ದೇಶದ ಆರ್ಥಿಕತೆ ಅಳೆಯಲು ಸಿನಿಮಾ-ಮದುವೆ ಮಾನದಂಡವೇ..? “: ಕಾಂಗ್ರೆಸ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.16-ರಾಜ್ಯದಲ್ಲಿ ಉಪಚುನಾವಣೆ ಎದುರಾಗುತ್ತಿದ್ದಂತೆ ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿರುವ ಕಾಂಗ್ರೆಸ್, ಸರಣಿ ಟ್ವೀಟ್‍ಗಳ ಮೂಲಕ ಹದಗೆಟ್ಟ ಆರ್ಥಿಕತೆ ಬಗ್ಗೆ ಸಮಗ್ರ ವಿವರಣೆ ನೀಡುವ ಪ್ರಯತ್ನ ಮಾಡಿದೆ. ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಉದ್ಯೋಗ ಕಡಿತವಾಗುತ್ತಿದೆ. ರಫ್ತು-ಆಮದು ಕುಸಿಯುತ್ತಿದೆ.

ಉತ್ಪಾದನೆ ಸಂಕಷ್ಟದಲ್ಲಿದೆ. ಕೃಷಿ ವಲಯ ಕೂಡ ಸೊರಗುತ್ತಿದೆ. ಹೀಗಿದ್ದರೂ ಬಿಜೆಪಿ ನಾಯಕರು ಆರ್ಥಿಕತೆ ಬಗ್ಗೆ ಹಗುರವಾದ ಮಾತುಗಳನ್ನಾಡುತ್ತಿದ್ದಾರೆ. ದೇಶವನ್ನು ಅವರು ಇನ್ನೆಷ್ಟು ಹಾಳುಮಾಡಬೇಕೆಂದಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಸಿನಿಮಾ ಮಂದಿರಗಳು ತುಂಬಿವೆ ಹಾಗಾಗಿ ಆರ್ಥಿಕತೆ ಕುಸಿದಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಮದುವೆಗಳು ನಡೆಯುತ್ತಿವೆ, ರೈಲುಗಳು ತುಂಬಿ ತುಳುಕುತ್ತಿವೆ. ಹಾಗಾಗಿ ಆರ್ಥಿಕತೆ ಕುಸಿದಿಲ್ಲ ಎಂದು ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. ಸಿನಿಮಾ ಮತ್ತು ಮದುವೆಗಳು ದೇಶದ ಆರ್ಥಿಕತೆ ಅಳೆಯುವ ಮಾನದಂಡ ಎಂದು ಕಾಂಗ್ರೆಸ್, ಬಿಜೆಪಿಗೆ ಟಾಂಗ್ ನೀಡಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಕಾರ್ಪೊರೇಟ್ ತೆರಿಗೆಯನ್ನು ಕಡಿತ ಮಾಡಿದೆ. ಆದರೆ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಭಾರತೀಯ ಕಂಪನಿಗಳ ಆದಾಯ ಸೆಪ್ಟೆಂಬರ್‍ನಿಂದೀಚೆಗೆ ಹಂತ ಹಂತವಾಗಿ ಕುಸಿಯುತ್ತಿದೆ. ಉದ್ಯೋಗಾವಕಾಶಗಳು ಹೆಚ್ಚಾದರೆ ಬಹುಶಃ ಆರ್ಥಿಕತೆ ಸುಧಾರಿಸಬಹುದು ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ವ್ಯಕ್ತಿಗತವಾಗಿ ಮಾಡುವ ಖರ್ಚಿನಲ್ಲಿ ನಾಲ್ಕು ದಶಕಗಳ ನಂತರ ಭಾರೀ ಕುಸಿತ ಕಂಡಿದೆ. 2012-13ರಲ್ಲಿ ಪ್ರತಿಯೊಬ್ಬ ವ್ಯಕ್ತಿ ತಿಂಗಳಿಗೆ 1501 ರೂ. ಖರ್ಚು ಮಾಡುತ್ತಿದ್ದ. ಆದರೆ ಅದು 2017-18ರ ವೇಳೆಗೆ 1446 ರೂ. ಗೆ ಕುಸಿದಿದೆ. ಇದು ಶೇ.3.7ರ ದರದಲ್ಲಿ ಇಳಿಮುಖವಾಗುತ್ತಿದೆ. ಜನರ ಬಳಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಣವಿಲ್ಲದಂತಾಗಿದೆ ಎಂದು ಹೇಳಿರುವ ಕಾಂಗ್ರೆಸ್ ಕೇಂದ್ರ ಆರ್ಥಿಕ ಸಚಿವರೇ ಎಚ್ಚರಗೊಳ್ಳಿ ಎಂದು ಕುಟುಕಿದೆ.

ಐದು ಟ್ರಿಲಿಯನ್ ಆರ್ಥಿಕತೆ, ರೈತರ ಆದಾಯ ದ್ವಿಗುಣ ಎಂದೆಲ್ಲ ಬೊಗಳೆ ಬಿಟ್ಟ ಕೇಂದ್ರ ಸರ್ಕಾರ, ಜಿಎಸ್‍ಟಿ, ನೋಟು ರದ್ಧತಿ ಮೂಲಕ ಆರ್ಥಿಕತೆಗೆ ಭಾರೀ ಪೆಟ್ಟು ನೀಡಿದೆ. ರೂಪಾಯಿ ಮೌಲ್ಯ ಪಾತಾಳಕ್ಕೆ ಹೋಗಿದೆ, ನಿರುದ್ಯೋಗ ಹೆಚ್ಚಾಗಿದೆ. ಇಡೀ ಭಾರತ ಸಂಕಷ್ಟದಲ್ಲಿದೆ.

ಭಾರತದ ರಫ್ತು ಸಾಮಥ್ರ್ಯ ಶೇ.1.1ಕ್ಕೆ ಕುಸಿದಿದ್ದರೆ, ಆಮದು ಪ್ರಮಾಣ ಶೇ.16.3ರಷ್ಟು ಕುಸಿದಿದೆ. ಇದರಿಂದ ಉದ್ಯಮ ವಲಯಕ್ಕೆ ಭಾರೀ ಸಂಕಷ್ಟ ಎದುರಾಗಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.

Facebook Comments