ಜನರ ‘ಧಾರ್ಮಿಕ ಭಾವನೆ’ ಅರಿಯಲು ಎಡವಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣ..!?

ಈ ಸುದ್ದಿಯನ್ನು ಶೇರ್ ಮಾಡಿ

# ಉಮೇಶ್ ಕೋಲಿಗೆರೆ 
ಬೆಂಗಳೂರು, ನ.11- ಜನಸಾಮಾನ್ಯರ ಮನಸ್ಥಿತಿಗೆ ಹೊಂದಿಕೊಳ್ಳಲಾಗದೆ ಆಧುನಿಕತೆಯ ಸವಾಲುಗಳನ್ನು ಸಂಧಿಸದೆ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ವಿಪಕ್ಷವಾಗಿಯೂ ವೈಫಲ್ಯ ಅನುಭವಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ನಿನ್ನೆ ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಸಾಮಾಜಿಕ ಜಾಲತಾಣಗಳು ಮತ್ತು ಜನ ಸಮುದಾಯದಲ್ಲಿ ಸಹಜವಾಗಿ ಕೇಳಿ ಬಂದ ಮಾತುಗಳು ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ಕನ್ನಡಿ ಹಿಡಿದಂತಿತ್ತು.

ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡಿದರು… ಕಾಂಗ್ರೆಸಿಗರು ಧ್ವನಿ ಎತ್ತಿಲ್ಲ. ಯಾವಾಗಲೂ ಬೇರೆ ಧರ್ಮದವರಿಗೆ ಬೆಂಬಲ ಕೊಡುತ್ತಾರೆ. ಹಾಗಾಗಿ ಎರಡು ಉಪಚುನಾವಣೆ ಮಾತ್ರವಲ್ಲ, ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್‍ಗೆ ಸೋಲೇ ಕಟ್ಟಿಟ್ಟ ಬುತ್ತಿ…..! ಇದು ಜನ ಸಾಮಾನ್ಯರೊಬ್ಬರು ಆಡಿದ ಮಾತು. ಸಾಮಾನ್ಯರೊಬ್ಬರು ಆಡಿದ ಮಾತಿಗೆ ಯಾಕಿಷ್ಟು ಮಹತ್ವ ಕೊಡಬೇಕು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಆಡಳಿತಾರೂಢ ಬಿಜೆಪಿ ಕಾಲ ಕಾಲಕ್ಕೆ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸಲಾಗದೆ ಕಾಂಗ್ರೆಸ್ ದಿನ ಕಳೆದಂತೆ ಮೂಲೆಗುಂಪಾಗುತ್ತಿದೆ. ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೂ ಕಾಂಗ್ರೆಸ್ ಪ್ರತಿಪಕ್ಷವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿ ಜನರನ್ನು ತಲುಪುವಲ್ಲಿ ಸಂಪೂರ್ಣ ವಿಫಲವಾಗಿದೆ.

ಸಾಮಾನ್ಯವಾಗಿ ವಿರೋಧ ಪಕ್ಷಗಳು ಆಡಳಿತಾರೂಢ ಸರ್ಕಾರಕ್ಕೆ ಸವಾಲಿನ ಸನ್ನಿವೇಶ ಸೃಷ್ಟಿಸಿ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಿಸುವುದು ಸಹಜವಾದ ಬೆಳವಣಿಗೆ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯೇ ಆಡಳಿತ ಪಕ್ಷ, ಬಿಜೆಪಿಯೇ ವಿರೋಧ ಪಕ್ಷ ಎಂಬಂತಾಗಿದೆ. ಬಿಜೆಪಿ ಮತ್ತು ಅದರ ಆಪ್ತ ಸಂಘಟನೆಗಳು ತಂದೊಡ್ಡುವ ಧರ್ಮಸಂಕಟದ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲಾಗದೆ ಕಾಂಗ್ರೆಸ್ ದಿನೇ ದಿನೇ ಜನ ಮಾನಸದಿಂದ ದೂರವಾಗುತ್ತಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ದೀಪಾವಳಿ ಹಬ್ಬದಲ್ಲಿ ಪಟಾಕಿ ನಿಷೇಧ.

