ನಾಯಕತ್ವದ ಕೊರತೆಯಿಂದ ಅಂತಂತ್ರವಾದ ಕಾಂಗ್ರೆಸ್..! ಇನ್ನೂ ಆಗಿಲ್ಲ ವಿಪಕ್ಷ ನಾಯಕನ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.16-ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ಅಧಿಕೃತವಾಗಿ ಘೋಷಣೆಯಾಗದೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‍ನಲ್ಲಿ ನಾಯಕತ್ವ ಇಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಡಿ.ಕೆ.ಶಿವಕುಮಾರ್ ಅವರ ಬಂಧನ, ವಿಚಾರಣೆ, ಮತ್ತೊಂದೆಡೆ ರಾಜ್ಯದಲ್ಲಿ ನೆರೆ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ಹೈಕಮಾಂಡ್ ವಿಪಕ್ಷ ನಾಯಕ ಆಯ್ಕೆಯನ್ನು ಘೋಷಿಸಲು ಹಿಂದೇಟು ಹಾಕುತ್ತಿದೆ.

ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ತಾವೇ ವಿರೋಧ ಪಕ್ಷದ ನಾಯಕನಾಗಿ ಮುಂದುವರೆಯಬೇಕೆಂಬ ನಿಟ್ಟಿನಲ್ಲಿ ಹಲವಾರು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಆದರೆ ಅದಕ್ಕೆ ಪಕ್ಷದ ಮೂಲ ನಿವಾಸಿಗಳು ಅಡ್ಡಗಾಲು ಹಾಕಿದ್ದು, ಎಚ್.ಕೆ.ಪಾಟೀಲ್ ಅವರಿಗೆ ಮಣೆ ಹಾಕಬೇಕೆಂದು ಒತ್ತಡ ಹೇರುತ್ತಿದ್ದಾರೆ.

ಕೃಷ್ಣಭೈರೇಗೌಡ, ರಮೇಶ್‍ಕುಮಾರ್, ಪರಮೇಶ್ವರ್, ಎಂ.ಬಿ.ಪಾಟೀಲ್ ಸೇರಿದಂತೆ ಹಲವಾರು ಮಂದಿ ವಿಪಕ್ಷ ನಾಯಕನ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದು, ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಇತ್ತೀಚೆಗೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ನಾಲ್ಕು ದಿನ ಕಾದರೂ ಸೋನಿಯಾಗಾಂಧಿಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಆದಾಯ ತೆರಿಗೆ ದಾಳಿಗೊಳಗಾಗಿ ಈಗ ಜಾರಿ ನಿರ್ದೇಶನಾಲಯದ ಕಾನೂನು ಹಿಡಿತಕ್ಕೆ ಸಿಲುಕಿ ವಿಚಾರಣೆ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲು ಹೈಕಮಾಂಡ್ ಒಲವು ಹೊಂದಿದೆ.

ಒಮ್ಮೆ ಅಧಿಕೃತ ಘೋಷಣೆ ಮಾಡಿದರೆ ಮತ್ತೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರ ಜಾಮೀನಿನ ಪ್ರಕರಣ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಿ ನಂತರ ತೀರ್ಮಾನ ಪ್ರಕಟಿಸಲು ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಸಿದ್ದರಾಮಯ್ಯ ಮುಂದಾಗಿದ್ದು, ಸೆ.18 ರಂದು ಬೆಳಗ್ಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ನೆರೆ ಹಾಗೂ ಬರ ಪರಿಸ್ಥಿತಿಯ ಕುರಿತು ಚರ್ಚೆ ಮಾಡಲು ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ ಆದರೂ, ಇದು ಪರೋಕ್ಷವಾಗಿ ಬಲಾಬಲ ಪರೀಕ್ಷೆಗೆ ಕರೆದಿರುವ ಸಭೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಸುಮಾರು 15 ದಿನಗಳ ಕಾಲ ಸಚಿವ ಸಂಪುಟ ವಿಸ್ತರಣೆ ಮಾಡದೆ, ಖಾತೆ ಹಂಚಿಕೆ ಮಾಡದೆ ವಿಳಂಬ ಮಾಡಲಾಯಿತು. ಅದನ್ನು ಹಾದಿಬೀದಿಯಲ್ಲಿ ಪ್ರಶ್ನೆ ಮಾಡಿದ ಕಾಂಗ್ರೆಸ್ ಬಿಜೆಪಿಯನ್ನು ಲೇವಡಿ ಮಾಡಿತ್ತು. ಆದರೆ ಈಗ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗದೆ ಎರಡು ತಿಂಗಳಾದರೂ ಮೀನಾಮೇಷ ಎಣಿಸುತ್ತಿರುವುದು ಬಿಜೆಪಿಗೆ ಹೊಸ ಅಸ್ತ್ರ ಕೊಟ್ಟಂತಾಗಿದೆ.

Facebook Comments