ಕಾಂಗ್ರೆಸ್ ಜಂಘಾಬಲವನ್ನೇ ಹುಡುಗಿಸಿದ ಉಪಚುನಾವಣೆ ಫಲಿತಾಂಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.10- ಬಹುನಿರೀಕ್ಷಿತ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಸೋಲು ಕಾಂಗ್ರೆಸ್ ನಾಯಕರ ಜಂಘಾಬಲವನ್ನೇ ಹುಡುಗಿಸಿದೆ. ಬಿಹಾರ ವಿಧಾನಸಭೆ ಚುನಾವಣೆ, ಗುಜರಾತ್, ಮಧ್ಯಪ್ರದೇಶ, ಮಣಿಪುರ್, ಚತ್ತೀಸ್‍ಘಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.

ರಾಜ್ಯದಲ್ಲಿ ಶಿರಾ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಶಿರಾದಲ್ಲಿ ಹಿರಿಯ ನಾಯಕರಾದ ಟಿ.ಬಿ.ಜಯಚಂದ್ರ ಗೆಲ್ಲುತ್ತಾರೆ ಎಂಬ ವಿಶ್ವಾಸವಿತ್ತು. ರಾಜರಾಜೇಶ್ವರಿನಗರದಲ್ಲಿ ವಿದ್ಯಾವಂತೆ ಕುಸುಮಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಅತ್ಯಂತ ವ್ಯವಸ್ಥಿತವಾಗಿ ರಣತಂತ್ರ ರೂಪಿಸಿ ಪ್ರಚಾರ ಮಾಡಿತ್ತು.

ಎಲ್ಲಾ ನಾಯಕರಲ್ಲಿ ಒಗ್ಗಟ್ಟು ಮೂಡಿಸಲು ನಾನಾ ರೀತಿಯ ಸರ್ಕಸ್‍ಗಳು ನಡೆದಿದ್ದವು. ಇವೆಲ್ಲದರ ಪರಿಣಾಮ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸ ಪಕ್ಷದ ನಾಯಕರಲ್ಲಿತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳ ಮುನ್ಸೂಚನೆಯಂತೆ ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್ ಸೋಲು ಕಂಡಿದೆ.
ಇದೆಲ್ಲಕ್ಕಿಂತಲೂ ಆತಂಕಕಾರಿ ವಿಷಯವೆಂದರೆ ಬಿಜೆಪಿಯ ಜನಪ್ರಿಯತೆ ಹೆಚ್ಚಾಗಿದೆ.

ಈ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಶೇ.52ಕ್ಕಿಂತಲೂ ಹೆಚ್ಚಿನ ಮತ ಗಳಿಕೆ ಮಾಡಿದೆ. ಕಾಂಗ್ರೆಸ್ ಸೋಲು ಕಂಡರೂ ಕೂಡ ಕನಿಷ್ಠ ಶೇ.36ರಷ್ಟು ಮತವನ್ನು ಪ್ರತಿ ಚುನಾವಣೆಯಲ್ಲೂ ಪಡೆದುಕೊಳ್ಳುತ್ತಿತ್ತು. ಉಪ ಚುನಾವಣೆಯಲ್ಲಿ ಶೇ.33ರಷ್ಟು ಮತ ಪಡೆದಿದೆ. ಸರಾಸರಿ ಶೇ.18ರಷ್ಟು ಮತಪಡೆಯುತ್ತಿದ್ದ ಜೆಡಿಎಸ್ ಪಕ್ಷ ಉಪ ಚುನಾವಣೆಯಲ್ಲಿ ಅದರ ಗಳಿಕೆ ಶೇ.12ಕ್ಕೆ ಕುಸಿದಿದೆ.

ಕೊರೊನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲ, ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿನ ಭ್ರಷ್ಟಾಚಾರದ ಆರೋಪ, ಮುಖ್ಯಮಂತ್ರಿ ಅವರ ಕುಟುಂಬದ ಸದಸ್ಯರು ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ, ನೆರೆ ನಿರ್ವಹಣೆಯಲ್ಲಿನ ವೈಫಲ್ಯತೆಗಳು ಸೇರಿದಂತೆ ಹಲವಾರು ಆರೋಪಗಳು ಕೇಳಿ ಬಂದವಾದರೂ ಚುನಾವಣೆಯಲ್ಲಿ ಯಾವುದೂ ಲೆಕ್ಕಕ್ಕೆ ಬಂದಿಲ್ಲ.

ಉಪ ಚುನಾವಣೆ ರಾಜ್ಯ ಸರ್ಕಾರದ ಆಡಳಿತಕ್ಕೆ ಮತದಾರರು ನೀಡುವ ಅಂಕಗಳು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾ ಬಂದಿದ್ದರು. ಈಗ ಉಪಚುನಾವಣೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಜನರ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಮುನಿರತ್ನ ಅವರ ಪಕ್ಷಾಂತರ ಸೇರಿದಂತೆ ಯಾವ ಆರೋಪಗಳಿಗೂ ಜನ ಮಾನ್ಯತೆ ನೀಡಿಲ್ಲ.

ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ಬಳಿಕ ನಡೆದ ಈ ಉಪ ಚುನಾವಣೆ ಕಾಂಗ್ರೆಸ್ ಮಟ್ಟಿಗೆ ಸವಾಲೆಂದೇ ಪರಿಗಣಿಸಲಾಗಿತ್ತು. ಸಂಸದ ಡಿ.ಕೆ.ಸುರೇಶ್ ಅವರು ಕ್ಷೇತ್ರದಲ್ಲಿ ಹಗಲು-ರಾತ್ರಿ ಕೆಲಸ ಮಾಡಿ ಕುಸುಮಾ ಅವರನ್ನು ಗೆಲ್ಲಿಸಲು ಪ್ರಯತ್ನ ಮಾಡಿದ್ದರು. ಆದರೆ, ಇದು ಯಶಸ್ವಿಯಾಗಿಲ್ಲ. ಉಪ ಚುನಾವಣೆ ಕೇವಲ ಎರಡು ಕ್ಷೇತ್ರಗಳಿಗೆ ನಡೆದಿದ್ದರೂ ಅದರ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಭಾರೀ ಪರಿಣಾಮ ಬೀರಿದೆ. ಮುಂದಿನ ದಿನಗಳ ರಾಜಕೀಯಕ್ಕೆ ಇದು ದಿಕ್ಸೂಚಿ ಎಂದು ಹೇಳಲಾಗುತ್ತಿದೆ.
ಸದ್ಯದ ಫಲಿತಾಂಶ ನೋಡಿದರೆ ಕಾಂಗ್ರೆಸ್‍ನ ರಾಜಕೀಯ ದಿಕ್ಸೂಚಿ ಯಾವ ದಿಕ್ಕಿನತ್ತ ಇದೆ ಎಂಬ ಆತಂಕ ಕಾರ್ಯಕರ್ತರನ್ನು ಕಾಡುತ್ತಿದೆ.

Facebook Comments