ಕಾಂಗ್ರೆಸ್‍ನಲ್ಲಿ ಸೋತೋರೆಲ್ಲ ಈಗ ಸಿಎಂ ಆಕಾಂಕ್ಷಿಗಳು : ಸಿಟಿ ರವಿ ವ್ಯಂಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.28- ಅಧಿಕಾರಕ್ಕೆ ಬರಲು ಏದುಸಿರು ಬಿಡುತ್ತಿರುವ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣೆ ನಡೆಯಲು ಇನ್ನೂ ಎರಡು ವರ್ಷ ಬೇಕು. ಸೋತು ಸುಣ್ಣವಾಗಿರುವ ಕಾಂಗ್ರೆಸ್ ಚುನಾವಣೆ ಗೆಲ್ಲಲು ತಿಣುಕಾಡುತ್ತಿದೆ ಎಂದು ಕುಟುಕಿದರು.

ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿಯಾಗಲು ಅನೇಕರು ಕುರ್ಚಿ ಮೇಲೆ ಟವೆಲ್ ಹಾಕಿದ್ದಾರೆ. 2018ರಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಂಡವರ ಪರಿಸ್ಥಿತಿ ಏನಾಯಿತು ಎಂದು ಪ್ರಶ್ನಿಸಿದರು. ಮೊದಲು ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬುದನ್ನು ತೀರ್ಮಾನಿಸಿರಿ. ಎಲ್ಲ ಚುನಾವಣೆಯಲ್ಲೂ ಸೋತು ಮೂಲೆಗುಂಪಾಗಿರುವವರೆಲ್ಲ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಎಂದು ತಿರುಗೇಟು ನೀಡಿದರು.

ಆ ಪಕ್ಷದಲ್ಲಿ ದಿನಕ್ಕೊಬ್ಬರಂತೆ ಮುಖ್ಯಮಂತ್ರಿಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಲೇ ಇದೆ. ಯಾವುದೇ ಕಾರಣಕ್ಕೂ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯುವುದಿಲ್ಲ ಎಂದು ಹೇಳಿದರು. ಈವರೆಗೂ ಕಾಂಗ್ರೆಸ್ ಅಲ್ಪಸಂಖ್ಯಾತರು ಮತ್ತು ದಲಿತರನ್ನು ವೋಟ್‍ಬ್ಯಾಂಕ್ ಮಾಡಿಕೊಂಡು ಮುಗಿಗೆ ತುಪ್ಪ ಸವರಿತು.

ಆ ಸಮುದಾಯದವರಲ್ಲಿ ಜಾಗೃತಿ ಬಂದಿದ್ದರಿಂದ ಅದೇ ಪಕ್ಷದವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್‍ಗೆ ಹೇಳಿಕೊಳ್ಳುವಂತಹ ಒಂದೇ ಒಂದು ಸಮುದಾಯವೂ ಅವರ ಬೆಂಬಲಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು. ದಲಿತರ ಹೆಸರು ಹೇಳಿಕೊಂಡು ಅವರ ಮೂಗಿಗೆ ತುಪ್ಪ ಸವರಿಸಿದಿರಿ. ಕಡೆ ಪಕ್ಷ ಅಲ್ಪಸಂಖ್ಯಾತರಿಗಾದರೂ ಅವಕಾಶ ಕೊಡಿ. ಸಿ.ಎಂ.ಇಬ್ರಾಹಿಂ, ತನ್ವೀರ್ ಸೇಠ್, ಜಮೀರ್ ಅಹಮ್ಮದ್ ಯಾರೇ ಮುಖ್ಯಮಂತ್ರಿಯಾದರೂ ನನ್ನ ಬೆಂಬಲವಿದೆ ಎಂದರು.

ಸಿ.ಎಂ.ಇಬ್ರಾಹಿಂ ನಾನು ಕೂಡ ಆಕಾಂಕ್ಷಿ ಎಂದು ಹೇಳಿರುವುದರಲ್ಲಿ ತಪ್ಪೇನಿಲ್ಲ. ಅವರ ಹೇಳಿಕೆಯನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸಮುದಾಯಕ್ಕೆ ನ್ಯಾಯ ಒದಗಿಸುವುದಾದರೆ ಖಂಡಿತ ಆಗಲಿ. ಅದಕ್ಕೆ ನನ್ನ ಬೆಂಬಲವೂ ಇದೆ ಎಂದು ಹೇಳಿದರು.

Facebook Comments