ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೇ ದಿನ, ಕಣಕ್ಕಿಳಿಯುವರೇ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.1-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೇ ದಿನವಾಗಿದ್ದು, ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.  ರಾಜ್ಯಸಭೆ ಸದಸ್ಯರಾಗಿದ್ದ ಕೆ.ಸಿ.ರಾಮಮೂರ್ತಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.

ಕಳೆದ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದರೂ ಇದುವರೆಗೆ ಕಾಂಗ್ರೆಸ್, ಜೆಡಿಎಸ್ ನಾಮಪತ್ರ ಸಲ್ಲಿಸಿಲ್ಲ. ಆದರೆ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ.ರಾಮಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ. ಇದುವರೆಗೂ ಮೂರು ಮಂದಿ ಉಮೇದುದಾರರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ನಾಳೆ ಮಧ್ಯಾಹ್ನದೊಳಗೆ ಕಾಂಗ್ರೆಸ್ ಅಥವಾ ಜೆಡಿಎಸ್ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಸದಿದ್ದರೆ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರ ಆಯ್ಕೆಯ ಹಾದಿ ಸುಗಮವಾಗಲಿದೆ. ಒಂದು ವೇಳೆ ವಿರೋಧ ಪಕ್ಷಗಳಿಂದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದೇ ಆದರೆ ಮತದಾನ ನಡೆಯುವುದು ಅನಿವಾರ್ಯವಾಗಲಿದೆ. ಆಗ ಬಿಜೆಪಿ ಅಭ್ಯರ್ಥಿ ಹಾಗೂ ವಿರೋಧ ಪಕ್ಷಗಳ ನಡುವೆ ಸ್ಪರ್ಧೆ ಏರ್ಪಡಲಿದೆ. ಇದುವರೆಗೂ ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯಾವುದೇ ಸಿದ್ಧತೆಯನ್ನು ಮಾಡಿಕೊಂಡಿಲ್ಲ.

ರಾಜ್ಯಸಭೆ ಸ್ಪರ್ಧೆ ಬಗ್ಗೆ ಎರಡೂ ಪಕ್ಷಗಳು ಇನ್ನೂ ಮೀನಾಮೇಷ ಎಣಿಸುತ್ತಿವೆ. ಹೀಗಾಗಿ ವಿರೋಧ ಪಕ್ಷಗಳ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ವಿರಳವಾಗಿದೆ.  ರಾಜ್ಯ ವಿಧಾನಸಭೆಯಲ್ಲಿ 207ಸದಸ್ಯರಿದ್ದು, ಉಪಚುನಾವಣೆ ಫಲಿತಾಂಶದ ನಂತರ 223ಕ್ಕೆ ವಿಧಾನಸಭೆ ಸದಸ್ಯರ ಬಲ ಏರಿಕೆಯಾಗಲಿದೆ. ಸದ್ಯ ಬಿಜೆಪಿ 104ಶಾಸಕರನ್ನು ಹೊಂದಿದೆ. ಹಾಗೆಯೇ ಜೆಡಿಎಸ್ 34 ಹಾಗೂ ಕಾಂಗ್ರೆಸ್ 66 ಶಾಸಕರನ್ನು ಹೊಂದಿವೆ.

ಪಕ್ಷೇತರ-1, ಬಿಎಸ್‍ಪಿ-1, ಸಭಾಧ್ಯಕ್ಷರ ಸ್ಥಾನ-1 ಇದೆ. ಉಪಚುನಾವಣಾ ಫಲಿತಾಂಶದ ನಂತರ ರಾಜ್ಯಸಭೆ ಚುನಾವಣೆಗೆ 222 ಶಾಸಕರು ಮತಚಲಾಯಿಸುವ ಹಕ್ಕು ಪಡೆಯಲಿದ್ದಾರೆ.
ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುವುದರಿಂದ ಗೆಲ್ಲುವ ಅಭ್ಯರ್ಥಿ ಚಲಾವಣೆಯಾದ ಹಾಗೂ ಸಿಂಧುವಾದ ಮತಗಳಲ್ಲಿ ಶೇಕಡ ಅರ್ಧಕ್ಕಿಂತ ಹೆಚ್ಚು ಶಾಸಕರ ಮತಗಳನ್ನು ಪಡೆಯಬೇಕಾಗುತ್ತದೆ. ಅಂದರೆ ಎಲ್ಲಾ ಶಾಸಕರು ಮತ ಚಲಾಯಿಸಿದರೆ 112 ಶಾಸಕರ ಮತವನ್ನು ಪಡೆಯಬೇಕಾಗುತ್ತದೆ.

ಡಿ.3ರಂದು ರಾಜ್ಯಸಭೆಗೆ ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ.5ರವರೆಗೆ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶವಿದೆ. ತಮಿಳುನಾಡು ಮೂಲದ ಡಾ.ಕೆ.ಪದ್ಮರಾಜನ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಯಾವುದೇ ಶಾಸಕರು ಸೂಚಕರಾಗಿ ಸಹಿ ಮಾಡಿಲ್ಲ. ಹಾಗೆಯೇ ವಿಜಯಪುರ ಮೂಲದ ಶ್ರೀವೆಂಕಟೇಶ್ವರ ಮಹಾಸ್ವಾಮೀಜಿ ಉರುಫ್ ದೀಪಕ್ ಎಂಬುವರು ಬಿಜೆಪಿ, ಹಿಂದೂಸ್ತಾನ್ ಜನತಾ ಪಾರ್ಟಿ ಹಾಗೂ ಪಕ್ಷೇತರರಾಗಿ ಮೂರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇವರಿಗೂ ಯಾವುದೇ ಶಾಸಕರು ಸೂಚಕರಾಗಿ ಸಹಿ ಹಾಕಿಲ್ಲ. ಹೀಗಾಗಿ ಇವರಿಬ್ಬರ ನಾಮಪತ್ರಗಳು ತಿರಸ್ಕøತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

Facebook Comments