ಕಾಂಗ್ರೆಸ್ ಹೈ ಕಮಾಂಡ್ ದಿಢೀರ್ ಬೆಂಗಳೂರಿಗೆ, ನಾಯಕರರಲ್ಲಿ ಸಂಚಲನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.19- ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕಾರ ಮಾಡುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ನೀಡಿದ್ದ ಕಾಂಗ್ರೆಸ್ ಹೈ ಕಮಾಂಡ್ ಏಕಾಏಕಿ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ವಿರೋಧಿ ಬಣದ ಕೈ ಮೇಲಾಗುತ್ತಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.

ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ವಿಪಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‍ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗಳನ್ನು ಅಂಗೀಕರಿಸದೆ ಮೌನವಾಗಿದ್ದ ಎಐಸಿಸಿ ನಾಯಕರು, ಇತ್ತೀಚೆಗೆ ಸಿದ್ದರಾಮಯ್ಯ ಅವರ ಆರೋಗ್ಯ ಹದಗೆಟ್ಟಾಗ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ವಿಪಕ್ಷ ನಾಯಕ ಸ್ಥಾನದಲ್ಲೇ ಮುಂದುವರೆಯುವಂತೆ ಮನವಿ ಮಾಡಿದ್ದರು.

ಆದರೆ, ಸಿದ್ದರಾಮಯ್ಯ ಅವರು ಅದನ್ನು ತಳ್ಳಿ ಹಾಕಿ, ತಾವು ರಾಜೀನಾಮೆ ಕೊಟ್ಟಾಗಿದೆ. ಪರ್ಯಾಯ ನಾಯಕರನ್ನು ಆಯ್ಕೆ ಮಾಡಿ ಎಂದು ಸ್ಪಷ್ಟ ಸಂದೇಶ ನೀಡಿದ್ದರು. ಸಿದ್ದರಾಮಯ್ಯ ಅವರನ್ನು ಮತ್ತೆ ಮನವೊಲಿಸುವ ಪ್ರಯತ್ನಗಳು ನಡೆಯಲಿವೆ. ವಿಪಕ್ಷ ನಾಯಕರಾಗಿ ಅವರೇ ಮುಂದುವರೆಯಲಿದ್ದಾರೆ ಎಂಬ ಬಲವಾದ ನಂಬಿಕೆ ಬೆಂಬಲಿಗರಲ್ಲಿತ್ತು. ಆದರೆ, ಅವರಿಗೆ ನಿನ್ನೆ ರಾತ್ರಿಯಿಂದ ನಡೆದ ಬೆಳವಣಿಗೆ ಆಘಾತ ನೀಡಿದೆ.

ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ರಾಜೀನಾಮೆ ನೀಡಿದ್ದಾಗ ಮೂಲ ಕಾಂಗ್ರೆಸಿಗರು ಒಳಗೊಳಗೆ ಖುಷಿ ಪಟ್ಟಿದ್ದರು. ಇದೇ ಸರಿಯಾದ ಸಮಯ ಎಂದು ಕಾದು ಕುಳಿತಿದ್ದವರು ದೆಹಲಿ ಪ್ರವಾಸ ಕೈಗೊಂಡು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಇಬ್ಬರ ರಾಜೀನಾಮೆ ಅಂಗೀಕರಿಸುವಂತೆ ಒತ್ತಡ ಹೇರಿದ್ದರು. ಸಿದ್ದರಾಮಯ್ಯ ಅವರನ್ನು ವಿಪಕ್ಷ ಸ್ಥಾನದಿಂದ ಕೈ ಬಿಟ್ಟರೆ ಕಾಂಗ್ರೆಸ್‍ಗೆ ಹಿನ್ನಡೆಯಾಗಲಿದೆ ಎಂಬ ಆತಂಕದಿಂದ ಹೊಸ ದಾಳ ಉರುಳಿಸಿದ ಮೂಲ ಕಾಂಗ್ರೆಸಿಗರು, ಸಿದ್ದರಾಮಯ್ಯ ಅವರು ಯಥಾಸ್ಥಿತಿ ಮುಂದುವರೆಯಲಿ. ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ನೇಮಿಸಬೇಕೆಂಬ ಪ್ರಸ್ತಾವನೆ ಮುಂದಿಟ್ಟಿದ್ದರು.

