ಚುನಾವಣೆ ಸಮೀಪಿಸುತ್ತಿದ್ದರೂ ಕಾಂಗ್ರೆಸ್‍ನಲ್ಲಿ ನಿರುತ್ಸಾಹ

ಈ ಸುದ್ದಿಯನ್ನು ಶೇರ್ ಮಾಡಿ

#ಉಮೇಶ್ ಕೋಲಿಗೆರೆ
ಬೆಂಗಳೂರು, ನ.26- ಮುಂದಿನ ದಿನಗಳಲ್ಲಿ ನಡೆಯಬಹುದಾದ ಹಲವಾರು ಚುನಾವಣೆಗಳ ತಯಾರಿ ವಿಷಯದಲ್ಲಿ ಕಾಂಗ್ರೆಸ್ ನಿರಾಸಕ್ತಿ ತೋರಿಸುತ್ತಿದ್ದು, ಯುದ್ದಕ್ಕೂ ಮೊದಲೇ ಶಸ್ತ್ರ ತ್ಯಾಗ ಮಾಡಿದ ವಾತಾವರಣ ನಿರ್ಮಾಣವಾಗುತ್ತಿದೆ. ಸತತ ಸೋಲುಗಳಿಂದಾಗಿ ಕಂಗೆಟ್ಟಿರುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಫರ್ದಿ  ಸಾಸುವುದೇನು ಎಂಬ ಧೋರಣೆ ತಳೆದಂತಿದೆ.

ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿ, ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರ, ಬೆಳಗಾವಿ ಲೋಕಸಭೆ ಕ್ಷೇತ್ರ, ಬಿಬಿಎಂಪಿ ಸೇರಿದಂತೆ ಹಲವಾರು ಚುನಾವಣೆಗಳು ಎದುರಾಗಲಿವೆ. ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಉಪ ಚುನಾವಣೆಗೂ ಮುನ್ನ ಹೆಚ್ಚು ಕ್ರಿಯಾಶೀಲವಾಗಿದ್ದ ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟ ಬಳಿಕ ಹತಾಶೆಗೆ ತಲುಪಿದಂತಿದೆ.

ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಈಗಾಗಲೇ ತಯಾರಿ ಗಳನ್ನು ಆರಂಭಿಸಿದೆ. ರಾಜ್ಯಾದ್ಯಂತ ಪಕ್ಷ ಹಾಗೂ ಕಾರ್ಯ ಕರ್ತರನ್ನು ಕ್ರಿಯಾಶೀಲವಾಗಿಡಲು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸು ತ್ತಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾದರೂ ಬಿಜೆಪಿಯಲ್ಲಿ ಕ್ರಿಯಾಶೀಲ ರಾಗಿರುವ ನಾಯಕರು ಚುನಾವಣೆಯ ಅಭ್ಯರ್ಥಿಗಳಾಗಲು ತಯಾರಾಗಿದ್ದಾರೆ.

ಕಾಂಗ್ರೆಸ್‍ನಲ್ಲಿ ಈವರೆಗೂ ಸ್ಥಳೀಯ ನಾಯಕರನ್ನು ಗುರುತಿಸಲು ಆಗಲಿಲ್ಲ. ಗ್ರಾಪಂ ಚುನಾವಣೆ ಪಕ್ಷದ ಸಂಘಟನೆಯ ತಳಹದಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ, ಅಡಿಪಾಯದಲ್ಲಿರಬೇಕಾದ ಕಲ್ಲುಗಳು ಸಡಿಲಗೊಳ್ಳುವಂತೆ ಇದೆ.

ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಯಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದಿರುವುದಾಗಿ ಹೇಳಿಕೊಂಡಿತ್ತು. ಚಿನ್ಹೆ ಅಥವಾ ಪಕ್ಷದ ಲಾಂಛನಗಳಿಲ್ಲದೆ ನಡೆಯುವ ಗ್ರಾಪಂ ಚುನಾವಣೆಯಲ್ಲಿ ಯಾರೂ, ಎಷ್ಟು ಗೆದ್ದರು ಎಂಬ ಕರಾರುವಕ್ಕಾದ ಲೆಕ್ಕಾಚಾರ ಕಷ್ಟಸಾಧ್ಯ. ಸಹಜವಾಗಿ ಆಡಳಿತರೂಢ ಪಕ್ಷ ಹೆಚ್ಚಿನ ಸ್ಥಾನ ಗೆದ್ದಿರುವುದಾಗಿ ಹೇಳಿಕೊಳ್ಳುತ್ತದೆ.

ಈ ಬಾರಿ ಬಿಜೆಪಿ ಆ ರೀತಿ ಬಿಂಬಿಸಿಕೊಳ್ಳುವ ಅವಕಾಶಗಳಿವೆ. ಒಂದು ವೇಳೆ ಬಿಜೆಪಿ ಕಡಿಮೆ ಸ್ಥಾನ ಗೆದ್ದರೂ ಆಪರೇಷನ್ ಕಮಲ ನಡೆಸಿ ಅನ್ಯ ಪಕ್ಷದ ಸದಸ್ಯರನ್ನು ಸೆಳೆದುಕೊಂಡು ಗ್ರಾಮ ಪಂಚಾಯ್ತಿಗಳಲ್ಲಿ ಅಕಾರ ಹಿಡಿಯುವ ಸಾಧ್ಯತೆ ಇದೆ. ಈವರೆಗೂ ನಗರ ಪ್ರದೇಶಗಳಲ್ಲಿ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಹೊಂದಿದ್ದ ಬಿಜೆಪಿ ಗ್ರಾಮ ಪಂಚಾಯ್ತಿ ಚುನಾವಣೆ ಮೂಲಕ ಗ್ರಾಮೀಣ ಭಾಗದಲ್ಲೂ ಕಾಂಗ್ರೆಸ್ ಅಸ್ತಿತ್ವವನ್ನು ಅಲುಗಾಡಿಸುವ ಸಾಧ್ಯತೆ ಇದೆ.

ಒಂದು ವೇಳೆ ಅಂದಾಜಿನಂತೆ ಎಲ್ಲವೂ ನಡೆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ನೆಲೆಯೇ ಇಲ್ಲದಾಗುವ ಅವಕಾಶಗಳಿವೆ.
ಬಿಬಿಎಂಪಿ ಚುನಾವಣೆ ನಡೆಯಲಿದೆಯೋ ಇಲ್ಲವೋ ಎಂಬ ಸಾಕಷ್ಟು ಗೊಂದಲಗಳಿವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಒಂದು ವೇಳೆ ನಿಗದಿತ ಅವಯಲ್ಲಿ ಚುನಾವಣೆ ನಡೆಸಿ ಎಂದು ನ್ಯಾಯಾಲಯ ಸೂಚನೆ ನೀಡಿದರೆ ಕಾಂಗ್ರೆಸ್ ತಡಬಡಾಯಿಸುವ ಸಾಧ್ಯತೆಗಳಿವೆ.

ಯಾವ ಶಾಸಕರಿಗೂ ಬಿಬಿಎಂಪಿಗೆ ಚುನಾವಣೆ ನಡೆಸಲು ಇಷ್ಟವಿಲ್ಲ. ಸರ್ಕಾರಕ್ಕೂ ಬೇಕಿಲ್ಲ. ಹೀಗಾಗಿ ಇನ್ನೂ 2-3 ವರ್ಷ ಬಿಬಿಎಂಪಿಗೆ ಚುನಾವಣೆ ನಡೆಯುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಈವರೆಗೂ ಬೆಂಗಳೂರಿನಲ್ಲಿ ಎಲ್ಲಿಯೂ ಕಾರ್ಯಕರ್ತರ ಸಭೆಯಾಗಲಿ, ಚುನಾವಣಾ ತಯಾರಿಯ ಬಗ್ಗೆ ಸಮಾಲೋಚನೆಗಳು ನಡೆದಿಲ್ಲ.

ಏಕಾಏಕಿ ಚುನಾವಣೆ ಘೋಷಣೆಯಾದರೆ ಪಕ್ಷ ಅಭ್ಯರ್ಥಿಗಳ ಆಯ್ಕೆಗಾಗಿಯೇ ಪರದಾಡುವ ಸನ್ನಿವೇಶವಿದೆ. ಕೊನೆ ಕ್ಷಣದಲ್ಲಿ ಕೈಗೆ ಸಿಕ್ಕವರನ್ನು ಕರೆದುಕೊಂಡು ಬಂದು ಕಣಕ್ಕಿಳಿಸಿ ಅಲ್ಲೂ ಸೋಲುವ ಸಾಧ್ಯತೆಗಳೇ ಹೆಚ್ಚಿವೆ. ಇನ್ನು ಮೂರು ಕ್ಷೇತ್ರಗಳ ಉಪ ಚುನಾವಣೆಗೆ ತಯಾರಿ ನಡೆಸುತ್ತಿರುವುದಾಗಿ ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಎಲ್ಲರಿಗಿಂತ ಮೊದಲೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಈಗ ಬಸವ ಕಲ್ಯಾಣ, ಮಸ್ಕಿ, ಬೆಳಗಾವಿ ಮೂರು ಕ್ಷೇತ್ರಗಳಲ್ಲೂ ಅಭ್ಯರ್ಥಿಗಳಿಗಾಗಿ ತಡಕಾಡುತ್ತಿದೆ.

ಪಕ್ಷದಲ್ಲಿ ನಾಯಕರು ಮತ್ತು ಆಕಾಂಕ್ಷಿಗಳಿ ಗೇನು ಗೊರತೆ ಇಲ್ಲ. ಆದರೆ, ಗೆಲ್ಲುವ ಹಾಗೂ ಮತದಾರರನ್ನು ತಲುಪುವವರ ಕೊರತೆ ವಿಪರೀತವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗಿಂತಲೂ 213 ಮತಗಳನ್ನು ಕಡಿಮೆ ಪಡೆದು ಸೋಲು ಕಂಡಿದ್ದ ಬಸವನಗೌಡ ತುರುವಿಹಾಳ್ ಅವರನ್ನು ಕಾಂಗ್ರೆಸ್ ಸೆಳೆದುಕೊಂಡಿದೆ. ಕಾಂಗ್ರೆಸ್‍ನಿಂದ ಶಾಸಕರಾಗಿದ್ದ ಪ್ರತಾಪ್‍ಗೌಡ ಪಾಟೀಲ್ ಆಪರೇಷನ್‍ಕಮಲಕ್ಕೆ ಸಿಲುಕಿ ಬಿಜೆಪಿ ಪಾಲಾಗಿದ್ದಾರೆ.

