ಶಾಕಿಂಗ್ ಎಲೆಕ್ಷನ್ ರಿಸಲ್ಟ್ ಎಫೆಕ್ಟ್, ದೇಶದಾದ್ಯಂತ ರಾಜೀನಾಮೆ ಪರ್ವ

ಈ ಸುದ್ದಿಯನ್ನು ಶೇರ್ ಮಾಡಿ

# ಉ.ಪ್ರ. ಒಡಿಶಾ ಕಾಂಗ್ರೆಸ್ ಅಧ್ಯಕ್ಷರ ನಿರ್ಗಮನ
ಲಕ್ನೋ/ಭುವನೇಶ್ವರ, ಮೇ 24 (ಪಿಟಿಐ)- ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಸೋತಿರುವ ಕಾಂಗ್ರೆಸ್‍ನಲ್ಲಿ ಆತ್ಮಾವಲೋಕನ ನಡೆಯುತ್ತಿದ್ದರೆ. ಇನ್ನೊಂದೆಡೆ ಸೋಲಿಗೆ ನೈತಿಕ ಹೊಣೆಹೊತ್ತು ಮುಖಂಡರು ರಾಜೀನಾಮೆ ನೀಡುತ್ತಿರುವ ಪ್ರಹಸನವೂ ಮುಂದಿವರೆದಿದೆ.

ಹಿರಿಯ ನಟ ಮತ್ತು ಉತ್ತರಪ್ರದೇಶ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಅಧ್ಯಕ್ಷ ರಾಜ್ ಬಬ್ಬರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ತ್ಯಾಗ ಪತ್ರವನ್ನು ಇಂದು ಬೆಳಿಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರವಾನಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನಿರೀಕ್ಷಿತ ಹೀನಾಯ ಸೋಲು ಕಂಡಿದೆ. ಇದರಿಂದ ನೈತಿಕ ಜವಾಬ್ದಾರಿ ಹೊತ್ತು ನಾನು. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜ್ ಬಬ್ಬರ್ ತಿಳಿಸಿದ್ದಾರೆ.

# ಭುವನೇಶ್ವರ ವರದಿ: ಅತ್ತ ಒಡಿಶಾದಲ್ಲೂ ಕಾಂಗ್ರೆಸ್ ನೆಲಕಚ್ಚಿರುವುದರಿಂದ ವಿಚಲಿತಗೊಂಡ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ (ಒಪಿಸಿಸಿ) ಅಧ್ಯಕ್ಷ ನಿರಂಜನ್ ಪಟ್ನಾಯಕ್ ಅವರು ಇಂದು ಬೆಳಿಗ್ಗೆ ರಾಜೀನಾಮೆ ನೀಡಿದ್ದಾರೆ.

ಒಡಿಶಾದಲ್ಲಿ ಕಾಂಗ್ರೆಸ್‍ಗೆ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ, ರಾಜ್ಯದಲ್ಲಿ ಪಕ್ಷದ ಸೋಲಿಗೆ ನಾನು ನೈತಿಕ ಹೊಣೆಗಾರಿಕೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪಟ್ನಾಯಕ್ ಹೇಳಿದ್ದಾರೆ. ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖಂಡರು ಸಹ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಅವರ ಮನವೊಲಿಕೆ ಯತ್ನಗಳು ಮುಂದುವರೆದಿದೆ.

# ಕಾರ್ಪೊರೇಟರ್ ಸ್ಥಾನಕ್ಕೆ ರಿಸೇನ್ : ಬೆಂಗಳೂರು,ಮೇ 24-ಕೋಲಾರ ಸಂಸದರಾಗಿ ಆಯ್ಕೆಯಾಗಿರುವ ಕಾಡುಗೋಡಿ ಬಿಬಿಎಂಪಿ ಸದಸ್ಯ ಮುನಿಸ್ವಾಮಿ ಅವರು ತಮ್ಮಕಾರ್ಪೊರೇಟರ್ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ.

ಬಿಬಿಎಂಪಿ ಸದಸ್ಯರಾದವರು ಶಾಸಕರಾಗಿ ಆಯ್ಕೆಯಾದರೆ ಅಂಥವರು ಕಾರ್ಪೊರೇಟರ್ ಮತ್ತು ಶಾಸಕ ಸ್ಥಾನವನ್ನು ಉಳಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.