ಆದರೆ, ಸಿದ್ದರಾಮಯ್ಯ ಅವರು ಈಗಿರುವ ಸ್ಥಾನಮಾನಗಳಲ್ಲಿ ಯಾವುದೂ ಬದಲಾವಣೆಯಾಗಬಾರದು. ದಿನೇಶ್‍ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿಯೇ ಮುಂದುವರೆಯಬೇಕು, ಎಸ್.ಆರ್.ಪಾಟೀಲ್ ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕರಾಗಿಯೇ ಮುಂದುವರೆಯಬೇಕು ಎಂಬ ಷರತ್ತು ವಿಧಿಸಿದ್ದರು. ಎಲ್ಲವು ತಿಳಿಗೊಳ್ಳುತ್ತಿದೆ. ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಧಕ್ಕೆ ಇಲ್ಲ ಎಂದು ನಿಟ್ಟುಸಿರು ಬಿಡುವ ನಡುವೆಯೇ ಇಂದು ಮಧ್ಯಾಹ್ನ ಎಐಸಿಸಿ ಪ್ರಧಾನಕಾರ್ಯದರ್ಶಿ ಮಧುಸೂದನ್‍ಮಿಸ್ತ್ರಿ, ಒಡಿಶಾದ ಮಾಜಿ ಸಂಸದ ಭಕ್ತ ಚರಣದಾಸ್ ಅವರು ದಿಢೀರ್ ಬೆಂಗಳೂರಿಗೆ ಆಗಮಿಸಿ ಕುಮಾರಕೃಪದಲ್ಲಿ ಕುಳಿತು ರಾಜ್ಯ ಕಾಂಗ್ರೆಸ್‍ನ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ನಿನ್ನೆ ಸಂಜೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ರಾಜ್ಯ ಕಾಂಗ್ರೆಸ್‍ನ 56 ಮಂದಿಗೆ ಸೂಚನೆ ರವಾನೆಯಾಗಿದ್ದು, ವಿಪಕ್ಷ ನಾಯಕ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ವೀಕ್ಷಕರನ್ನು ಭೇಟಿ ಮಾಡಿ ಅಭಿಪ್ರಾಯ ನೀಡುವಂತೆ ಸಲಹೆ ನೀಡಲಾಗಿದೆ. ಹಿರಿಯ ನಾಯಕರ ಪೈಕಿ ಬಹಳಷ್ಟು ಮಂದಿ ಬೆಂಗಳೂರಿನಿಂದ ಹೊರಗಿದ್ದಾರೆ. ಕೆಲವೇ ಗಂಟೆಗಳ ಮೊದಲು ಆಹ್ವಾನ ನೀಡಿ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದು ಸಿದ್ದರಾಮಯ್ಯ ಬಣವನ್ನು ಉದ್ದೇಶಪೂರ್ವಕವಾಗಿ ದೂರ ಇಡುವ ಪ್ರಯತ್ನವೇ ಎಂಬ ಅನುಮಾನ ಕಾಡಲಾರಂಭಿಸಿದೆ.

ಪೂರ್ವ ನಿರ್ಧರಿತ ಕಾರ್ಯಕ್ರಮವಾಗಿದ್ದರೆ ಸಾಕಷ್ಟು ಮಂದಿ ಸಂಪೂರ್ಣ ತಯಾರಿ ಮಾಡಿಕೊಂಡು ಲಾಬಿ ನಡೆಸುತ್ತಿದ್ದರು. ಆದರೆ, ಅದ್ಯಾವುದಕ್ಕೂ ಅವಕಾಶ ನೀಡದೆ ಇಂದು ಮಧ್ಯಾಹ್ನ ಕುಮಾರಕೃಪ ಅತಿಥಿ ಗೃಹಕ್ಕೆ ಆಗಮಿಸಿದ ಮಧುಸೂದನ್ ಮಿಸ್ತ್ರಿ ಮತ್ತು ಭಕ್ತ ಚರಣದಾಸ್ ಅವರು ಸಂಜೆವರೆಗೂ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರು ಅನಾರೋಗ್ಯದಿಂದ ಚಿಕಿತ್ಸೆ ಪಡೆದು ವಿಶ್ರಾಂತಿಗಾಗಿ ಖಾಸಗಿ ಹೋಟೆಲ್‍ನಲ್ಲಿದ್ದಾರೆ. ದಿನೇಶ್‍ಗುಂಡೂರಾವ್ ಅವರು ಲಂಡನ್ ಪ್ರವಾಸದಲ್ಲಿದ್ದಾರೆ. ಈ ಹಂತದಲ್ಲಿ ಹೈಕಮಾಂಡ್ ತೆಗೆದುಕೊಂಡಿರುವ ತೀರ್ಮಾನ ಸಿದ್ದು ಬೆಂಬಲಿಗರನ್ನು ಕೆರಳಿಸಿದೆ. ಕಾಂಗ್ರೆಸ್‍ನಲ್ಲಿ ಸಿದ್ದು ವಿರೋಧಿಗಳ ಕೈ ಮೇಲಾಗುತ್ತಿದೆಯೇ ಎಂಬ ಚರ್ಚೆಗಳು ಕೇಳಿ ಬರುತ್ತಿವೆ.

Facebook Comments