ದೆಹಲಿ ಹಿಂಸಾಚಾರ : ನಾಳೆ ಕಾಂಗ್ರೆಸ್ ರಾಷ್ಟ್ರಪತಿ ಭವನ್ ಚಲೋ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಫೆ.26-ದೆಹಲಿಯಲ್ಲಿ ಭುಗಿಲೆದ್ದಿರುವ ವ್ಯಾಪಕ ಹಿಂಸಾಚಾರ ಮತ್ತು ಸಾವುನೋವು ಹಿನ್ನೆಲೆಯಲ್ಲಿ ನಾಳೆ ಕಾಂಗ್ರೆಸ್ ರಾಷ್ಟ್ರಪತಿ ಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜಧಾನಿಯಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಿದೆ.  ದೆಹಲಿಯಲ್ಲಿಂದು ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ(ಸಿಡಬ್ಲ್ಯೂಸಿ) ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಮುಖಂಡರಾದ ಎ.ಕೆ.ಅಂತೋಣಿ, ಗುಲಾಂನಬಿ ಅಜಾದ್, ಪಿ.ಚಿದಂಬರಂ, ಪ್ರಿಯಾಂಕಗಾಂಧಿ ವಾದ್ರಾ ಮೊದಲಾದವರು ಪಾಲ್ಗೊಂಡಿದ್ದರು. ವಿದೇಶಕ್ಕೆ ತೆರಳಿರುವ ಕಾರಣ ರಾಹುಲ್ ಗಾಂಧಿ ಸಭೆಗೆ ಹಾಜರಾಗಿರಲಿಲ್ಲ.

ಸಭೆಯ ನಂತರ ಮಾತನಾಡಿದ ಸೋನಿಯಾ ಗಾಂಧಿ, ದೆಹಲಿಯಲ್ಲಿ ಹಿಂಸಾಚಾರ ಭುಗಿಲೇಳಲು ಬಿಜೆಪಿ ನಾಯಕರ ಪ್ರಚೋದನಾಕಾರಿ ಭಾಷಣವೇ ಕಾರಣ. ರಾಜಧಾನಿಯಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ನಾವು ಮನವಿ ಮಾಡಲಿದ್ದೇವೆ ಎಂದರು.

Facebook Comments