ಕೊರೊನಾ ಸಂದರ್ಭದಲ್ಲಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಪಟಾಕಿ ನಿಷೇಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಈ ನಿರ್ಧಾರ ಸರಿಯೋ ತಪ್ಪೋ, ಪ್ರತಿಕ್ರಿಯಿಸಬೇಕೋ ಬೇಡವೋ ಎಂಬ ಗೊಂದಲದಲ್ಲೇ ಕಾಂಗ್ರೆಸ್ ಮೌನಕ್ಕೆ ಶರಣಾಗಿತ್ತು. ಆದರೆ ಬಿಜೆಪಿಯ ಸಂಸದ ಪ್ರತಾಪ್ ಸಿಂಹ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವಾರು ನಾಯಕರು, ಸದ್ದಿಲ್ಲದ ದೀಪಾವಳಿ ಮಾಡಿ ಎಂದು ಬೋಧನೆ ಮಾಡುತ್ತಾರೆ, ಸರಿ ಬಿಡಿ.

ಇನ್ನು ಮುಂದೆ ಸದ್ದು ರಹಿತ ದೀಪಾವಳಿಯಂತೆ ಸದ್ದಿಲ್ಲದ ಶುಕ್ರವಾರ, ರಕ್ತವಿಲ್ಲದ ಬಕ್ರೀದ್ ಮಾಡೋಣ ಎಂಬ ಸಂದೇಶ ಇರುವ ಪೋಸ್ಟ್‍ಗಳನ್ನು ಷೇರ್ ಮಾಡಿದರು. ಇದು ಎಷ್ಟು ಪರಿಣಾಮ ಬೀರಿದೆ ಎಂದರೆ ಒಂದು ವರ್ಗದವರ ಮನಸ್ಸಿನಲ್ಲಿ ಅವ್ಯಕ್ತವಾದ ದ್ವೇಷ ಮತ್ತಷ್ಟು ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಆದೇಶ ಜಾರಿ ಮಾಡಿದೆ ಎಂಬ ವಿಷಯವನ್ನೇ ಮರೆತು ಸರ್ಕಾರ ತಪ್ಪು ನಿರ್ಧಾರ ತೆಗೆದುಕೊಂಡರೂ ಕಾಂಗ್ರೆಸ್ಸಿಗರು ಬಾಯಿ ಬಿಡುತ್ತಿಲ್ಲ ಎಂಬ ಗ್ರಹಿಕೆಗಳು ವ್ಯಾಪಕವಾಗಿವೆ.

ಇಲ್ಲಿ ಬಿಜೆಪಿಯದೇ ಆಡಳಿತ, ಬಿಜೆಪಿಯದೇ ವಿರೋಧ ಪಕ್ಷ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷ ಇನ್ನೂ ಹಳೆಯ ಕಾಲದ ಜಾತಿ ಸಮೀಕರಣ ರಾಜಕೀಯಕ್ಕೆ ಜೋತು ಬಿದ್ದಿದೆ. ಅಹಿಂದ ವರ್ಗಗಳನ್ನು ಸೆಳೆಯಲು ತನ್ನೆಲ್ಲಾ ಬೆವರನ್ನು ಖರ್ಚು ಮಾಡುತ್ತಿದೆ. ಆದರೆ ಬಿಜೆಪಿ ಸಣ್ಣ ವಿಷಯಗಳಲ್ಲೂ ಪ್ರಬಲವಾದ ಭಾವನೆಗಳನ್ನು ತುಂಬಿ ಸಾಮಾಜಿಕ ಜಾಲ ತಾಣದಲ್ಲಿ ಜನ ಮಾನಸವನ್ನು ತಲುಪುತ್ತಿದೆ.

ಬಿಜೆಪಿಗೆ ಏಟುಗಳಿಗೆ ಎದಿರೇಟು ಹಾಕುವುದಿರಲಿ, ಅದನ್ನು ಗುರುತಿಸುವಲ್ಲಿಯೇ ಕಾಂಗ್ರೆಸ್‍ನ ಇಂಟಲೆಕ್ಚುವಲ್ ಟೀಂ ಸೋಲುತ್ತಿದೆ. ಕಾಂಗ್ರೆಸ್‍ನ ಈ ದೌರ್ಬಲ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಬಿಜೆಪಿಯ ಥಿಂಕ್‍ಟ್ಯಾಂಕ್ ತಂಡ ಕಾಲ ಕಾಲಕ್ಕೆ ನೆಗೆಟಿವ್ ಸನ್ನಿವೇಶಗಳನ್ನು ಪಾಸಿಟಿವ್‍ಗಳನ್ನಾಗಿ ಪರಿವರ್ತಿಸಿಕೊಂಡು ಚುನಾವಣೆಯನ್ನು ಗೆಲ್ಲುತ್ತಿದೆ. ಕಾಂಗ್ರೆಸ್ ಆ ಜಾತಿಯವರು ನಮ್ಮ ಜೊತೆಗಿದ್ದಾರೆ, ಈ ಜಾತಿಯವರು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳುತ್ತಲೇ ಕಾಲ ಕಳೆಯುತ್ತಿದೆ. ಆದರೆ ಕಾಂಗ್ರೆಸ್ ಸೋಲಿನ ಸರಣಿ ನೋಡಿ ಯಾವ ಜಾತಿಯವರು ಪಕ್ಷದ ಜೊತೆ ನಿಲ್ಲುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರೇ ವಿಷಾದಿಸುತ್ತಿದ್ದಾರೆ.

ಈಗಲೂ ಸಾಮ್ರಾಜ್ಯ ಶಾಹಿ ದವಲತ್ತಿನ ನಾಯಕರು ಕಾಂಗ್ರೆಸ್ ಪಾಲಿಗೆ ಭಾರವಾಗಿದ್ದಾರೆ. ಬ್ಯಾನರ್ ಕಟ್ಟಲು ಕಾರ್ಯಕರ್ತರು ಅಧಿಕಾರ ಅನುಭವಿಸಲು ದೊಡ್ಡ ನಾಯಕರು, ಅವರ ಮಕ್ಕಳು ಎಂಬ ದೋರಣೆ ಪಕ್ಷವನ್ನು ಮುಳುಗಿಸುತ್ತಿದೆ. ಕಾಂಗ್ರೆಸ್‍ನ್ನು ಇನ್ನು ಮುಂದೆ ಕೆಡರ್ ಬೆಸ್ ಆಗಿ ಬೆಳೆಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷರಾದಾಗ ಡಿ.ಕೆ.ಶಿವಕುಮಾರ್ ಹೇಳಿದರು. ಆದರೆ ಈವರೆಗೂ ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಕಂಡು ಬರುತ್ತಿಲ್ಲ.

ಕೊರೊನಾ ಸಾಮಾಗ್ರಿ ಖರೀದಿ, ನೆರೆ ಹಾಗೂ ಕೊರೊನ ನಿರ್ವಹಣೆಯಲ್ಲಿ ವೈಫಲ್ಯ, ಮುಖ್ಯ ಮಂತ್ರಿ ಕುಟುಂಬದಿಂದ ಭ್ರಷ್ಟಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತಾದರೂ ಅದನ್ನು ತಾರ್ಕಿಕ ಅಂತ್ಯ ಕಾಣಿಸದೆ ಎದ್ದೇಟು ಬಿದ್ದೇಟು ಹಾಕಿ ತಣ್ಣಗಾಯಿತು.

ಕೊನೆಗೆ ಚುನಾವಣೆ ಸೋತಾಗ ಇವಿಎಂ ಸರಿಯಿಲ್ಲ, ಅಧಿಕಾರ ದುರುಪಯೋಗ, ಹಣ ಹಂಚಿದ್ದಾರೆ ಎಂಬ ರೆಡಿಮೇಡ್ ಆರೋಪ ಮಾಡಿ ಕಾಂಗ್ರೆಸ್ ತಣ್ಣಗಾಗುತ್ತಿದೆ. ಆಧುನಿಕ ಕಾಲದ ಬದಲಾವಣೆಗಳಿಗೆ ಹೊಂದಿಕೊಳ್ಳದೆ ಹಳೆಯ ಹಳಹಳಿಕೆಯಲ್ಲೆ ಪಕ್ಷ ಕಾಲ ಕಳೆಯುತ್ತಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನಲ್ಲಿ ವೇದಿಕೆಯ ಮೇಲೆ ನಾಯಕರು ಮಾತ್ರ ಇರುತ್ತಾರೆ ಕಾರ್ಯಕರ್ತರು ತಮ್ಮ ದಾರಿ ನೋಡಿಕೊಂಡಿರುತ್ತಾರೆ ಎಂಬುದು ಪಕ್ಷದ ನಿಷ್ಠವಂತರ ಅಳಲಾಗಿದೆ.

Facebook Comments