ಅಧಿವೇಶನದಲ್ಲಿ ಅಬ್ಬರಿಸಲು ಸಿದ್ಧರಾದ ಕಾಂಗ್ರೆಸಿಗರಿಗೆ ಕೊರೋನಾ ಭಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಶಾಸಕ ಎನ್.ಎ.ಹ್ಯಾರಿಸ್‍ಗೆ ಕೊರೊನಾ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಬಹಳಷ್ಟು ನಾಯಕರು ಕ್ವಾರಂಟೈನ್‍ಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಪರೀಕ್ಷೆ ಮಾಡಿಸಿದ್ದ ಎನ್.ಎ.ಹ್ಯಾರಿಸ್ ಫಲಿತಾಂಶ ಬರಲು ವಿಳಂಬವಾದ್ದರಿಂದ ನೇರವಾಗಿ ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದರು.

ಮಧ್ಯಾಹ್ನ ಊಟಕ್ಕೆ ಕುಳಿತ ಸಂದರ್ಭದಲ್ಲಿ ಹ್ಯಾರಿಸ್ ಅವರ ಮೊಬೈಲ್‍ಗೆ ಮೆಸೇಜ್ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಹ್ಯಾರಿಸ್ ಅವರು ತಕ್ಷಣ ಎದ್ದು ಹೋಗಿದ್ದಾರೆ. ಆದರೆ, ಅವರ ಜತೆ ಊಟಕ್ಕೆ ಕುಳಿತಿದ್ದ ಮತ್ತು ನೇರವಾಗಿ ಸಂಪರ್ಕದಲ್ಲಿದ್ದ ಬಹಳಷ್ಟು ಮಂದಿಗೆ ತೊಂದರೆಯಾಗಿದೆ. ಪ್ರಿಯಾಂಕ್ ಖರ್ಗೆ ಸೇರಿದಂತೆ ಬಹಳಷ್ಟು ಮಂದಿ ಹ್ಯಾರಿಸ್ ಅವರ ಜತೆ ಕೂತು ಊಟ ಮಾಡುತ್ತಿದ್ದರು.

ಗುಲ್ಬಾರ್ಗದಲ್ಲಿ ಇಂದು ನಡೆದೆ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಿದ್ದರು. ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್‍ನ ಬಹಳಷ್ಟು ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಮಾನದ ಟಿಕೆಟ್ ಬುಕ್ ಸಹ ಮಾಡಿಸಿದ್ದರು. ಆದರೆ, ಹ್ಯಾರಿಸ್ ಸಂಪರ್ಕದಿಂದಾಗಿ ಮಧ್ಯಾಹ್ನದ ನಂತರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿಕೊಂಡು ಮನೆಯಲ್ಲಿ ಸೆಲ್ಫ್‍ಕ್ವಾರಂಟೈನ್ ಆಗಿದ್ದಾರೆ.

ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಕೂಡ ಆತಂಕಕ್ಕೆ ಒಳಗಾಗಿದ್ದು, ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಈಗಾಗಲೇ ಕೆಲವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಫಲಿತಾಂಶಕ್ಕಾಗಿ ಆತಂಕದಿಂದ ಕಾಯುತ್ತಿದ್ದಾರೆ. ಒಂದು ವೇಳೆ ಕೊರೊನಾ ಸೋಂಕು ತಗುಲಿದ್ದೇ ಆದರೆ ಸೆ.21ರಿಂದ ನಡೆಯುವ ವಿಧಾನಮಂಡಲ ಅಧಿವೇಶನಕ್ಕೆ ಗೈರು ಹಾಜರಾಗಬೇಕಾಗುತ್ತದೆ.

ರಾಜ್ಯ ಸರ್ಕಾರದ ವೈಫಲ್ಯ ಮತ್ತು ಹಗರಣಗಳ ವಿರುದ್ಧ ಕೆಂಡಾ ಕಾರಲು ಶಸ್ತ್ರಾಸ್ತ್ರಗಳನ್ನು ಸಿದ್ಧಮಾಡಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಕೋವಿಡ್ ಸೋಂಕಿನ ಭೂತ ಕಾಡುತ್ತಿದೆ. ಒಂದು ವೇಳೆ ಸೋಂಕು ಖಚಿತವಾದರೆ ಅಧಿವೇಶನದಿಂದ ದೂರ ಉಳಿಯಬೇಕಾಗುತ್ತದೆ. ಕಲಾಪ ಖಾಲಿ ಖಾಲಿಯಾಗಿ ನಡೆಯುವ ಸಾಧ್ಯತೆ ಇದೆ.

ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಈಗಾಗಲೇ ಒಮ್ಮೆ ಸೋಂಕಿಗೆ ಸಿಲುಕಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೈರಾಣಾಗಿದ್ದಾರೆ. ಮತ್ತೊಮ್ಮೆ ಸಿಲುಕಿದರೆ ಎಂಬ ಆತಂಕವೂ ಇವರನ್ನು ಕಾಡುತ್ತಿದೆ. ಒಟ್ಟಿನಲ್ಲಿ ವಿಧಾನಸಭೆ ಅಧಿವೇಶನಕ್ಕಾಗಿ ಪೂರ್ವ ತಯಾರಿ ನಡೆಸಿದ ಕಾಂಗ್ರೆಸಿಗರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.

Facebook Comments