ಮೈತ್ರಿ ಸಹವಾಸ ಬಿಟ್ಟು ಸ್ವತಂತ್ರ್ಯವಾಗಿ ಸಾಮರ್ಥ್ಯ ಪರೀಕ್ಷೆಗೆ ಮುಂದಾಗಿರುವ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.20- ಹೊಂದಾಣಿಕೆ ಮತ್ತು ಮೈತ್ರಿ ರಾಜಕಾರಣದಿಂದ ದೂರ ಸರಿದಿರುವ ಕಾಂಗ್ರೆಸ್ ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿ ತನ್ನ ಸಾಮಥ್ರ್ಯ ಪರೀಕ್ಷೆಗೆ ಮುಂದಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎಲ್ಲಾ ಪಕ್ಷಗಳಿಂದ ದೂರ ಉಳಿದು ಸ್ವತಂತ್ರವಾಗಿ ಚುನಾವಣಾ ಕಣಕ್ಕೆ ದುಮುಕಲಿದೆ.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಸ್ವ ಸಾಮಥ್ರ್ಯದ ಮೇಲೆ ನಂಬಿಕೆ ಕಳೆದುಕೊಂಡಿದೆ. ಹಾಗಾಗಿ ಪ್ರತಿ ಚುನಾವಣೆಯಲ್ಲೂ ಜಾತ್ಯಾತೀತ ಮತಗಳ ಧೃವೀಕರಣದ ಹೆಸರಿನಲ್ಲಿ ಹೊಂದಾಣಿಕೆ ರಾಜಕಾರಣ ಮಾಡುತ್ತಾ ಬಂದಿದೆ.

ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಏಕಾಏಕಿ ಹೈಕಮಾಂಡ್ ಜೆಡಿಎಸ್ ಜತೆ ಚುನಾವಣಾ ಪೂರ್ವ ಮೈತ್ರಿ ಘೋಷಣೆ ಮಾಡಿತ್ತು. ಆ ಸಂದರ್ಭದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅದನ್ನು ಬಲವಾಗಿ ವಿರೋಧಿಸಿದ್ದರು.

ಆದರೆ, ಅವರದು ಒಂಟಿ ದನಿಯಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಏರ್ಪಟ್ಟಿತ್ತು. ಫಲಿತಾಂಶ ಬಂದಾಗ ಮೈತ್ರಿ ರಾಜಕಾರಣಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಕಾಂಗ್ರೆಸ್-ಜೆಡಿಎಸ್ ತಲಾ ಒಂದು ಸ್ಥಾನ ಗೆದ್ದಿತು. ಅನಂತರ ಮೈತ್ರಿ ರಾಜಕಾರಣ ಇತರ ಪಕ್ಷಗಳಿಗಿಂತಲೂ ಕಾಂಗ್ರೆಸ್‍ಗೆ ಹಾನಿ ಎಂಬುದನ್ನು ಅರ್ಥ ಮಾಡಿಕೊಂಡ ಹೈಕಮಾಂಡ್ ನಾಯಕರು, ರಾಜಕೀಯ ಹೊಂದಾಣಿಕೆ ವಿಷಯದಲ್ಲಿ ಸ್ಥಳೀಯ ನಾಯಕರ ನಿರ್ಧಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ವಿಧಾನಪರಿಷತ್‍ನ ನಾಲ್ಕು ಸ್ಥಾನಗಳು ಹಾಗೂ ವಿಧಾನಸಭೆಯ ಎರಡು ಕ್ಷೇತ್ರಗಳು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ಪಕ್ಷಗಳ ಜತೆಯೂ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಕಣಕ್ಕಿಳಿದಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಾಗ ಕಾಂಗ್ರೆಸ್ ನಿರಂತರವಾಗಿ ಗಳಿಸುವ ಸರಿಸುಮಾರು ಶೇ.38ರಷ್ಟು ಮತಗಳ ಜತೆ ಜೆಡಿಎಸ್ ಪಡೆಯುವ ಶೇ.18ರಷ್ಟು ಮತ ಸೇರ್ಪಡೆಯಾಗಿ ಸರಿಸುಮಾರು ಶೇ.40ರಷ್ಟು ಮತಗಳಿಕೆ ಮೂಲಕ ಭರ್ಜರಿ ಗೆಲುವು ಸಾಧಿಸಬಹುದೆಂದು ಲೆಕ್ಕಾಚಾರ ಹಾಕಲಾಗಿತ್ತು.

