ಕೊರೋನಾದಿಂದ ಸಂಕಷ್ಟದಲ್ಲಿರುವವರಿಗೆ ಕಾಂಗ್ರೆಸ್ ನೆರವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26- ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಆಳುವ ಸರ್ಕಾರಕ್ಕಿಂತಲೂ ಹೆಚ್ಚಿನದಾಗಿ ಸಂಕಷ್ಟದಲ್ಲಿ ಇರುವ ಜನರಿಗೆ ನೆರವಾಗಿದೆ ಎಂದು ರಾಜ್ಯ ಸಭಾಸದಸ್ಯ ಎಲ್.ಹನುಮಂತಯ್ಯ ಅವರ ನೇತೃತ್ವದ ಸಮಿತಿ ವರದಿ ನೀಡಿದೆ. ಕೋವಿಡ್ ಸಂದರ್ಭದಲ್ಲಿನ ಕಾರ್ಯಚಟುವಟಿಕೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಧ್ಯಂತರ ವರದಿ ನೀಡಿದೆ.

ಬೂತ್ ಮಟ್ಟದಿಂದಲೂ ಮಾಹಿತಿ ಕಲೆ ಹಾಕಿರುವ ಸಮಿತಿ ಕಾಂಗ್ರೆಸ್ ಕಾರ್ಯಕರ್ತರು ನಾಯಕರು ಎಷ್ಟು ಆಹಾರದ ಕಿಟ್ ಗಳನ್ನು ಹಂಚಿಕೆ ಮಾಡಿದ್ದಾರೆ. ರೈತರಿಂದ ಹಣ್ಣು, ತರಕಾರಿಗಳನ್ನು ಎಷ್ಟು ಖರೀದಿ ಮಾಡಿ ಜನರಿಗೆ ಹಂಚಿದ್ದಾರೆ. ಸೋಂಕಿತರಿಗೆ ಎಷ್ಟು ಆಕ್ಸಿಜನ್, ರೆಮ್ ಡಿಸಿವಿರ್ ಒದಗಿಸಿದ್ದಾರೆ. ಎಲ್ಲೆಲ್ಲಿ ಆಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದೆ, ಎಲ್ಲೆಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲಾಗಿದೆ ಎಂಬೆಲ್ಲಾ ಮಾಹಿತಿಗಳನ್ನು ಕಲೆ ಹಾಕಲಾಗಿದ್ದು, ಇಂದು ಅಧ್ಯಕ್ಷರಿಗೆ ನೀಡಲಾಗಿದೆ.

ಈ ವರದಿ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸಕ್ರಿಯವಾಗಿರುವವರನ್ನು ಗುರುತಿಸಲು ನೆರವಾಗಲಿದೆ. ಗ್ರಾಮೀಣ, ನಗರ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಅವಕಾಶ ನೀಡಲು, ಇನ್ನಿತರ ಸ್ಥಾನಮಾನಗಳಿಗೆ ಕೋವಿಡ್ ಸಂದರ್ಭದಲ್ಲಿ ಪಕ್ಷದ ಸೂಚನೆ ಆಧರಿಸಿ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದನ್ನು ಮಾನದಂಡವಾಗಿ ಪರಿಗಣಿಸುವ ಸಾಧ್ಯತೆ ಇದೆ.

ಹನುಮಂತಯ್ಯ ಅವರ ಸಮಿತಿ ಯಾರು ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ ಎಂಬ ಮಾಹಿತಿಯನ್ನು ಕಲೆ ಹಾಕಿದ್ದು, ಅದನ್ನು ಪ್ರತ್ಯೇಕವಾಗಿ ಅಧ್ಯಕ್ಷರಿಗೆ ನೀಡಲಿದೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೆಲವರು ಲೆಡರ್ ಹೆಡ್ ನಾಯಕರಾಗಿದ್ದು, ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಸೋಮಾರಿತನ ರೂಢಿಸಿಕೊಂಡಿದ್ದಾರೆ. ಅಂತಹವರನ್ನು ಸ್ಥಾನಮಾನಗಳಿಂದ ದೂರ ಇಡಲು ನಿರ್ಧರಿಸಿರುವ ಅಧ್ಯಕ್ಷರು ಜನರ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್ ನಾಯಕ ಸ್ಪಂದನೆಯನ್ನು ಅರಿಯಲು ಸಮಿತಿ ರಚನೆ ಮಾಡಿದ್ದರು.

ಅದರಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಕೆಲಸ ಮಾಡುತ್ತಿದ್ದರು. ಬೂತ್ ಮಟ್ಟದಿಂದ ಅಂಕಿ ಅಂಶಗಳನ್ನು ಕಲೆ ಹಾಕಿ ಮಧ್ಯಂತರ ವರದಿ ತಯಾರಿಸಲಾಗಿದೆ. ಕೋವಿಡ್ ಮತ್ತಷ್ಟು ಮುಂದುವರೆದಿರುವುದರಿಂದ ಅಂತಿಮ ವರದಿಗೆ ಮತ್ತಷ್ಟು ಕಾಲಾವಕಾಶ ತೆಗೆದುಕೊಳ್ಳಲಾಗಿದೆ.

ಈ ವರದಿಯ ಜೊತೆಯಲ್ಲಿ ಸರ್ಕಾರದ ವೈಪಲ್ಯಗಳನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಮುಂದಾಗಿದೆ. ಕಳೆದ ವರ್ಷ ಇದೇ ರೀತಿ ವರದಿಯನ್ನು ಕಾಂಗ್ರೆಸ್ ಪ್ರಕಟಿಸದ ಬೆನ್ನಲ್ಲೆ ಬಿಜೆಪಿ ಕೋವಿಡ್ ಅವಧಿಯಲ್ಲಿ ತಾನು ಮಾಡಿದ ಸೇವೆಯ ಮಾಹಿತಿಯನ್ನು ಕಲೆ ಹಾಕಿ ಪ್ರಕಟ ಮಾಡಿತ್ತು. ಈ ಬಾರಿಯೂ ಅಂತಹದ್ದೆ ಸ್ಫರ್ಧೆ ಎರಡು ಪಕ್ಷಗಳ ನಡುವೆ ಏರ್ಪಡಲಿದೆಯೇ ಕಾದು ನೋಡಬೇಕಿದೆ.

Facebook Comments