ಸಂಪತ್‍ರಾಜ್ ಬಂಧನದ ಬೆನ್ನಲ್ಲೇ ಕಾಂಗ್ರೆಸ್-ಬಿಜೆಪಿ ನಡುವೆ ಟ್ವಟರ್ ವಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ಸಂಪತ್‍ರಾಜ್ ಬಂಧನದ ಬೆನ್ನಲ್ಲೇ ಕಾಂಗ್ರೆಸ್-ಬಿಜೆಪಿ ನಡುವೆ ಕೆಸರೆರಚಾಟ ಆರಂಭವಾಗಿದ್ದು, ಎರಡು ಪಕ್ಷಗಳ ಟ್ವಿಟರ್ ಖಾತೆಯಲ್ಲಿ ಪರಸ್ಪರ ಆರೋಪ- ಪ್ರತ್ಯಾರೋಪಗಳನ್ನು ಮಾಡಿಕೊಂಡಿವೆ.  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈಗಲಾದರೂ ನನ್ನ ಪರವಾಗಿ ನಿಲ್ಲಲಿ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವಿಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್‍ನಲ್ಲಿ ಏನಾಗುತ್ತಿದೆ? ಒಬ್ಬ ದಲಿತ ಶಾಸಕನಿಗೆ ನಿಮ್ಮ ಪಕ್ಷದಲ್ಲಿ ಬೆಲೆಯಿಲ್ಲವೇ ಡಿ.ಕೆ.ಶಿವಕುಮಾರ್ ಎಂದು ಪ್ರಶ್ನಿಸಿದೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್‍ಕಾಲದಿಂದಲೇ ಕಾಂಗ್ರೆಸ್ ದಲಿತ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲೂ ಅದರ ಮುಂದುವರೆದ ಭಾಗಗಳನ್ನು ಸಿದ್ದರಾಮಯ್ಯ ಮಾಡಿ ತೋರಿಸಿದ್ದಾರೆ.  ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರ ಸೋಲಿನ ಹಿಂದೆ ಕಾಂಗ್ರೆಸ್‍ನ ದಲಿತ ವಿರೋಧಿ ನೀತಿ ಇದೆ. ಕಾಂಗ್ರೆಸ್ ದಲಿತ ವಿರೋಧಿಯಾಗಿದೆ ಎಂದು ಟ್ವಿಟ್ ಮಾಡಿದೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಅನಂತ್‍ಕುಮಾರ್ ಹೆಗಡೆ ಅವರು ದಲಿತರನ್ನು ಬೀದಿ ನಾಯಿಗಳು ಎಂದು ಹೇಳಿದಾಗ, ದಲಿತ ಮಹಿಳೆ ಮೇಲೆ ಶಾಸಕ ಸಿದ್ದು ಸವದಿ ಹಲ್ಲೆ ಮಾಡಿದಾಗ, ಸಂವಿಧಾನ ರಚನೆಯ ಕೈಪಿಡಿಯಲ್ಲಿ ಅಂಬೇಡ್ಕರ್ ಹೆಸರು ಮರೆಮಾಚಿದಾಗ ಬಿಜೆಪಿಗೆ ದಲಿತ ಪರ ಕಾಳಜಿ ಮರೆತು ಹೋಗಿತ್ತು. ಈಗ ಇದ್ದಕ್ಕಿದ್ದಂತೆ ದಲಿತರು ಎನ್ನುವ ಮೂಲಕ ದಲಿತರು ನೆನಪಾಗಿದೆ. ದಲಿತರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬೇಡಿ. ನಿಮ್ಮ ಬಣ್ಣ ಬಯಲಾಗುತ್ತದೆ ಎಂದು ಎಚ್ಚರಿಸಿದೆ.

Facebook Comments