ಹದ್ದುಮೀರಿದ ದೋಸ್ತಿಗಳ ಟಾಕ್ ಫೈಟ್, ಶೇಕ್ ಆಗುತ್ತದೆ ಸಮ್ಮಿಶ್ರ ಸರ್ಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 13-ರಾಜಕೀಯ ವಲಯದಲ್ಲಿ ದಿಢೀರ್ ಬೆಳವಣಿಗೆಗಳಾಗಿದ್ದು, ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ಮುಖಂಡರ ನಡುವೆ ಇದ್ದಕ್ಕಿದ್ದಂತೆ ಆರೋಪ-ಪ್ರತ್ಯಾರೋಪಗಳು ಹದ್ದುಮೀರಿವೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ನಾಯಕರು ನನ್ನನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದರೇ, ಇದಕ್ಕೆ ಜೆಡಿಎಸ್ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹಾದಿಬೀದಿಯಲ್ಲಿ ಆರೋಪ ಮಾಡುವ ಬದಲು ಇಷ್ಟವಿದ್ದರೆ ಜೊತೆಯಲ್ಲಿರಿ, ಇಲ್ಲವಾದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಜೆಡಿಎಸ್-ಕಾಂಗ್ರೆಸ್‍ನ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ನಿರೀಕ್ಷೆಗೂ ಮೀರಿ ಗಂಭೀರ ಸ್ವರೂಪಕ್ಕೆ ತಿರುಗಿದ್ದು, ಬಿಜೆಪಿ ನಾಯಕರು ಹೇಳುವಂತೆ ದೋಸ್ತಿ ಪಕ್ಷಗಳ ಒಳಜಗಳದಿಂದಲೇ ಸಮ್ಮಿಶ್ರ ಸರ್ಕಾರ ಪತನವಾಗಲಿದೆಯೇ ಎಂಬ ಅನುಮಾನ ಹುಟ್ಟಿ ಹಾಕಿದೆ.

ಜೆಡಿಎಸ್ ನಾಯಕರ ತಿರುಗೇಟುಗಳ ನಡುವೆಯೂ ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳುವುದನ್ನು ನಿಲ್ಲಿಸಿಲ್ಲ. ಕೋಲಾರದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಕಿಡಿ ಹೊತ್ತಿಸಿದ ಸಿದ್ದರಾಮಯ್ಯ ಟ್ವೀಟ್:  ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿ ಹಾಕಿದೆ. ಇದರಿಂದ ಎಚ್.ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ.

ವಿಶ್ವನಾಥ್ ಇಂತಹ ಕಿಡಿಕೇಡಿಗಳ ಹೇಳಿಕೆಗಳಿಗೆ ಕುಖ್ಯಾತರು. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಮೊದಲು ಜಿ.ಟಿ.ದೇವೇಗೌಡ, ಈಗ ಎಚ್.ವಿಶ್ವನಾಥ್…. ಮುಂದೆ ಯಾರೋ ಗೊತ್ತಿಲ್ಲ.

ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರ ಗಮನ ಹರಿಸುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದರು.

ಈವರೆಗೂ ಜೆಡಿಎಸ್‍ನ ನಾಯಕರು ಎಷ್ಟೇ ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಪ್ರತಿಕ್ರಿಯಿಸದೆ ಮೌನವಾಗಿರುತ್ತಿದ್ದ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಆಕ್ರಮಣ ಪ್ರತಿಕ್ರಿಯೆಗಳಿಗೆ ಮುಂದಾಗಿದ್ದಾರೆ.

ಕುಪೇಂದ್ರರೆಡ್ಡಿ ಟಾಂಗ್: ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಜೆಡಿಎಸ್‍ನ ವರಿಷ್ಠರ ಆಪ್ತರೂ ಆಗಿರುವ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಅವರು, ನಮಗೆ ಬೆಂಬಲ ಕೊಡಿ, ನಮ್ಮನ್ನು ಮುಖ್ಯಮಂತ್ರಿ ಮಾಡಿ ಎಂದು ನಾವು ಯಾರನ್ನೂ ಬೇಡಿಕೊಂಡಿರಲಿಲ್ಲ. ಅ

ವರಾಗಿಯೇ ಮನೆ ಬಾಗಿಲಿಗೆ ಬಂದರು, ಮುಖ್ಯಮಂತ್ರಿ ಮಾಡಿದರು. ಈಗ ಹಾದಿಬೀದಿಯಲ್ಲಿರುವವರೆಲ್ಲ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧವಾಗಿ ಮಾತನಾಡಲಾರಂಭಿಸಿದ್ದಾರೆ. ಇಷ್ಟವಾದರೆ ಜೊತೆಯಲ್ಲಿರಲಿ, ಇಲ್ಲವಾದರೆ ಅವರ ದಾರಿ ಅವರು ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿಯವರು 40 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದಾರೆ. ಶಾಸಕರು, ಸಂಸದರ ಕ್ಷೇತ್ರಗಳ ಅಭಿವೃದ್ಧಿಗೆ ತೊಂದರೆಯಾಗದಂತೆ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿಕೊಡುತ್ತಿದ್ದಾರೆ. ಹಗಲು-ರಾತ್ರಿ ಕೆಲಸ ಮಾಡುತ್ತಿರುವ ಅವರ ಬಗ್ಗೆ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಸರಿಯಲ್ಲ. ಕೂಡಲೇ ಇದಕ್ಕೆ ಬ್ರೇಕ್ ಹಾಕಬೇಕು.

ಹೈಕಮಾಂಡ್‍ನಿಂದಲೇ ಯಾರಾದರೂ ಬಂದು ಇಲ್ಲಿನ ನಾಯಕರಿಗೆ ಕಡಿವಾಣ ಹಾಕಲಿ. ಇಲ್ಲವಾದರೆ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಾದರೂ ಜವಾಬ್ದಾರಿ ತೆಗೆದುಕೊಂಡು ಹಾದಿಬೀದಿ ಹೇಳಿಕೆಗಳಿಗೆ ನಿಯಂತ್ರಣ ಹಾಕಲಿ. ನಮ್ಮದೇ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮವರೇ ಸಮನ್ವಯತೆ ಮೀರಿ ಮಾತನಾಡಿದರೆ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗುತ್ತದೆ.

ಜನಸಾಮಾನ್ಯರೂ ಕೂಡ ಏನಂದುಕೊಳ್ಳುತ್ತಾರೆ ಎಂದು ಕುಪೇಂದ್ರರೆಡ್ಡಿ ಪ್ರಶ್ನಿಸಿದ್ದಾರೆ. ಜೆಡಿಎಸ್ ಕಡಿಮೆ ಸ್ಥಾನ ಗಳಿಸಿದ್ದು ನಿಜ. ಹಾಗಂತ ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಅವರಾಗಿಯೇ ಬಂದಿದ್ದಾರೆ, ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಉತ್ತಮ ಸರ್ಕಾರ ನಡೆಸಲು ಸಹಕಾರ ನೀಡಿದರೆ 5 ವರ್ಷ ಮಾತ್ರವಲ್ಲ, ಮುಂದಿನ 15 ವರ್ಷಗಳಲ್ಲೂ ನಾವೇ ಅಧಿಕಾರದಲ್ಲಿರಲು ಸಾಧ್ಯ. ಇಲ್ಲವಾದರೆ ಅವರ ದಾರಿ ಅವರಿಗೆ ಎಂದು ಹೇಳಿದ್ದಾರೆ.

ಕುಪೇಂದ್ರರೆಡ್ಡಿ ಹೇಳಿಕೆಗೆ ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಅಧಿಕಾರಕ್ಕಾಗಿ ಕಾಂಗ್ರೆಸ್‍ನ ಮನೆ ಬಾಗಿಲಿಗೆ ಹೋಗಿರಲಿಲ್ಲ. ಅವರಾಗಿಯೇ ಬಂದಿದ್ದಾರೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂಬ ಹೇಳಿಕೆಗಳು ಹೊರಬರುತ್ತಿವೆ.

ಇವು ಅಪ್ರಸ್ತುತ. ನನಗೆ ಸಿದ್ದರಾಮಯ್ಯ ಅವರ ಜೊತೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಕಿಡಿಗೇಡಿತನದ, ಹೊಟ್ಟೆ ಕಿಚ್ಚಿನ ಹೇಳಿಕೆಗಳನ್ನು ಕೊಡುವುದು, ಏಕವಚನದಲ್ಲಿ ಮಾತನಾಡುವುದು ನನ್ನ ಜಾಯಮಾನವಲ್ಲ, ನನ್ನ ರಕ್ತದಲ್ಲೂ ಅದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಅವರ ಬಗ್ಗೆ ನಾನು ವೈಯಕ್ತಿಕವಾಗಿ ಅಪಾರ ಗೌರವ ಹೊಂದಿದ್ದೇನೆ. ಆದರೂ ಟ್ವೀಟರ್‍ನಲ್ಲಿ ಹೆಸರನ್ನು ಯಾಕೆ ಪ್ರಸ್ತಾಪಿಸಿದ್ದಾರೋ ಗೊತ್ತಿಲ್ಲ.ನಾನು ಸಿದ್ದರಾಮಯ್ಯ ಜೊತೆಯಲ್ಲಿರಲಿ, ಇಲ್ಲದಿರಲಿ ಅವರ ಮೇಲೆ ಗೌರವ ಹೊಂದಿದ್ದೇನೆ. ಅನುಭವಿಯಾಗಿರುವ ಅವರು ವಿಧಾನಸೌಧದಲ್ಲಿರಬೇಕು ಎಂದು ನಾನೇ ಹೇಳಿಕೆ ನೀಡಿದ್ದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin