ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಿದ ಶಾಸಕರೆಷ್ಟು..? ಸಭೆಯ ನಿರ್ಧಾರವೇನು..? ಇಲ್ಲಿದೆ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.9- ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಗರಿಷ್ಠ ಪ್ರಮಾಣದ ಪ್ರಯತ್ನ ಮಾಡೋಣ, ಅದು ಸಾಧ್ಯವಾಗದೇ ಇದ್ದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ಮಾಡಲು ಎಲ್ಲಾ ಸಚಿವರು ಹಾಗೂ ಶಾಸಕರು ಮಾನಸಿಕವಾಗಿ ಸಿದ್ಧವಾಗಿರಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಗೆ ಸುಮಾರು 60 ಮಂದಿ ಶಾಸಕರು ಭಾಗವಹಿಸಿದ್ದರು.

ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಸೇರಿದಂತೆ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಆರಂಭದಲ್ಲೇ ಮಾತನಾಡಿದ ಶಾಸಕರು, ಸರ್ಕಾರದ ಅಳಿವು-ಉಳಿವಿನ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರ ಬೆಂಬಲಿಗ ಪಡೆಯಲ್ಲಿ ಗುರುತಿಸಿಕೊಂಡಿರುವ ಕೆಲವು ಶಾಸಕರು ಮೈತ್ರಿ ಸರ್ಕಾರದಿಂದ ಹೊರ ಬರುವಂತೆ ಒತ್ತಾಯಿಸಿದ್ದಾರೆ.

ಈಗ ಕಷ್ಟಪಟ್ಟು ಅತೃಪ್ತರನ್ನು ಓಲೈಕೆ ಮಾಡಿ ಸರ್ಕಾರ ಉಳಿಸಿಕೊಂಡರೂ ಕೆಲವೇ ದಿನಗಳಲ್ಲಿ ಮತ್ತೆ ಇದೇ ರೀತಿಯ ಬಂಡಾಯ ಚಟುವಟಿಕೆಗಳು ನಡೆಯಲಿವೆ. ಸರ್ಕಾರ ಉಳಿಸಿಕೊಳ್ಳುವುದು ಈಗಿನ ಸಂದರ್ಭದಲ್ಲಿ ಅತ್ಯಂತ ದುಬಾರಿ. ಸರ್ಕಾರ ಉಳಿಸಿಕೊಂಡರೂ ಅದು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅದು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರಿಗೆ ಬೇಕಿದ್ದರೆ ಸರ್ಕಾರ ಉಳಿಸಿಕೊಳ್ಳಲಿ. ಇಲ್ಲವಾದರೆ ಸರ್ಕಾರ ಪತನವಾಗಲಿ. ಮೈತ್ರಿ ಕೂಟದಿಂದಾಗಿ ಕಾಂಗ್ರೆಸ್‍ಗೆ ಹೆಚ್ಚು ನಷ್ಟವಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ನಾವು ಭಾರೀ ಪೆಟ್ಟು ತಿಂದಿದ್ದೇವೆ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಇನ್ನೂ ವಿಳಂಬ ಮಾಡದೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.

ಮೈತ್ರಿ ಕೂಟದಿಂದ ಹೊರ ಬಂದು ವಿರೋಧ ಪಕ್ಷದ ಸ್ಥಾನದಲ್ಲಿ ಕೆಲಸ ಮಾಡಬೇಕು. ಇನ್ನು 2-3 ವರ್ಷದಲ್ಲಿ ವಿಧಾನಸಭೆಗೆ ಚುನಾವಣೆ ಎದುರಾಗಲಿದ್ದು, ಆವರೆಗೂ ಪಕ್ಷ ಸಂಘಟನೆಯನ್ನು ಸದೃಢ ಮಾಡಿ ಸ್ವತಂತ್ರವಾಗಿ ಸ್ಪರ್ಧಿಸಿ ಎಷ್ಟು ಸಾಧ್ಯವೋ ಅಷ್ಟು ಸ್ಥಾನಗಳನ್ನು ಗೆದ್ದು ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಸಾಮಥ್ರ್ಯ ಪಡೆದುಕೊಳ್ಳಬೇಕೆಂದು ಕಾಂಗ್ರೆಸ್‍ನ ಶಾಸಕರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರ ಮುಂದುವರೆಯಬೇಕು ಎಂಬುದು ಹೈಕಮಾಂಡ್‍ನ ಆಸಕ್ತಿಯಾಗಿದೆ. ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡಿ ಸರ್ಕಾರ ಉಳಿಸಲು ಪ್ರಯತ್ನಿಸುತ್ತೇವೆ. ಅದು ಸಾಧ್ಯವಾಗದೇ ಇದ್ದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಅದಕ್ಕೆ ಎಲ್ಲಾ ಸಚಿವರು, ಶಾಸಕರು ಮಾನಸಿಕವಾಗಿ ಸಿದ್ಧವಿರಬೇಕೆಂದು ಕರೆ ನೀಡಿದ್ದಾರೆ.

Facebook Comments

Sri Raghav

Admin