ಕಡಿಮೆ ಅಂತರದಿಂದ ಗೆದ್ದರು ಎಂಬ ಕಾರಣಕ್ಕಾಗಿ ಬಿಜೆಪಿ ನಾಯಕ ರನ್ನು ಕಾಂಗ್ರೆಸ್‍ಗೆ ಕರೆತಂದಿರುವುದು ಕ್ಷೇತ್ರದ ಒಳಗೊಳಗೆ ಅಸಮಾಧಾನಕ್ಕೆ ಕಾರಣ ವಾಗಿದೆ. ಇನ್ನು ಬಸವ ಕಲ್ಯಾಣ ಕ್ಷೇತ್ರದಲ್ಲಿ ಸುದೀರ್ಘಕಾಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದ ನಾರಾಯಣ್ ರಾವ್ ಅವರು 17,272 ಮತಗಳಿಂದ ಗೆದ್ದಿದ್ದರು. ಶೇ.12ರಷ್ಟು ಹೆಚ್ಚು ಮತಗಳನ್ನು ಪಡೆದಿದ್ದರು. ಕೋವಿಡ್‍ನಿಂದಾಗಿ ಅವರು ಮೃತಪಟ್ಟ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಅಭ್ಯರ್ಥಿಯೇ ಇಲ್ಲದಂತಾಗಿದೆ.

ಬಸವಕಲ್ಯಾಣ 2013ರಲ್ಲಿ ಜೆಡಿಎಸ್ ಪಾಲಾಗಿದ್ದರೆ, 2008ರಲ್ಲಿ ಬಿಜೆಪಿ ಪಾಲಾಗಿತ್ತು. 2004ರಲ್ಲಿ ಕಾಂಗ್ರೆಸ್ ಗೆದ್ದಿದ್ದರೆ, 1999ರಲ್ಲಿ ಬಿಜೆಪಿ ಗೆದ್ದಿತ್ತು. 1994ರಲ್ಲಿ ಜನತಾದಳ ಗೆದ್ದಿತ್ತು. ಅದಕ್ಕೂ ಮೊದಲು 1989ರಲ್ಲಿ ಕಾಂಗ್ರೆಸ್, 1983, 1985ರಲ್ಲಿ ಜೆಎನ್‍ಪಿ, 1978ರಲ್ಲಿ 1972, 1962ರಲ್ಲಿ ಕಾಂಗ್ರೆಸ್ ಗೆದ್ದಿತ್ತು.

ಹೀಗಾಗಿ ಕ್ಷೇತ್ರವನ್ನು ಯಾವುದೇ ಒಂದು ಪಕ್ಷದ ಭದ್ರ ಕೋಟೆ ಎಂದು ಹೇಳಲಾಗುವುದಿಲ್ಲ. ಇಲ್ಲಿ ಪ್ರಬಲ ಅಭ್ಯರ್ಥಿ, ಪಕ್ಷದ ಕ್ರಿಯಾಶೀಲತೆ ಹಾಗೂ ರಾಜ್ಯ ಮಟ್ಟದ ನಾಯಕರ ಪ್ರಭಾವ ಮಾತ್ರ ಗೆಲ್ಲಲು ಸಾಧ್ಯ. ಬಿಜೆಪಿ ಈ ಎರಡು ಕ್ಷೇತ್ರಗಳಿಗೆ ನಿರಂತರವಾಗಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿ ಮತದಾರರ ಓಲೈಕೆ ಯತ್ನ ಮಾಡುತ್ತಿದೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರ 2004ರಿಂದ ನಿರಂತರವಾಗಿ ನಾಲ್ಕು ಬಾರಿ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ, ಬಿಜೆಪಿಯ ಗೆಲುವಿನ ಅಂತರ ಕಳೆದ ಚುನಾವಣೆಯಲ್ಲಿ 3.99 ಲಕ್ಷ ಮತಗಳಷ್ಟಿತ್ತು.

ಈಗ ಉಪ ಚುನಾವಣೆ ಎದುರಾಗಿರುವುದ ರಿಂದ ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳ ಬೇಕಾದರೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಬೇಕು. ಆದರೆ, ಕಾಂಗ್ರೆಸ್ ನಾಯಕರು ಹೋದ ಪುಟ್ಟ, ಬಂದ ಪುಟ್ಟ ಎಂಬಂತೆ ಪ್ರಚಾರ ಮಾಡುತ್ತಿರವುದು ಕಾರ್ಯಕರ್ತರಲ್ಲೇ ಅಸಮಾಧನಕ್ಕೆ ಕಾರಣವಾಗಿದೆ.

Facebook Comments