ಆದರೆ ಸಂಸದರಾಗಿ ಆಯ್ಕೆಯಾದವರು ಯಾವುದೇ ಕಾರಣಕ್ಕೂ ಬಿಬಿಎಂಪಿ ಸದಸ್ಯರಾಗಿ ಮುಂದುವರೆಯಲು ಕಾನೂನಿನಲ್ಲಿ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಮುನಿಸ್ವಾಮಿ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲೇಬೇಕಾಗಿದೆ.

ಈ ಹಿಂದೆ ಕೆ.ಚಂದ್ರಶೇಖರ್, ನರೇಂದ್ರಬಾಬು, ಮುನಿರತ್ನ, ಭೈರತಿ ಬಸವರಾಜ್ ಅವರು ಬಿಬಿಎಂಪಿ ಸದಸ್ಯರಾಗಿದ್ದುಕೊಂಡೇ ಶಾಸಕರಾಗಿ ಆರಿಸಿ ಬಂದಿದ್ದರು. ಇತ್ತೀಚೆಗೆ ಬಸವನಪುರ ವಾರ್ಡ್ ಬಿಜೆಪಿ ಸದಸ್ಯರಾಗಿದ್ದ ಕೆ.ಪೂರ್ಣಿಮಾ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಆದರೆ ಇದುವರೆಗೂ ಯಾವೊಬ್ಬ ಬಿಬಿಎಂಪಿ ಸದಸ್ಯರು ಸಂಸದರಾಗಿ ಆಯ್ಕೆಯಾದ ಇತಿಹಾಸವೇ ಇಲ್ಲ. ಇದೀಗ ಕಾಡುಗೋಡಿ ಸದಸ್ಯ ಮುನಿಸ್ವಾಮಿ ಅವರು ಕೋಲಾರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹಿರಿಯ ಕಾಂಗ್ರೆಸಿಗ ಕೆ.ಎಚ್.ಮುನಿಯಪ್ಪ ಅವರನ್ನು ಪರಾಭವಗೊಳಿಸಿ ದಾಖಲೆ ನಿರ್ಮಿಸಿದ್ದಾರೆ.

ಹೀಗಾಗಿಯೇ ಶಾಸಕರ ರೀತಿಯಲ್ಲೇ ಸಂಸದರು ಕೂಡ ಬಿಬಿಎಂಪಿ ಸದಸ್ಯರಾಗಿ ಮುಂದುವರೆಯಲು ಅವಕಾಶವಿದೆಯೋ ಇಲ್ಲವೋ ಎಂಬ ಅನುಮಾನವಿತ್ತು. ಆದರೆ ಕಾನೂನಿನಲ್ಲಿ ಸಂಸದರು ಬಿಬಿಎಂಪಿ ಸದಸ್ಯರಾಗಿ ಮುಂದುವರೆಯಲು ಅವಕಾಶವಿಲ್ಲ ಎಂಬುದು ಸ್ಪಷ್ಟವಾಗಿದೆ.

# ಪ್ರಚಾರ ಸಮಿತಿಗೆ ಎಚ್.ಕೆ.ಪಾಟೀಲ್ ಪದತ್ಯಾಗ 
ಹುಬ್ಬಳ್ಳಿ,ಮೇ 24- ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ರವಾನಿಸುವುದಾಗಿ ತಿಳಿಸಿದ್ದಾರೆ. ಜನತೆಯ ತೀರ್ಪಿಗೆ ನಾವು ತಲೆ ಬಾಗುತ್ತೇವೆ.

ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ ಎಲ್ಲಾ ಮತದಾರರಿಗೆ ಧನ್ಯವಾದಗಳು. ಫಲಿತಾಂಶದಿಂದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈ ಮಟ್ಟದಲ್ಲಿ ಸೋಲನ್ನು ಅನುಭವಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಈ ಸೋಲಿನ ಹಿನ್ನೆಲೆಯಲ್ಲಿ ನಾನು ನನ್ನ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಮುಂದೆ ಪಕ್ಷಕ್ಕೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