ಅತೃಪ್ತರಿಂದ ಸ್ಪೀಕರ್‌ಗೆ ಮತ್ತೊಮ್ಮೆ ರಾಜೀನಾಮೆ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜು.11-ಸುಪ್ರೀಂಕೋರ್ಟ್ ನಿರ್ದೇಶನದಂತೆ ನಾವೆಲ್ಲ ಬೆಂಗಳೂರಿಗೆ ತೆರಳಿ ಮತ್ತೊಮ್ಮೆ ವಿಧಾನಸಭೆ ಸ್ಪೀಕರ್‍ಗೆ ರಾಜೀನಾಮೆ ಸಲ್ಲಿಸುತ್ತಿದ್ದು, ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅತೃಪ್ತ ಶಾಸಕರು ಪುನರುಚ್ಚರಿಸಿದ್ದಾರೆ.

ಇಲ್ಲಿನ ರಿನೈಸೆನ್ಸ್ ಹೋಟೆಲ್‍ನಲ್ಲಿ ಕಳೆದ ಐದು ದಿನಗಳಿಂದ ವಾಸ್ತವ್ಯ ಹೂಡಿರುವ 10 ಮಂದಿ ಅತೃಪ್ತ ಶಾಸಕರು ನ್ಯಾಯಾಲಯದ ಆದೇಶದಂತೆ ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ.  ಹೊರಡುವ ಮುನ್ನ ಭಿನ್ನಮತೀಯರ ಪರ ಸುದ್ದಿಗೋಷ್ಠಿ ನಡೆಸಿದ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜ್, ನ್ಯಾಯಾಲಯ ನೀಡಿರುವ ಸೂಚನೆಯಂತೆ ನಾವೆಲ್ಲರೂ ಸಂಜೆ 6 ಗಂಟೆಯೊಳಗೆ ವಿಧಾನಸಭೆಯ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿಯಾಗಿ, ಪುನಃ ರಾಜೀನಾಮೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ನಾವು ಈಗಾಗಲೇ ತೆಗೆದುಕೊಂಡಿರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಮುಂಬೈ ಹೋಟೆಲ್‍ನಲ್ಲಿ ಉಳಿದುಕೊಂಡಿರುವುದಕ್ಕೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲವರು ಅನಗತ್ಯವಾಗಿ ನಮಗೆ ಬಿಜೆಪಿಯವರು ಹೋಟೆಲ್ ಬುಕ್ ಮಾಡಿಕೊಟ್ಟಿದ್ದಾರೆ. ಇಲ್ಲಿನ ಕೆಲವು ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ನಾವು ಸ್ವ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇವೆ. ಇದರಲ್ಲಿ ಬಿಜೆಪಿ ಪಾತ್ರ ಇಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

ನಮಗೆ ರಕ್ಷಣೆ ಬೇಕೆಂದು ಇಲ್ಲಿನ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೆವು. ಹಾಗಾಗಿ ಪೊಲೀಸರು ನಮಗೆ ಭದ್ರತೆ ಒದಗಿಸಿದ್ದಾರೆ. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಯೇ ಹೊರತು ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಹೇಳಿದರು.

ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ ಮುಂಬೈನಲ್ಲಿದ್ದ ಶಾಸಕರೆಲ್ಲರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin