನ್ನು ತೋರಿಸಿದಂತಾಗಿದೆ. ರಾಜ್ಯದ ಹಿತ ಕಾಪಾಡಲು ಇದರಿಂದ ಸಾಧ್ಯ. ರಾಜಕಾರಣ ಇದ್ದೇ ಇರುತ್ತದೆ. ರಾಜಕೀಯಕ್ಕಿಂತ ರಾಜ್ಯ ಹಿತವೇ ಮುಖ್ಯ ಎಂದರು.

Facebook Comments