ದೋಸ್ತಿ ಸರ್ಕಾರ ಆಯಸ್ಸು ಮುಗೀತಾ..? ಲೋಕಸಭೆ ಫಲಿತಾಂಶಕ್ಕೂ ಮುನ್ನವೇ ಪತನವಾಗುತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 13- ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಸರ್ಕಾರ ಅಸ್ಥಿರಗೊಳ್ಳಲಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬೆಳಗ್ಗೆ ಟ್ವಿಟ್ ಮಾಡಿ ಜೆಡಿಎಸ್ ನಾಯಕರು ನನ್ನನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿದ್ದಾರೆ. ಮೊದಲು ಜಿ.ಟಿ.ದೇವೇಗೌಡ, ಈಗ ಎಚ್.ವಿಶ್ವನಾಥ್. ಮುಂದೆ ಯಾರೋ ಗೊತ್ತಿಲ್ಲ.

ವಿಶ್ವನಾಥ್ ಅವರು ಹೊಟ್ಟೆಕಿಚ್ಚಿನ ಹೇಳಿಕೆಗಳಿಗೆ ಎತ್ತಿದ ಕೈ. ಅವರಿಗೆ ವಿವರವಾದ ಪ್ರತಿಕ್ರಿಯೆ ನೀಡಲು ಸಮ್ಮಿಶ್ರ ಸರ್ಕಾರದ ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ. ಸಮನ್ವಯ ಸಮಿತಿ ಸಭೆಯಲ್ಲಿ ಅವರ ಹೇಳಿಕೆಗಳನ್ನು ಪ್ರಸ್ತಾಪಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಅದರ ಬೆನ್ನಲ್ಲೇ ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ಮುಗಿಲುಮುಟ್ಟುತ್ತಿವೆ. ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತರೆ, ಜೆಡಿಎಸ್ ನಾಯಕರು ಅಧಿಕಾರಕ್ಕಾಗಿ ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ.

ಬೇಕಿದ್ದರೆ ಜತೆಯಲ್ಲಿರಿ, ಇಲ್ಲದಿದ್ದರೆ ಹೋಗಿ ಎಂಬರ್ಥದಲ್ಲಿ ಮಾತನಾಡಲಾರಂಭಿಸಿದ್ದಾರೆ.
ಸಿದ್ದರಾಮಯ್ಯನವರ ಟ್ವಿಟ್‍ಗೆ ಬೆಂಗಳೂರಿನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನಾಧರಿಸಿ ಸರ್ಕಾರ ನಡೆಯುವಂತೆ ಮಾಡಬೇಕಾದವರು ಈವರೆಗೂ ಆ ಬಗ್ಗೆ ಗಮನ ಹರಿಸಿಲ್ಲ ಎಂದಿರುವುದಲ್ಲದೆ ನಾನು ದೇವೇಗೌಡ ಅಥವಾ ಕುಮಾರಸ್ವಾಮಿಯವರ ಮಾತುಗಳನ್ನು ಕೇಳಿಕೊಂಡು ಹೇಳಿಕೆ ನೀಡುವವನಲ್ಲ.

ವೀರಪ್ಪಮೊಯ್ಲಿ, ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಸಚಿವನಾಗಿದ್ದೆ. ತಪ್ಪು ಮಾಡಿದಾಗ ನಮ್ಮ ಮುಖ್ಯಮಂತ್ರಿಗಳನ್ನೇ ಪ್ರಶ್ನೆ ಮಾಡಿದ್ದೆ. ನನಗೆ 30 ವರ್ಷಗಳ ರಾಜಕೀಯ ಅನುಭವ ಇದೆ. ಸಿದ್ದರಾಮಯ್ಯ ಅವರು ಹೇಳಿದಂತೆ ಹೊಟ್ಟೆಕಿಚ್ಚಿನ, ಕಿಡಿಗೇಡಿತನದ ಹೇಳಿಕೆ ನೀಡುವ ಜಾಯಮಾನ ನನ್ನದಲ್ಲ. ನನ್ನ ರಕ್ತದಲ್ಲಿ ಆ ಗುಣಗಳಿಲ್ಲ ಎಂದಿದ್ದಾರೆ.

ವಿಶ್ವನಾಥ್ ಅವರ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮ್ಮಿಶ್ರ ಸರ್ಕಾರ ಆರೋಗ್ಯಕರವಾಗಿ ನಡೆಯಬೇಕಾದರೆ ಪ್ರಚೋದನಕಾರಿ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್‍ನವರಿಗಾಗಲಿ, ಕಾಂಗ್ರೆಸ್‍ನವರಿಗಾಗಲಿ ಹಗುರವಾಗಿ ಮಾತನಾಡಬಾರದು. ಸಿದ್ದರಾಮಯ್ಯನವರ ಕುರಿತು ವಿಶ್ವನಾಥ್ ಹೇಳಿಕೆಗಳು ಸರಿಯಲ್ಲ. ಈ ಬಗ್ಗೆ ಜೆಡಿಎಸ್ ವರಿಷ್ಠರು ಮೌನ ಮುರಿದು ಪ್ರತಿಕ್ರಿಯೆ ನೀಡಬೇಕು ಎಂದಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿರುವ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು, ಕೆಲವು ನಾಯಕರು ಬಾಯಿ ಚಪಲಕ್ಕಾಗಿ ತಮ್ಮ ತೀಟೆ ತೀರಿಸಿಕೊಳ್ಳಲು ಮಾತನಾಡುತ್ತಿದ್ದಾರೆ ಎಂದು ವಿಶ್ವನಾಥ್ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ನಾನು ಕೂಡ ಹೇಳುತ್ತೇನೆ ಎಂದಿದ್ದಾರೆ. ಸಿದ್ದರಾಮಯ್ಯನವರ ಟ್ವಿಟ್ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಸಚಿವ ಜಿ.ಟಿ.ದೇವೇಗೌಡ, ನಾನು ಸಿದ್ದರಾಮಯ್ಯನವರ ಬಗ್ಗೆ ಎಂದೂ ಏಕವಚನದಲ್ಲಾಗಲಿ, ಅಗೌರವದಿಂದಾಗಲಿ ಮಾತನಾಡಿಲ್ಲ.

