ಉಪಚುನಾವಣೆ ಕಲಿಸಿದ ಪಾಠ ಮತ್ತೆ ಪುಟಿದೇಳಲು ಕೈ ಹೊಸ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ರಾಜರಾಜೇಶ್ವರಿನಗರ ಮತ್ತು ಶಿರಾ ಉಪಚುನಾವಣೆಗಳಲ್ಲಿ ಸೋಲು ಕಂಡ ಬಳಿಕ ಎಚ್ಚೇತ್ತುಕೊಂಡಿರುವ ಕಾಂಗ್ರೆಸ್ ನಾಯಕರು, ಮುಂದೆ ನಡೆಯುವ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಬೇರೆಯದೆ ರೀತಿಯ ಯೋಜನೆ ರೂಪಿಸಲು ಮುಂದಾಗಿದೆ.

ಆಡಳಿತಾರೂಢ ಬಿಜೆಪಿ ಮತದಾನದ ವೇಳೆಗೆ ಅಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ, ಚುನಾವಣಾ ಅಕ್ರಮ ಮಾಡಿ ಗೆಲ್ಲುತ್ತದೆ ಎಂದು ಆರೋಪ ಮಾಡಿ ಸೋಲಿನ ಮುಖ ಮುಚ್ಚಿಕೊಳ್ಳುವ ಬದಲಿಗೆ ವಿಭಿನ್ನ ತಂತ್ರಗಾರಿಕೆಯ ಮೂಲಕ ಬಿಜೆಪಿಯನ್ನು ಎದುರಿಸಲು ಈಗಿನಿಂದಲೇ ಕಾರ್ಯಪ್ರವೃತ್ತವಾಗಿದೆ.

ಮಸ್ಕಿ ಮತ್ತು ಬಸವಕಲ್ಯಾಣ ಎರಡು ಕ್ಷೇತ್ರಗಳಲ್ಲಿ ಈ ಹಿಂದೆ ಕಾಂಗ್ರೆಸ್ ಗೆದ್ದಿತ್ತು. ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ನಾರಾಯಣ್‍ರಾವ್ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದರು. ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಗೌಡ ಪಾಟೀಲ್ ಅವರು ಕಾಂಗ್ರೆಸ್ ತೊರೆದು ಆಪರೆಷನ್ ಕಮಲದಿಂದ ಬಿಜೆಪಿ ಸೇರಿದರು. ಇನ್ನೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಕೂಡ ಕೋವಿಡ್‍ನಿಂದ ಸಾವನ್ನಪ್ಪಿದರು.

ಈ ಮೂರು ಕ್ಷೇತ್ರಗಳಿಗೆ ಶೀಘ್ರವೇ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಈವರೆಗೂ ಪ್ರಭಾವಿ ಅಭ್ಯರ್ಥಿಗಳಿಲ್ಲ.  ಮಸ್ಕಿ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ಸ್ರ್ಪಸಿದ್ದ ಬಸನಗೌಎಡ ತುರುವೇಹಾಳ ಅವರು ನಾಳೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಬಹುತೇಕ ಉಪಚುವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಇನ್ನೂ ಬಸವಕಲ್ಯಾಣದಲ್ಲೂ ಕಾಂಗ್ರೆಸ್‍ಗೆ ಅಭ್ಯರ್ಥಿಗಳಿಲ್ಲ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ ಇದೆ. ಹಾಗಾಗಿ ಈಗಿನಿಂದಲೇ ಕ್ಷೇತ್ರದಲ್ಲಿ ಸಕ್ರಿಯವಾಗಿ ಸಂಘಟನೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಯಾರಿ ಆರಂಭಿಸಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಸ್ಕಿ ಮತ್ತು ಬಸವ ಕಲ್ಯಾಣದಲ್ಲಿ ಸಂಚರಿಸಲಿರುವ ಡಿ.ಕೆ.ಶಿವಕುಮಾರ್ ಸ್ಥಳೀಯ ನಾಯಕರನ್ನೇ ಗುರುತಿಸಿ ಚುನಾವಣಾ ಉಸ್ತುವಾರಿ ನೀಡಲಿದ್ದಾರೆ.

ಶಿರಾ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೊರಗಿನಿಂದ ಮುಖಂಡರನ್ನು ನಿಯೋಜನೆ ಮಾಡಿ ಚುನಾವಣಾ ಉಸ್ತುವಾಗಿ ವಹಿಸಲಾಗಿತ್ತು. ಅದು ಸ್ಥಳೀಯ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಹಾಗಾಗಿ ವಿಫಲವಾಗಿತ್ತು.

ಮುಂದಿನ ಚುನಾವಣೆಯಲ್ಲಿ ಸ್ಥಳೀಯ ನಾಯಕರಿಗೆ ಉಸ್ತುವಾರಿ ವಹಿಸಲಾಗುತ್ತಿದೆ. ಬೂತ್ ಮಟ್ಟದಲ್ಲಿನ ಕಾರ್ಯಕರ್ತರನ್ನು ಹೆಚ್ಚು ಸಕ್ರಿಯಗೊಳಿಸಲಾಗುತ್ತಿದೆ. ಭಾವನಾತ್ಮಕ ವಿಚಾರಗಳು ಬಂದಾಗ ಅವನ್ನು ಸಮರ್ಥವಾಗಿ ಹೆದರುರಿಸಲು ಚಿಂತಕರ ಚಾವಡಿ ರಚಿಸಲಾಗುತ್ತಿದೆ. ಜೊತೆ ಬೇರೆ ಬೇರೆ ರೀತಿಯ ಕಾರ್ಯತಂತ್ರಗಳ ಮೂಲಕ ಈ ಬಾರಿ ಬಿಜೆಪಿಯನ್ನು ಮಣಿಸಿ ಶಿರಾ ಮತ್ತು ರಾಜರಾಜೇಶ್ವರಿನಗರ ಸೋಲಿನ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ತಯಾರಿ ನಡೆಸಿದೆ.

Facebook Comments