‘ಜೆಡಿಎಸ್ ಪರಿಷತ್‍ ಸಭಾಪತಿ ಸ್ಥಾನ ಕಾಂಗ್ರೆಸ್‍ಗೆ ಬಿಟ್ಟುಕೊಡದಿದ್ದರೆ ‘ಮೈತ್ರಿ’ ಮುರಿದುಹಾಕಿ’

ಈ ಸುದ್ದಿಯನ್ನು ಶೇರ್ ಮಾಡಿ

KPCC--01

ಬೆಂಗಳೂರು, ಜು.11-ವಿಧಾನಪರಿಷತ್‍ನ ಸಭಾಪತಿ ಸ್ಥಾನ ಕಾಂಗ್ರೆಸ್‍ಗೆ ಬಿಟ್ಟುಕೊಡಲೇಬೇಕು. ಇಲ್ಲವಾದರೆ ಸಮ್ಮಿಶ್ರ ಸರ್ಕಾರ ಮುಂದುವರೆಯುವ ಅಗತ್ಯವೇ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಭಿಪ್ರಾಯಗಳು ಕೇಳಿ ಬಂದಿವೆ. ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್, ಕಾಂಗ್ರೆಸ್ ಪಕ್ಷದ ಸಚಿವರು ಭಾಗವಹಿಸಿದ್ದರು.

ಸಭೆಯಲ್ಲಿ ಚಿತ್ರದುರ್ಗ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ವಿಷಯ ಪ್ರಸ್ತಾಪಿಸಿ, ವಿಧಾನಪರಿಷತ್‍ನಲ್ಲಿ ನಮ್ಮ ಶಾಸಕರ ಸಂಖ್ಯೆ ಹೆಚ್ಚಾಗಿದೆ. ಸಭಾಪತಿ ಸ್ಥಾನವನ್ನು ನಾವೇ ಉಳಿಸಿಕೊಳ್ಳಬೇಕು. ಕಡಿಮೆ ಶಾಸಕರಿದ್ದರೂ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ವಿಧಾನಪರಿಷತ್‍ನಲ್ಲಿ ಸಭಾಪತಿ ಬಿಟ್ಟುಕೊಡುವುದು ಒಳ್ಳೆಯದಲ್ಲ. ಒಂದು ವೇಳೆ ಜೆಡಿಎಸ್ ನಾಯಕರು ಸಭಾಪತಿ ಸ್ಥಾನ ಬಿಟ್ಟುಕೊಡಲು ಒಪ್ಪದಿದ್ದರೆ ಸಮ್ಮಿಶ್ರ ಸರ್ಕಾರದಿಂದ ಹೊರಬನ್ನಿ ಎಂದು ಸಲಹೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ, ಅಧಿಕಾರಿಗಳ ವರ್ಗಾವಣೆ, ಬಜೆಟ್‍ನಲ್ಲಿ ಕರಾವಳಿ, ಹೈದರಾಬಾದ್-ಕರ್ನಾಟಕ ಭಾಗಗಳ ನಿರ್ಲಕ್ಷ್ಯ ಸೇರಿದಂತೆ ಹಲವಾರು ವಿಷಯಗಳ ಕುರಿತು ಶಾಸಕಾಂಗ ಸಭೆಯಲ್ಲಿಂದು ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಯಾಗಿಲ್ಲ.

ಪ್ರತಿಯೊಂದು ವಿಷಯಕ್ಕೂ ಇಲಾಖಾವಾರು ಸಚಿವರನ್ನೇ ಭೇಟಿ ಮಾಡಬೇಕಿದೆ. ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ಅಧಿಕಾರಿಗಳಿಗೆ ಸ್ಪಷ್ಟವಾದ ಸೂಚನೆ ನೀಡುವವರು ಇಲ್ಲದಂತಾಗಿದೆ. ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳ ಸಚಿವರಿರುವ ಕಡೆಗಳಲ್ಲಿ ಗೊಂದಲಗಳು ಹೆಚ್ಚಾಗಿದ್ದು, ಅಧಿಕಾರಿಗಳಿಗೆ ಯಾರ ಮಾತು ಕೇಳಬೇಕೆಂಬ ಜಿಜ್ಞಾಸೆ ಉಂಟಾಗಿದೆ. ಹೀಗಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹಲವಾರು ಕಾಮಗಾರಿಗಳು ಸ್ಥಗಿತಗೊಂಡಿದ್ದು, ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳೂತ್ತಿದ್ದಾರೆ. ಅವರಿಗೆ ಸರಿಯಾದ ನಿರ್ದೇಶನ ನೀಡುವವರೇ ಇಲ್ಲದಂತಾಗಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಉಸ್ತುವಾರಿಗಳನ್ನು ನೇಮಿಸುವಾಗ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗದಂತೆ ಎಚ್ಚರ ವಹಿಸಿ ಎಂದು ಶಾಸಕರು ಸಲಹೆ ನೀಡಿದ್ದಾರೆ.

ಬಜೆಟ್‍ನಲ್ಲಿ ಅನ್ನಭಾಗ್ಯ ಅಕ್ಕಿಯಲ್ಲಿ 2 ಕೆಜಿ ಕಡಿತ ಮಾಡಿರುವುದು ಸರಿಯಲ್ಲ. ಬಡಜನರ ಬದುಕಿಗೆ ಆಸರೆಯಾಗಿದ್ದ ಈ ಯೋಜನೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ, ಅದೇ ರೀತಿ ಇತ್ತೀಚೆಗೆ ಇಂದಿರಾ ಕ್ಯಾಂಟೀನ್‍ಗಳು ಮುಚ್ಚುವ ಸ್ಥಿತಿ ತಲುಪಿವೆ. ಕಾಂಗ್ರೆಸ್ ಸಚಿವರು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಂದಿರಾ ಕ್ಯಾಂಟೀನ್ ಕಾಂಗ್ರೆಸ್‍ನ ಮಹತ್ವಾಕಾಂಕ್ಷೆ ಯೋಜನೆ. ಅದನ್ನು ಮುಚ್ಚಿದರೆ ಜನರು ಶಾಪ ಹಾಕುತ್ತಾರೆ. ಬಡವರ ಯೋಜನೆಗಳು ಹಾದಿ ತಪ್ಪದಂತೆ ಕ್ರಮ ಕೈಗೊಳ್ಳಿ ಎಂದು ಶಾಸಕರು ಒತ್ತಾಯಿಸಿದ್ದಾರೆ.

ಉತ್ತರ ಕರ್ನಾಟಕ, ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಕನಿಷ್ಠ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗಲಾದರೂ ಒಂದಿಷ್ಟು ಹೊಸ ಘೋಷಣೆಗಳನ್ನು ಮಾಡಿ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಜನರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಲಾಗಿದೆ. ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ದಿನೇಶ್‍ಗುಂಡೂರಾವ್ ಅವರನ್ನು ಅಭಿನಂದಿಸಲಾಯಿತು.

ಗೈರು ಹಾಜರಿ: ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಸತೀಶ್ ಜಾರಕಿ ಹೊಳಿ ಅವರು ಶಾಸಕಾಂಗ ಸಭೆಯಿಂದ ದೂರು ಉಳಿದಿದ್ದರು. ಸಂಸದರು, ವಿಧಾನಪರಿಷತ್ ಸದಸ್ಯರು, ಬಹುತೇಕ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಪ್ರಭಾವಿ ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಈ ಹಿಂದೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಿದಾಗಲೂ ಈ ಹಿರಿಯ ಶಾಸಕರು ಗೈರು ಹಾಜರಾಗಿದ್ದನ್ನು ಗಮನಿಸಬಹುದು.

Facebook Comments

Sri Raghav

Admin