ಉಪಚುನಾವಣೆ ಕದನಕ್ಕೂ ಮುನ್ನವೇ ಕೈಚೆಲ್ಲಿದ ಕಾಂಗ್ರೆಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3-ರಾಜ್ಯಸರ್ಕಾರಕ್ಕೆ ಅಳಿವು-ಉಳಿವಿನ ಪ್ರಶ್ನೆಯಾಗಿರುವ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಯುದ್ಧಕ್ಕೂ ಮೊದಲೇ ಶಸ್ತ್ರ ತ್ಯಾಗ ಮಾಡಿದಂತೆ ವರ್ತಿಸುತ್ತಿದೆ. ಆದರೆ ಉಪಚುನಾವಣೆಯಲ್ಲಿ 12 ಸ್ಥಾನ ಗೆಲ್ಲುತ್ತೇವೆ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರಿಗೆ ಒಳಗೊಳಗೇ ಭಯ ಇದ್ದಂತಿದೆ. ಕಾಂಗ್ರೆಸ್ ನಾಯಕರ ಪ್ರಕಾರವೇ 5 ರಿಂದ 6 ಸ್ಥಾನ ಗೆಲ್ಲುವುದು ದುಃಸ್ಸಾಹಸ. ಹೀಗಾಗಿಯೇ ರಾಜ್ಯಸಭೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಯುದ್ಧಕ್ಕೂ ಮುನ್ನವೇ ಶಸ್ತ್ರ ತ್ಯಾಗ ಮಾಡಿದೆ.

ಇತ್ತ ಜೆಡಿಎಸ್ ಜೊತೆಗಿನ ನಂಟು ಬಯಸಿ ಕಾಂಗ್ರೆಸ್‍ನ ಕೆಲ ನಾಯಕರು ಏಕಾಏಕಿ ಕ್ರಿಯಾಶೀಲರಾಗಿದ್ದಕ್ಕೆ, ಸಿದ್ದರಾಮಯ್ಯ ಅವರ ಬಣ ರಾಜ್ಯಸಭೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸದ್ದಿಲ್ಲದೆ ಎದಿರೇಟು ನೀಡಿದೆ. ಉಪಚುನಾವಣೆಯಲ್ಲಿ ಕನಿಷ್ಠ 12 ಸ್ಥಾನ ಗೆಲ್ಲುತ್ತೇವೆ, 15ಕ್ಕೆ ಹದಿನೈದು ಗೆದ್ದರೂ ಆಶ್ಚರ್ಯವಿಲ್ಲ ಎಂದು ಸಿದ್ದರಾಮಯ್ಯ ಹೋದಲ್ಲೆಲ್ಲ, ಬಂದಲ್ಲೆಲ್ಲ ಹೇಳಿಕೊಳ್ಳುತ್ತಿದ್ದಾರೆ.

ಒಂದು ವೇಳೆ ಸಿದ್ದರಾಮಯ್ಯ ಹೇಳಿದಂತೆ ಕಾಂಗ್ರೆಸ್ 12 ಸ್ಥಾನ ಗೆದ್ದಿದ್ದೇ ಆದರೆ ಬಿಜೆಪಿ ಸರ್ಕಾರಕ್ಕೆ ಆಪತ್ತು ತಪ್ಪಿದ್ದಲ್ಲ. ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸದ ಹೊರತು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶವೇ ಇರುವುದಿಲ್ಲ. ಡಿ.9ಕ್ಕೆ ವಿಧಾನಸಭೆ ಉಪಚುನಾವಣೆ ಫಲಿತಾಂಶ ಬರಲಿದೆ, ಡಿ.12ಕ್ಕೆ ರಾಜ್ಯಸಭೆಯ ಒಂದು ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಕಾಂಗ್ರೆಸ್ 12 ಸ್ಥಾನ ಗೆಲ್ಲುವ ವಿಶ್ವಾಸವೇ ಖಚಿತವಾಗಿದ್ದರೆ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿತ್ತು.

ಜೆಡಿಎಸ್ ಜೊತೆ ಮಾತುಕತೆ ನಡೆಸಿ ಹೊಂದಾಣಿಕೆ ಮಾಡಿಕೊಂಡಿದ್ದರೆ, ಕಾಂಗ್ರೆಸ್‍ನ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಮರು ಆಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕೆ.ಸಿ.ರಾಮಮೂರ್ತಿ ಅವರನ್ನು ಸೋಲಿಸಲು ಪ್ರಯತ್ನಿಸಬಹುದಿತ್ತು.

ಈ ಬಗ್ಗೆ ನಿನ್ನೆ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವುದು ಏಕೆ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಕೈ ನಾಯಕರ ಸೋಲಿನ ಭೀತಿಯನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದರೂ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಜೆಡಿಎಸ್ ಸಹಕಾರ ಅಗತ್ಯವಾಗಿತ್ತು. ಒಂದು ವೇಳೆ ಜೆಡಿಎಸ್ ಜೊತೆ ಮತ್ತೆ ಮೈತ್ರಿ ಮಾತುಕತೆ ನಡೆಸಿದರೆ ಅದು ರಾಜ್ಯಸಭೆಗಷ್ಟೇ ಸೀಮಿತಗೊಳ್ಳುವುದಿಲ್ಲ ಸಮ್ಮಿಶ್ರ ಸರ್ಕಾರ ರಚನೆವರೆಗೂ ಮುಂದುವರೆಯುತ್ತದೆ ಎಂಬುದು ಸಿದ್ದರಾಮಯ್ಯ ಬಣವನ್ನು ಕಾಡುತ್ತಿದೆ.

ಈ ಸಂದರ್ಭದಲ್ಲಿ ಮೈತ್ರಿ ಸರ್ಕಾರ ರಚನೆಯಾದರೆ ಜೆಡಿಎಸ್ ನಾಯಕರು ಸಿದ್ದರಾಮಯ್ಯನವರನ್ನಂತೂ ಮುಖ್ಯಮಂತ್ರಿ ಮಾಡುವುದಿಲ್ಲ. ಕಾಂಗ್ರೆಸ್‍ನ ಮತ್ಯಾರಿಗೋ ಅಧಿಕಾರ ಸಿಕ್ಕರೆ ತಮಗಿರುವ ವಿರೋಧ ಪಕ್ಷದ ನಾಯಕ ಸ್ಥಾನವೂ ಸಿದ್ದರಾಮಯ್ಯ ಅವರಿಂದ ಕೈ ತಪ್ಪಿ ಹೋಗಲಿದೆ.

ಅಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುವುದಕ್ಕಾಗಿಯೇ ಕಾಯುತ್ತಿರುವ ಮೂಲ ಕಾಂಗ್ರೆಸ್ಸಿಗರು ಮತ್ತಷ್ಟು ಪ್ರಬಲಗೊಳ್ಳುತ್ತಾರೆ. ಈ ಎಲ್ಲಾ ಸಹವಾಸಗಳೇ ಬೇಡ ಎಂದು ರಾಜ್ಯಸಭೆ ಚುನಾವಣೆಯಿಂದ ಕಾಂಗ್ರೆಸ್ ದೂರ ಉಳಿದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಈ ಒಳಜಗಳಗಳು ಉಪಚುನಾವಣೆ ಮೇಲಷ್ಟೆ ಪರಿಣಾಮ ಬೀರದೆ ಪಕ್ಷ ಸಂಘಟನೆಗೂ ಭಾರೀ ಪೆಟ್ಟು ನೀಡುತ್ತಿದೆ.

Facebook Comments

Sri Raghav

Admin