ಬಿಜೆಪಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಿದ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22-ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದುಬಾರಿ ದಂಡವನ್ನು ಉಪಚುನಾವಣೆ ಘೋಷಣೆಯಾದ ನಂತರ ಕಡಿಮೆ ಮಾಡುವ ಮೂಲಕ ಬಿಜೆಪಿ ಸರ್ಕಾರ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರ ನಿಯೋಗ ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಸೆ.3 ರಿಂದ ಕರ್ನಾಟಕದಲ್ಲಿ ಜಾರಿಗೆ ಬಂದಿದ್ದ ದುಬಾರಿ ದಂಡದ ನಿರ್ಧಾರವನ್ನು ಸಾರ್ವಜನಿಕರು ಮೊದಲಿನಿಂದಲೂ ವಿರೋಧಿಸುತ್ತಿದ್ದರು.

ಕೊನೆ ಕ್ಷಣದವರೆಗೂ ಯಾವುದೇ ನಿರ್ಧಾರ ಕೈಗೊಳ್ಳದ ರಾಜ್ಯಸರ್ಕಾರ, ಉಪಚುನಾವಣೆ ಘೋಷಣೆಯಾದ ನಂತರ ಅಧಿಕೃತ ಆದೇಶ ಹೊರಡಿಸಿದೆ. ಇದು ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಜೊತೆಗೆ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಉಪಚುನಾವಣೆ ಘೋಷಣೆಯಾದ ನಂತರ ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನರ್ಹ ಶಾಸಕರ ಜೊತೆ ಸಭೆ ನಡೆಸಲು ಅರಣ್ಯ ಭವನವನ್ನು ಬಳಸಿಕೊಂಡಿದ್ದಾರೆ.

ನಿನ್ನೆ ಮಧ್ಯಾಹ್ನದ ನಂತರ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯವರು ಅನರ್ಹ ಶಾಸಕರ ಜೊತೆ ಅರಣ್ಯ ಭವನದಲ್ಲಿ ಚುನಾವಣಾ ರಾಜಕೀಯ ಕುರಿತಂತೆ ಚರ್ಚೆ ಮಾಡಿದ್ದಾರೆ. ಇದು ರಾಜ್ಯ ಸರ್ಕಾರ ಆಡಳಿತಯಂತ್ರ ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಉಗ್ರಪ್ಪ, ಪ್ರಕಾಶ್ ರಥೋಡ್ ಮತ್ತಿತರರಿದ್ದ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಅವರಿಗೆ ದೂರು ನೀಡಿದೆ.

Facebook Comments