ಕಳೆದುಹೋದ ಮತ ಬ್ಯಾಂಕ್ ಹುಡುಕಾಟದಲ್ಲಿ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ಜನರ ಒಲವುಗಳಿಸಲು ಸಾಧ್ಯವಾಗದೆ ಸತತ ಸೋಲುಂಟಾಗಲು ಕಾರಣಗಳನ್ನು ಹುಡುಕಲು ಮುಂದಾಗಿರುವ ಕಾಂಗ್ರೆಸ್ ಮತ್ತೆ ತಮ್ಮ ಮತ ಬ್ಯಾಂಕನ್ನು ಕಾಯ್ದಿಟ್ಟುಕೊಳ್ಳಲು ಹೊಸ ಕ್ರಿಯಾ ಯೋಜನೆಗೆ ಕೈ ಹಾಕಿದೆ. ಅಧಿಕಾರ ನಡೆಸಿದಾಗಲೆಲ್ಲಾ ಕಾಂಗ್ರೆಸ್ ಜಾರಿಗೊಳಿಸಿದ ಯೋಜನೆಗಳು ಸಾಕಷ್ಟು ಜನ ಮನ್ನಣೆ ಪಡೆದಿವೆ. ಸಣ್ಣಪುಟ್ಟ ವಿವಾದಗಳ ಹೊರತಾಗಿ ಬಹುತೇಕ ಯೋಜನೆಗಳು ಜನಪಯೋಗಿಯಾಗಿವೆ.

ದೇಶದ ಕೋಟ್ಯಾಂತರ ಜನ ಕಾಂಗ್ರೆಸ್ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಯೋಜನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡುತ್ತಾರೆ. ಆದರೆ, ಇದು ಚುನಾವಣೆ ಕಾಲದಲ್ಲಿ ಕಾಂಗ್ರೆಸ್‍ಗೆ ಮತಗಳಾಗಿ ಪರಿವರ್ತನೆಯಾಗುವುದಿಲ್ಲ.  ಕಾಂಗ್ರೆಸ್ ಯೋಜನೆಗಳಿಂದ ಲಾಭ ಪಡೆದ ಸಮುದಾಯಗಳೂ ಕೂಡ ಇಂದು ಪಕ್ಷದ ಜತೆಗೆ ಇಲ್ಲ. ಏನನ್ನೂ ಮಾಡದೇ ಇದ್ದರೂ ಬಿಜೆಪಿ ನಿರ್ದಿಷ್ಟವಾದ ವೋಟ್ ಬ್ಯಾಂಕ್ ಕಾಯ್ದುಕೊಳ್ಳುವ ಮೂಲಕ ಚುನಾವಣೆಯಲ್ಲಿ ಗೆಲ್ಲುತ್ತಲೇ ಬರುತ್ತಿದೆ.

ಕಾಂಗ್ರೆಸ್ ಸರ್ವಜನಹಿತಾಯ ಸರ್ವಜನ ಸುಖಾಯ ಎಂಬ ಮಂತ್ರ ಜಫಿಸುತ್ತಲೇ ಸಾಮರಸ್ಯದ ರಾಜಕಾರಣ ಮಾಡುತ್ತಿದೆ. ಇದೇ ಮುಳುವಾಗಿರಬಹುದೆಂಬ ಅನುಮಾನ ಕಾಡುವಂತಹ ಬೆಳವಣಿಗೆಗಳು ಇತ್ತೀಚೆಗೆ ನಡೆಯುತ್ತಿದೆ.  ಹೀಗಾಗಿ ನಾವು ಚುನಾವಣೆಯ ತಂತ್ರಗಾರಿಕೆಯನ್ನು ಬದಲಾವಣೆ ಮಾಡಿಕೊಳ್ಳಲೇಬೇಕು ಎಂಬ ಅಭಿಪ್ರಾಯ ಹಿರಿಯ ನಾಯಕರಿಂದ ಕೇಳಿ ಬಂದಿದೆ.

