ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ.17- ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿ ಜೆಡಿಎಸ್‍ನ ತಸ್ಲೀಮ್ ಹಾಗೂ ಉಪಮೇಯರ್ ಆಗಿ ಕಾಂಗ್ರೆಸ್‍ನ ಶ್ರೀಧರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ನಾಳೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾ ವಣೆ ನಿಗದಿಯಾಗಿದ್ದು, ಇಂದು ಈ ಎರಡೂ ಸ್ಥಾನಗಳಿಗೆ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ.

ಮೈಸೂರು ನಗರ ಪಾಲಿಕೆಯ ಚುಕ್ಕಾಣಿಯನ್ನು ಈ ಬಾರಿಯೂ ಕಾಂಗ್ರೆಸ್, ಜೆಡಿಎಸ್ ಹಿಡಿಯಲಿವೆ. ಮೇಯರ್ ಸ್ಥಾನ ಹಿಂದುಳಿದ ಎ ವರ್ಗ ಮಹಿಳೆಗೆ ಮೀಸಲಾಗಿದೆ. ಜೆಡಿಎಸ್‍ನಿಂದ ರೇಷ್ಮಾಭಾನು, ತಸ್ಲೀಮ್, ನಮ್ರತಾ ರಮೇಶ್,ï ನಿರ್ಮಲಾ ಅವರು ಆಕಾಂಕ್ಷಿಗಳಾಗಿದ್ದಾರೆ. ಆದರೆ ವರಿಷ್ಠರ ಆದೇಶದ ಮೇರೆಗೆ ತಸ್ಲೀಮ್ ಅವರನ್ನು ಮೇಯರ್‍ಗಾದಿಗೆ ಆಯ್ಕೆ ಮಾಡಲಾಗಿದೆ.

ಉಪಮೇಯರ್‍ನ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಕಾಂಗ್ರೆಸ್‍ನಿಂದ ಪ್ರದೀಪ್‍ಚಂದ್ರ, ಭುವನೇಶ್ವರಿ, ಶ್ರೀಧರ್, ಸತ್ಯರಾಜ್ ಆಕಾಂಕ್ಷಿಗಳಾಗಿದ್ದು, ಅಂತಿಮವಾಗಿ ಶ್ರೀಧರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 21 ಸದಸ್ಯ ಬಲ ಹೊಂದಿದ್ದರೂ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಹಾಗಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ನಾಳೆ ಬೆಳಿಗ್ಗೆ 11.30ಕ್ಕೆ ಮೈಸೂರು ನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ನಡೆಯಲಿದೆ.

Facebook Comments