ಸದನ ಕಾರ್ಯ ಕಲಾಪ ಸಮಿತಿ ಸಭೆ ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಪಟ್ಟಂತೆ ಇನ್ನು ಮುಂದೆ ನಡೆಯುವ ಸದನಗಳ ಕಾರ್ಯ ಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. ಇಂದು ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಲಾಪದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ.

ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸುವ ಮತ್ತು ನಿರ್ಣಯಿಸುವ ಯಾವ ವಿಷಯಗಳನ್ನು ಸರ್ಕಾರ ಪಾಲನೆ ಮಾಡುವುದಿಲ್ಲ. ಕಳೆದ ಅಧಿವೇಶನದಲ್ಲಿ ಕಲಾಪ ಸಮಿತಿಯಲ್ಲಿ ನಿರ್ಣಯಿಸಿದ್ದನ್ನು ಹೊರತು ಪಡಿಸಿ ವಿವಾದಿತ ಕಾಯ್ದೆಗಳನ್ನು ಅಧಿವೇಶನದಲ್ಲಿ ಮಂಡನೆ ಮಾಡಿದೆ. ಹಾಗಾಗಿ ಇನ್ನು ಮುಂದೆ ಸಭಾಧ್ಯಕ್ಷರು ಮತ್ತು ಸಭಾಪತಿ ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸುವುದು ಬೇಡ ಎಂದು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.

ಪ್ರತಿಯೊಂದು ಅಧಿವೇಶನ ನಡೆಯುವ ಮುನ್ನಾ ಕಲಾಪ ಸಲಹಾ ಸಮಿತಿ ಸಭೆ ನಡೆದು ಯಾವೆಲ್ಲಾ ವಿಷಯಗಳನ್ನು ಚರ್ಚೆ ಮಾಡಬೇಕು. ಅಧಿವೇಶನ ಯಾವ ಸಮಯಕ್ಕೆ, ಎಷ್ಟು ಹೊತ್ತು ನಡೆಯಬೇಕು ಎಂಬ ಮಹತ್ವದ ವಿಷಯಗಳನ್ನು ಚರ್ಚೆ ನಡೆಸಿ ನಿರ್ಧರಿಸಲಾಗುತ್ತದೆ. ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಸಂಘರ್ಷ ಏರ್ಪಟ್ಟಾಗ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ಪರಿಹಾರ ಕಂಡು ಹಿಡಿದು ಅಧಿವೇಶನವನ್ನು ಸುಸೂತ್ರವಾಗಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ.

ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರು ಸೇರಿದಂತೆ ಎಲ್ಲಾ ಪಕ್ಷಗಳ ಹಿರಿಯ ಶಾಸಕರು ಸಲಹಾ ಸಮಿತಿ ಯಲ್ಲಿ ಸದಸ್ಯರಾಗಿರುತ್ತಾರೆ. ಆದರೆ ಈ ಬಾರಿ ಅಧಿವೇಶನದುದ್ದಕ್ಕೂ ಸಮಿತಿಯ ಸಭೆಯನ್ನು ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧರಿಸಿರುವುದು ಆಡಳಿ ತಾರೂಢ ಬಿಜೆಪಿಗೆ ಮುರುಗರ ಉಂಟು ಮಾಡಿದೆ.

ಕಳೆದ ಅಧಿವೇಶನಕ್ಕಿಂತಲೂ ಈ ಬಾರಿ ಹಲವಾರು ವಿವಾದಗಳು, ಸಂಘರ್ಷಮಯ ವಿಷಯಗಳು ವಿಧಾನಮಂಡಲದಲ್ಲಿ ಚರ್ಚೆಯಾಗಬೇಕಿದೆ. ಅವುಗಳ ವಿರುದ್ಧ ಕಾಂಗ್ರೆಸ್ ಪ್ರಬಲ ಹೋರಾಟ ನಡೆಸುವ ನಿರ್ಧಾರ ತೆಗೆದುಕೊಂಡಿದೆ. ಸಂಧಾನದ ಮಾರ್ಗವಾಗಿರುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಿರಾಕರಿಸಿರುವುದರಿಂದ ಈ ಬಾರಿ ಅಧಿವೇಶನದಲ್ಲಿ ಸೌಹಾರ್ದಯುತ ಚರ್ಚೆಗಿಂತಲೂ ಸಂಘರ್ಷವೇ ಪ್ರಮುಖವಾಗುವ ಮುನ್ಸೂಚನೆ ಇದೆ.

Facebook Comments