ಕಾಂಗ್ರೆಸ್‍ನಿಂದ ಲಾಭ ಪಡೆದು ದೂರವಾಗಿರುವ ಸಮುದಾಯಗಳ ಬಗ್ಗೆ ಅಧ್ಯಯನ ನಡೆಸಲು ಪಕ್ಷ ಮುಂದಾಗಿದೆ. ಇದಕ್ಕಾಗಿ ಹಿರಿಯ ನಾಯಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಅಹಿಂದ ವರ್ಗ ಕಾಂಗ್ರೆಸ್‍ನಿಂದ ದೂರವಾಗುತ್ತಿದೆ. ಮೇಲ್ವರ್ಗ ಮೊದಲಿನಿಂದಲೂ ಕಾಂಗ್ರೆಸ್ ಜತೆ ಗುರುತಿಸಿಕೊಂಡೇ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ದೂರವಾಗಿರುವ ಸಮುದಾಯವನ್ನು ವಾಪಸ್ ಸೆಳೆಯಬೇಕಾದರೆ ಏನು ಮಾಡಬೇಕು ? ಮೇಲ್ವರ್ಗದಿಂದ ಕನಿಷ್ಠ ಪ್ರಮಾಣದ ಮತವನ್ನಾದರೂ ಕಾಯ್ದಿಟ್ಟುಕೊಳ್ಳಲು ಯಾವ ತಂತ್ರಗಾರಿಕೆ ಅನುಸರಿಸಬೇಕು ಎಂಬ ಬಗ್ಗೆ ಅಧ್ಯಯನ ನಡೆಸಲು ಸಮಿತಿಗೆ ಸೂಚನೆ ನೀಡಲಾಗುತ್ತಿದೆ.

ಕಾಂಗ್ರೆಸ್‍ನಿಂದ ಲಾಭ ಪಡೆದು ಅದನ್ನು ಮರೆತು ದೂರವಾಗಿರುವ ಸಮುದಾಯಗಳಿಗೆ ಮತ್ತೆ ಮನವೊಲಿಕೆ ಮಾಡುವುದು ಹೇಗೆ ಎಂಬುದನ್ನು ಅಧ್ಯಯನ ನಡೆಸಿ ವರದಿ ನೀಡಬೇಕೆಂದು ಹಿರಿಯ ಕಾಂಗ್ರೆಸ್ ನಾಯಕರು ಸೂಚನೆ ನೀಡಿದ್ದಾರೆ. ಬಿಜೆಪಿ ಹಿಂದುತ್ವ ಅಜೆಂಡಾವನ್ನು ಮುಂದಿಟ್ಟುಕೊಂಡು ಭಾವನಾತ್ಮಕ ರಾಜಕಾರಣದ ಮೇಲೆಯೇ ನಿರ್ದಿಷ್ಟವಾದ ವೋಟ್ ಬ್ಯಾಂಕ್ ಕಾಯ್ದಿರಿಸಿಕೊಂಡಿದೆ. ಹಾಗಾಗಿ ಪ್ರತಿ ಚುನಾವಣೆಯಲ್ಲೂ ಗೆಲ್ಲುತ್ತಾ ಬಂದಿದೆ.

ಕಾಂಗ್ರೆಸ್ ಪಕ್ಷ ನಿರ್ದಿಷ್ಟವಾದ ವೋಟ್ ಬ್ಯಾಂಕ್ ಕಾಯ್ದುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಸೋಲು ಕಟ್ಟಿಟ್ಟ ಬುತ್ತಿಯಾಗಲಿದೆ.  ಹೀಗಾಗಿ ಪಕ್ಷ ಹೊಸ ವಿಚಾರಗಳು, ಹೊಸ ಸಿದ್ದಾಂತಗಳು, ಹೊಸ ತಂತ್ರಗಾರಿಕೆಗಳ ಮೂಲಕ ಮುಂದಿನ ದಿನಗಳಲ್ಲಿ ಚುನಾವಣೆ ಎದುರಸಬೇಕೆಂದು ಇತ್ತೀಚೆಗೆ ನಡೆದ ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಎಲ್ಲಾ ಅಧ್ಯಯನಗಳಿಗಾಗಿ ಸಮಿತಿ ರಚನೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ನೀಡಲಾಗಿದೆ. ಅಧ್ಯಕ್ಷರು ಶೀಘ್ರವೇ ಸಮಿತಿಯನ್ನು ರಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments