ನಾಗರಾಜ್ ಹೇಳಿಕೆಗೆ ಕಾಂಗ್ರೆಸ್, ಜೆಡಿಎಸ್ ಕೆಂಡಾಮಂಡಲ

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ, ಅ.16- ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ತಾಲ್ಲೂಕಿನ ಕೆಲ ಪ್ರಭಾವಿ ರಾಜಕಾರಣಿಗಳು ನನ್ನನ್ನು ಅವರ ಪಕ್ಷಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಬಿಜೆಪಿ ನಾಯಕ, ಮಾಜಿ ಶಾಸಕ ನಾಗರಾಜ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿರುವ ನಾಗರಾಜ್ ಅವರೇ ನಮ್ಮನ್ನು ಭೇಟಿಯಾಗಿ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ, ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ನಾಗರಾಜ್ ಅವರು ಕೆಲ ಪ್ರಭಾವಿ ರಾಜಕಾರಣಿಗಳು ಅವರ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಅವರಿಗೆ ತಾಕತ್ತಿದ್ದರೆ ಪ್ರಭಾವಿ ರಾಜಕಾರಣಿಯ ಹೆಸರು ಹೇಳಲಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಸವಾಲು ಹಾಕಿದ್ದಾರೆ.

ಇತ್ತೀಚೆಗೆ ಈ ಸಂಜೆ ಪತ್ರಿಕೆ ಸುದ್ದಿಯನ್ನಾಧರಿಸಿ ಪತ್ರಿಕಾಗೋಷ್ಠಿ ನಡೆಸಿದ ನಾಗರಾಜ್ ಅವರು, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. ಅನ್ಯ ಪಕ್ಷಗಳ ಕೆಲ ಪ್ರಭಾವಿ ಮುಖಂಡರು ನನ್ನನ್ನು ಅವರ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಹೇಳಿಕೆಗೆ ಸ್ಥಳೀಯ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಕೆಂಡಾಮಂಡಲರಾಗಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿದ್ದ ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್ ಮತ್ತಿತರ ಮುಖಂಡರನ್ನು ಬಿಜೆಪಿಗೆ ಕರೆತಂದದ್ದೇ ನಾನು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು  ನಾನೇ ಕಾರಣ. ಇನ್ನೂ ಕೆಲ ಕಾಂಗ್ರೆಸಿಗರು ನನ್ನ ಸಂಪರ್ಕದಲ್ಲಿ ದ್ದಾರೆ ಎಂದು ನಾಗರಾಜ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‍ನ ಐದು ಶಾಸಕರು ಈಗಲೂ ನನ್ನ ಸಂಪರ್ಕದಲ್ಲಿ ದ್ದಾರೆ. ಆದರೆ, ಯಡಿಯೂರಪ್ಪ ಅವರೇ ಸದ್ಯಕ್ಕೆ ಅವರನ್ನು ಪಕ್ಷಕ್ಕೆ ಕರೆತರುವುದು ಬೇಡ ಎಂದಿದ್ದಕ್ಕೆ ಸುಮ್ಮನಾಗಿದ್ದೇನೆ. ಈಗಲೂ ಆದೇಶ ಸಿಕ್ಕಿದರೆ ಐವರು ಕಾಂಗ್ರೆಸಿಗರನ್ನು ಬಿಜೆಪಿಗೆ ಕರೆತರಲು ಸಿದ್ಧ ಎಂದು ಡ್ಯಾಮೇಜ್ ಕಂಟ್ರೋಲ್ ಹೇಳಿಕೆ ನೀಡುವ ಮೂಲಕ ನಾಗರಾಜ್ ಇದೀಗ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.

ಈ ನಡುವೆ ನೆಲಮಂಗಲ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ನಾಗರಾಜು, ಹಲವು ಶಾಸಕರೊಂದಿಗೆ ಸಂಪರ್ಕವಿಟ್ಟುಕೊಂಡು ಬಿಜೆಪಿ ಸರ್ಕಾರ ರಚಿಸಲು ಕಾರಣವಾಗಿರುವ ನಾನು ಪಕ್ಷ ತೊರೆಯುವುದು ಅಸಾಧ್ಯ ಎಂದು ತಿಳಿಸಿದ್ದಾರೆ.

ಅನ್ಯ ಪಕ್ಷಗಳ ಮುಖಂಡರು ಬಿಜೆಪಿ ಸೇರಲು ನನ್ನನ್ನು ಸಂಪರ್ಕಿಸಿದ್ದಾರೆಯೇ ವಿನಃ ನಾನು ಅವರನ್ನು ಸಂಪರ್ಕಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕಿನಿಂದಾಗಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದನ್ನೇ ತಪ್ಪಾಗಿ ಅರ್ಥೈಯಿಸಲಾಗಿದೆ ಎಂದು ನಾಗರಾಜ್ ಪ್ರತಿಕ್ರಿಯಿಸಿದ್ದಾರೆ. ಸಭೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್ ಚೌದರಿ ಸೇರಿದಂತೆ ಹಲವು ಮುಖಂಡರು ಜತೆಗಿದ್ದರು.

Facebook Comments

Sri Raghav

Admin