ಡಿ.ಜೆ.ಹಳ್ಳಿ ಗಲಭೆ ಪ್ರಕರಣ : ಮತ್ತೆ ಬಲಿಪೀಠದ ಮೇಲೆ ಕಾಂಗ್ರೆಸ್ ತಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.14- ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯಾವುದೇ ಹೇಳಿಕೆ ನೀಡಲಾಗದೆ ಕಾಂಗ್ರೆಸ್ಸಿಗರು ಇಕ್ಕಟ್ಟಿಗೆ ಸಿಲುಕಿದ್ದು, ಬಿಜೆಪಿಯ ವಾಗ್ಧಾಳಿಯಿಂದ ತತ್ತರಿಸಿದ್ದಾರೆ.

ಗಲಭೆ ಪ್ರಕರಣ ಬಿಜೆಪಿಯ ಕೈಗೆ ಬ್ರಹ್ಮಾಸ್ತ್ರ ಕೊಟ್ಟ ಹಾಗಾಗಿದೆ. ಸಾಲದೆಂಬಂತೆ ಬಿಬಿಎಂಪಿಯ ಕಾಂಗ್ರೆಸ್ ಸದಸ್ಯೆಯ ಪತಿ ಗಲಭೆಗೂ ಮುನ್ನಾ ಠಾಣೆ ಬಳಿ ಹೋಗಿ ಗುಂಪನ್ನುದ್ದೇಶಿಸಿ ಮಾತನಾಡಿದ್ದರು.

ಉಳಿದಿಬ್ಬರು ಬಿಬಿಎಂಪಿ ಸದಸ್ಯರು ಪರೋಕ್ಷ ವಾಗಿ ಕುಮ್ಮಕ್ಕು ನೀಡಿದ್ದರು. ಶೀಘ್ರವೇ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ಬೆಳವಣಿಗೆ ಕಾಂಗ್ರೆಸ್‍ಗೆ ಮುಜುಗರ ಸೃಷ್ಠಿಸಿದೆ. ಗಲಭೆಯಲ್ಲಿ ಬಲಿಪಶುವಾಗಿರು ವುದು ಕಾಂಗ್ರೆಸ್‍ನ ಶಾಸಕರು. ಗಲಭೆ ಮಾಡಿರುವವರು ಕಾಂಗ್ರೆಸ್ ಒಲೈಸುವ ಅಲ್ಪ ಸಂಖ್ಯಾತ ಭಾಂದವರು, ಆಸ್ತಿ ಪಾಸ್ತಿ ನಷ್ಟವಾಗಿರುವುದು ಬಹುಸಂಖ್ಯಾತರದು. ಇದೇ ಪರಿಸ್ಥಿತಿಯ ಲಾಭ ಪಡೆದು ಬಿಜೆಪಿ ನಾಯಕರು ಬಾಯಿಗೆ ಬಂದಂತೆ ವಾಗ್ಧಾಳಿ ನಡೆಸುತ್ತಿದ್ದಾರೆ.

ಅತ್ತ ಕಾಂಗ್ರೆಸ್‍ನಲ್ಲಿಯೂ ಭಿನ್ನ ಧ್ವನಿಗಳು ಕೇಳಿ ಬರುತ್ತಿವೆ. ಟಿವಿ ಚರ್ಚೆಯಲ್ಲಿ ಕುಳಿತ ಪಕ್ಷದ ವಕ್ತಾರರು ಘಟನೆಯಲ್ಲಿ ಬಲಿಪಶುವಾಗಿರುವ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಘಟನೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆ ಮಾಡಿದ್ದಾರೆ. ಆ ಸಮಿತಿ ಈವರೆಗೂ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ.

ಸ್ಥಳದಲ್ಲಿ ನಿಷೇಧಾಜ್ಞೆ ಇದೆ, ಸದ್ಯಕ್ಕೆ ಬರಬೇಡಿ. ವಾತಾವರಣ ತಿಳಿಗೊಂಡ ಮೇಲೆ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ ಎಂದ ಕಾರಣಕ್ಕೆ ನಿನ್ನೆ ಮೊದಲ ಸಭೆ ನಡೆಸಿದ ಸತ್ಯ ಶೋಧನಾ ಸಮಿತಿ ಮುಂದಿನ ತನಿಖೆಯನ್ನು ತಾತ್ಕಾಲಿಕವಾಗಿ ಮುಂದೂಡಿದಂತೆ ಕಂಡು ಬಂದಿದೆ.

ಸಮತಿ ತನಿಖೆ ಮಾಡಿ ಸತ್ಯ ಹೇಳುವುದ ರೊಳಗೆ ರಾಜಕೀಯವಾಗಿ ಆಗ ಬೇಕಾಗಿರುವ ನಷ್ಟವೆಲ್ಲಾ ಆಗಿ ಹೋಗಿರುತ್ತದೆ. ಈಗಾಗಲೇ ಬಿಜೆಪಿ ಪಾಳೇಯ ಸಾಮಾಜಿಕ ಜಾಲ ತಾಣ ಗಳಲ್ಲಿ ಘಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಎಸ್‍ಡಿಪಿಐ, ಕೆಎಫ್‍ಡಿ, ಪಿಎಫ್‍ಐ ಸಂಘಟನೆಗಳ ಜನ್ಮ ಜಾಲಾಡಿಸುತ್ತಿದೆ.

ಒಂದೆಡೆ ಅಖಂಡ ಶ್ರೀನಿವಾಸ್ ದಲಿತರೆಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಅವರ ನೆರವಿಗೆ ಬರುತ್ತಿಲ್ಲ ಎಂಬ ಗಂಭೀರ ಆರೋಪವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮಾಡಿದ್ದಾರೆ. ಈವರೆಗೂ ಹಿಂದು ಎಂದು ಹೇಳುತ್ತಿದ್ದ ಬಿಜೆಪಿ ಅಖಂಡ ಶ್ರೀನಿವಾಸ್ ಪ್ರಕರಣದಲ್ಲಿ ದಲಿತ ಎಂದು ಹಂಗಿಸುತ್ತಿದೆ.

ನಿಮ್ಮನ್ನು ಜಾತಿ ಹೆಸರಿನಿಂದ ಕರೆಯಬಹುದೇ ಎಂದು ಟ್ವಿಟರ್‍ನಲ್ಲಿ ಪ್ರಶ್ನಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ತಕ್ಕ ಉತ್ತರ ಹೇಳಿದ್ದರು. ಉಳಿದಂತೆ ಜಮೀರ್ ಅಹಮದ್ ಸುದೀರ್ಘ ಟ್ವಿಟ್‍ಗಳನ್ನು ಮಾಡಿದರಾದರೂ ಅದು ಅಷ್ಟೇನು ಪರಿಣಾಮಕಾರಿಯಾಗಿರಲಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬದ ಶುಭ ಸಮಾರಂಭದಲ್ಲಿ ಬ್ಯೂಸಿಯಾಗಿದ್ದಾರೆ. ಸಿದ್ದರಾಮಯ್ಯ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ವಾರ ಕಾಲ ವಿಶ್ರಾಂತಿಯಲ್ಲಿದ್ದಾರೆ.ಉಳಿದ ಯಾವ ನಾಯಕರು ಘಟನೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಏನು ಹೇಳಿದ್ರೆ ಮತ್ತೇನಾಗುವುದೋ ಎಂಬ ಚಡಪಡಿಕೆಯಲ್ಲೇ ಬಿಜೆಪಿ ವಾಗ್ಧಾಳಿಯನ್ನು ಸಹಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ಸಿಗರ ಈ ಅಸಹಾಯಕತೆ ಬಿಜೆಪಿಗೆ ರಾಜಕೀಯ ಬಂಡವಾಳವಾಗಿದೆ. ಒಂದೆಡೆ ಭಾರೀ ಪ್ರಮಾಣದ ಗಲಭೆಯನ್ನು ಸಮರ್ಥಿಸಿಕೊಳ್ಳಲಾಗದೆ ಕಾಂಗ್ರೆಸಿಗರು ಚಡಪಡಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ಈ ಗಲಭೆ ಪ್ರಕರಣದಲ್ಲಿ ಸರ್ಕಾರ, ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆಗಳ ಜವಾಬ್ಧಾರಿಗಳ ಬಗ್ಗೆ ಚರ್ಚೆಯೇ ಆಗುತ್ತಿಲ್ಲ.

ಎಂದಿನಂತೆ ಮತ್ತೆ ವಿರೋಧ ಪಕ್ಷವೇ ಬಲಿಪೀಠದಲ್ಲಿ ನಿಂತಿದೆ. ಅದನ್ನು ಎದುರಿಸಿ ವಾಸ್ತವತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾಂಗ್ರೆಸ್‍ನಲ್ಲಿ ಮುತ್ಸದ್ದಿ ನಾಯಕತ್ವದ ಕೊರತೆ ಕಾಣುತ್ತಿದೆ.

Facebook Comments

Sri Raghav

Admin