ಆದರೂ ಟ್ವಿಟರ್‍ನಲ್ಲಿ ನನ್ನ ಹೆಸರನ್ನು ಏಕೆ ಪ್ರಸ್ತಾಪಿಸಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯನವರ ಟ್ವಿಟರ್ ಬೆನ್ನ ಹಿಂದೆಯೇ ರಾಜ್ಯಸಭಾ ಸದಸ್ಯ ಹಾಗೂ ಜೆಡಿಎಸ್ ನಾಯಕ ಕುಪೇಂದ್ರರೆಡ್ಡಿ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದು, ನಾವೇನು ಅಧಿಕಾರಕ್ಕಾಗಿ ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ.

ನೀವಾಗಿಯೇ ಬಂದು ಬೇಷರತ್ ಬೆಂಬಲ ಕೊಟ್ಟು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಿ ಎಂದು ಹೇಳಿದ್ದೀರ. ಈಗ ಹಾದಿ ಬೀದಿಯಲ್ಲಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾತನಾಡುತ್ತಿದ್ದಾರೆ. ಇಷ್ಟವಿದ್ದರೆ ಮೈತ್ರಿಯಲ್ಲಿ ಮುಂದುವರಿಯಿರಿ, ಇಲ್ಲದಿದ್ದರೆ ನಿಮ್ಮ ದಾರಿ ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ದೋಸ್ತಿ ಪಕ್ಷಗಳ ನಡುವಿನ ವಾಕ್ಸಮರ ಲಾಭ ಪಡೆಯುತ್ತಿರುವ ಬಿಜೆಪಿ, ಸಮ್ಮಿಶ್ರ ಸರ್ಕಾರ ತನ್ನ ಒಳಜಗಳದಿಂದಲೇ ಪತನಗೊಳ್ಳುತ್ತದೆ ಎಂದು ಹೇಳಿಕೆ ನೀಡಿದೆ. ಬಾಗಲಕೋಟೆಯಲ್ಲಿ ಮಾತನಾಡಿರುವ ಬಿಜೆಪಿ ನಾಯಕ ಈಶ್ವರಪ್ಪನವರು, ಸಿದ್ದರಾಮಯ್ಯ ಈ ಜನ್ಮದಲ್ಲಿ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ.

ಈ ಹಿಂದೆ ಅಧಿಕಾರ ನಡೆಸಿದ ಭ್ರಮೆಯಲ್ಲಿ ತಾವೇ ಮುಖ್ಯಮಂತ್ರಿ ಎಂದು ಚೇಲಾಗಳ ಮೂಲಕ ಹೇಳಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಅವರನ್ನು ಪಕ್ಷದಿಂದ ಹೊರಹಾಕಲಿದೆ ಎಂದಿದ್ದಾರೆ.

ರಾಜಕೀಯ ವಲಯದಲ್ಲಿ ಇಂದು ದಿಢೀರ್ ಬೆಳವಣಿಗೆಗಳಾಗಿದ್ದು, ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೂ 10 ದಿನ ಬಾಕಿ ಇರುವ ಮೊದಲೇ ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಆರಂಭಗೊಂಡಿವೆ. ಇದು ತಾರಕಕ್ಕೇರಿದರೆ ಸಮ್ಮಿಶ್ರ ಸರ್ಕಾರ ಪತನಗೊಳ್ಳಬಹುದೆ ಎಂಬ ಚರ್ಚೆಗಳು ಆರಂಭಗೊಂಡಿವೆ.

ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಿ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಬೇಕಾಗಿದ್ದ ಸಿದ್ದರಾಮಯ್ಯ ಅವರೇ ಟ್ವಿಟರ್ ಮೂಲಕ ವಾಕ್ಸಮರಕ್ಕೆ ನಾಂದಿ ಹಾಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈವರೆಗೂ ಸಮ್ಮಿಶ್ರ ಸರ್ಕಾರದಲ್ಲಿ ನಡೆದ ಸಂಘರ್ಷಮಯ ಬೆಳವಣಿಗೆಗಳ ಹಿಂದೆ ಸಿದ್ದರಾಮಯ್ಯನವರಿದ್ದಾರೆ ಎಂಬ ಅಪವಾದಕ್ಕೆ ಇಂದಿನ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.

Facebook Comments

Sri Raghav

Admin