2018ರ ವಿಧಾನಸಭೆ ಚುನಾವಣೆಯಲ್ಲಿ ಇದೇ ತಂತ್ರಗಾರಿಕೆ ಅನುಸರಿಸಿದ ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳ ಜತೆಗೆ ಬಿಜೆಪಿಯ ವೋಟ್ ಬ್ಯಾಂಕ್ ಆಗಿರುವ ವೀರಶೈವ ಲಿಂಗಾಯಿತ ಸಮುದಾಯದಿಂದ ಶೇ.5ರಿಂದ 6ರಷ್ಟು ಮತಗಳನ್ನು ಕಸಿದುಕೊಂಡರೆ ಗೆಲುವು ಸುಲಭವಾಗಬಹುದು ಎಂದು ಲೆಕ್ಕಾಚಾರ ಹಾಕಿ ಪ್ರತ್ಯೇಕ ಧರ್ಮದ ಕೂಗೆಬ್ಬಿಸಿತ್ತು. ಆದರೆ, ಇದ್ಯಾವ ಲೆಕ್ಕಾಚಾರಗಳು ಯಶಸ್ವಿಯಾಗಲಿಲ್ಲ. ಎಲ್ಲವೂ ತಲೆಕೆಳಗಾದವು.

ಜನ ಕಾಂಗ್ರೆಸ್‍ನ ತಂತ್ರಗಾರಿಕೆಯನ್ನು ಒಪ್ಪಲಿಲ್ಲ. ಸೋಲು ಪದೇ ಪದೇ ಎದುರಾಗಿದ್ದರಿಂದ ಜಾತ್ಯತೀತ ಪಕ್ಷಗಳು ಕೂಡ ಕಾಂಗ್ರೆಸ್ ಜತೆ ಕೈ ಜೋಡಿಸಲು ಹಿಂದೇಟು ಹಾಕಿದವು. ಕಾಂಗ್ರೆಸ್‍ನ ಚಂಚಲತೆಯ ತಂತ್ರಗಾರಿಕೆಗಳಿಂದಾಗಿ ಮತ ಬ್ಯಾಂಕ್ ಅಲುಗಾಡಲಾರಂಭಿಸಿದರೆ, ಬಿಜೆಪಿ ತನ್ನ ಏಕಮಾತ್ರ ಸಿದ್ದಾಂತವನ್ನು ಬಿಗಿಯಾಗಿಟ್ಟುಕೊಂಡು ವೋಟ್ ಬ್ಯಾಂಕನ್ನು ಗಟ್ಟಿಗೊಳಿಸಿಕೊಂಡಿತು. ಸೋಲು-ಗೆಲುವಿಗೆ ಏನೇ ಕಾರಣ ನೀಡಿದರೂ ಅಂತಿಮವಾಗಿ ಅದು ಕಾಂಗ್ರೆಸ್‍ನ ವಿಫಲ ತಂತ್ರಗಾರಿಕೆಗಳೇ ಎಂದು ಕಾಂಗ್ರೆಸ್ ನಾಯಕರೇ ಹೇಳಲಾ ರಂಭಿಸಿದರು.

ಹಾಗಾಗಿ ಈ ಬಾರಿ ಯಾವುದೇ ತಂತ್ರಗಾರಿಕೆಗಳನ್ನು ಬಳಸದೆ ಕಾಂಗ್ರೆಸ್ ಸ್ವತಂತ್ರವಾಗಿ ಕಣಕ್ಕಿಳಿದಿದೆ. ಚುನಾವಣಾ ಕಣದಲ್ಲಿ ಬಿಜೆಪಿಯಷ್ಟೇ ಸಮಾನ ವೈರತ್ವವನ್ನು ಜೆಡಿಎಸ್ ಜತೆಯೂ ಕಾಪಾಡಿಕೊಳ್ಳುತ್ತಿದೆ. ವಿಧಾನಸಭೆ ಉಪ ಚುನಾವಣೆಗಳು ನಡೆಯುತ್ತಿರುವುದು ಹಳೆ ಮೈಸೂರು ಭಾಗಗಳಲ್ಲಾಗಿರುವುದರಿಂದ ಫಲಿತಾಂಶ ಯಾವ ರೀತಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments