ಕುಮಾರಣ್ಣನ ಲೆಕ್ಕಾಚಾರ : ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ (All Updates)

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-Budget--01

ಬೆಂಗಳೂರು,ಜೂ.28-  ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್‍ ನ್ನು  ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದಾರೆ. ಬಜೆಟ್ ಕುರಿತ ಹೈಲೈಟ್ಸ್ ಈ ಕೆಳಕಂಡಂತಿದೆ.

# 2 ಲಕ್ಷದವರೆಗಿನ ರೈತರ ಸಾಲ ಮನ್ನಾ

ಬೆಂಗಳೂರು,ಜು.5- ವಿಧಾನಸಭೆ ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಎರಡು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವ ಮಹತ್ವದ ಯೋಜನೆಯನ್ನು ಬಜೆಟ್‍ನಲ್ಲಿ ಇಂದು ಘೋಷಣೆ ಮಂಡಿಸಲಾಯಿತು. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಹಾಗೂ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರೈತರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಿದ್ದಾರೆ. ( ಕುಮಾರಣ್ಣನ ಲೆಕ್ಕಾಚಾರದ ಕಂಪ್ಲೀಟ್ ಡೀಟೇಲ್ಸ್ )

ಸುಮಾರು 2,18,488 ಕೋಟಿ ದಾಖಲೆಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಅವರು, ಸಂಕಷ್ಟದಲ್ಲಿರುವ ಅನ್ನದಾತನ ಬದುಕನ್ನು ಹಸನುಗೊಳಿಸಲು ಬ್ಯಾಂಕ್‍ಗಳಲ್ಲಿ ಪಡೆದಿರುವ ಎರಡು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಪ್ರಕಟಿಸಿದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ 34 ಸಾವಿರ ಕೋಟಿ ಹೊರೆಯಾಗಲಿದೆ.

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಎಲ್ಲ ಯೋಜನೆಗಳನ್ನು ಮುಂದುವರೆಸಿರುವ ದೋಸ್ತಿ ಸರ್ಕಾರ ಇಂದಿರಾ ಕ್ಯಾಂಟೀನ್‍ಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೂ ಪ್ರಾರಂಭಿಸಲು ತೀರ್ಮಾನಿಸಿದೆ.   ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಒದಗಿಸಲು ಜಾರಿ ಮಾಡಲಾಗಿದ್ದ ಆರೋಗ್ಯ ಕರ್ನಾಟಕ ಯೋಜನೆಯನ್ನು ಮುಂದುವರೆಸಲಾಗಿದ್ದು, ಕಲಬುರಗಿ, ಬೆಳಗಾವಿ, ಮೈಸೂರು ನಗರಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ರೋಗಿಗಳಿಗಾಗಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಮನಗರ ಜಿಲ್ಲೆ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಗದಗ, ಕೊಪ್ಪಳ, ಚಾಮರಾಜನಗರ ಮತ್ತು ಹಾಸನ ನಗರಗಳ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮಥ್ರ್ಯ ಹೊಸ ಆಸ್ಪತ್ರೆಗಳನ್ನು ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತವರು ಜಿಲ್ಲೆ ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್‍ಸ್ಪೇಷಾಲಿಟಿ ಆಸ್ಪತ್ರೆ ತೆರೆಯಲು 40 ಕೋಟಿ ಮೀಸಲಿರಿಸಲಾಗಿದೆ. ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಕೃಷಿಯನ್ನು ಅಳವಡಿಸಿಕೊಳ್ಳಲು ಕೋಲಾರ, ಚಿತ್ರದುರ್ಗ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ತಲಾ 5 ಸಾವಿರ ಹೆಕ್ಟೇರ್ ಕುಷ್ಕಿ ಜಮೀನಿನಲ್ಲಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ಆರ್ಥಿಕ ನೆರವು ನೀಡಲಾಗಿದೆ.

Kumaraswamy--01

# ಹಾಸನದಲ್ಲಿ ಮೆಗಾ ಡೈರಿ ಸ್ಥಾಪನೆ, ಮೀನು ಕೃಷಿಗೆ 4 ಕೋಟಿ

ಬೆಂಗಳೂರು, ಜು.5- ಹಾಸನದಲ್ಲಿ ಮೆಗಾ ಡೈರಿ ಸ್ಥಾಪನೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ 50 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ತಮ್ಮ ಆಯವ್ಯಯದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು ಹಾಸನ ಹಾ ಲು ಒಕ್ಕೂಟದಲ್ಲಿ ಹಾಲಿನ ಶೇಖರಣೆ ಹೆಚ್ಚಾಗುತ್ತಿದ್ದು , ಲಾಭದಾಯಕ ರೀತಿಯಲ್ಲಿ ಶೇಖರಣೆ ಮಾಡಲು 10 ಲಕ್ಷ ಲೀಟರ್‍ಗಳಿಂದ 15 ಲಕ್ಷ ಲೀಟರ್ ಸಾಮಥ್ರ್ಯದ ಮೆಗಾ ಡೈರಿ ಸ್ಥಾಪನೆಗೆ 50 ಕೋಟಿ ರೂ. ಅನುದಾನ ನೀಡಲಾಗುವುದು ಎಂದರು.

******************

# ಮೀನು ಕೃಷಿಗೆ 4 ಕೋಟಿ:
ರಾಜ್ಯದ 20 ಸಾವಿರ ಹೆಕ್ಟೇರ್ ಜಲ ಪ್ರದೇಶದಲ್ಲಿ ಉಚಿತವಾಗಿ ಮೀನುಗಾರರ ಸಹಕಾರ ಸಂಘಗಳ ಮುಖಾಂತರ ಮೀನು ಮರಿಗಳನ್ನು ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಒಳನಾಡು ಮೀನು ಉತ್ಪಾದನೆ ಹೆಚ್ಚಿಸಲು 4 ಕೋಟಿ ರೂ. ವೆಚ್ಚದಲ್ಲಿ ಮೀನು ಮರಿಗಳ ಬಿತ್ತನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾಯಕ ಯೋಜನೆ: ಸ್ವಸಹಾಯ ಗುಂಪುಗಳಲ್ಲಿ ಕೌಶಲ್ಯ ಅಭಿವೃದ್ಧಿಮತ್ತು ಉದ್ಯಮ ಶೀಲತೆಯನ್ನು ವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಕಾಯಕ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು. ಇದಕ್ಕಾಗಿ ಸಹಕಾರ ಸಂಸ್ಥೆಗಳ ಪ್ರತಿ ಗುಂಪಿಗೆ ಗರಿಷ್ಠ 10 ಲಕ್ಷಗಳವರೆಗೆ ಸಾಲ ಒದಗಿಸಲು 5 ಕೋಟಿ ರೂ.ಗಳ ಅನುದಾನ ಮೀಸಲಿರಿಸಲಾಗಿದೆ.

ಬಡವರ ಬಂಧು: ಬೀದಿ ವ್ಯಾಪಾರಿಗಳು , ಸಣ್ಣ ವ್ಯಾಪಾರಿಗಳಿಗೆ ನೆರವು ನೀಡುವ ಉದ್ದೇಶದಿಂದ ಕಿರು ಹಣಕಾಸು ಸಾಲ ಸೌಲಭ್ಯ ಒದಗಿಸುವ ಬಡವರ ಬಂಧು ಸಂಚಾರ ಸೇವೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

******************

#  ಮೈಸೂರಿನಲ್ಲಿ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪನೆ
ಬೆಂಗಳೂರು, ಜು.5- ಮೈಸೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತು ರೀಲರ್‍ಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಉತ್ಪಾದಿಸುವ ರೇಷ್ಮೆ ಗೂಡಿಗೆ ಮಾರುಕಟ್ಟೆ ಕಲ್ಪಿಸಲು ಮೂರು ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.  ಇಂದು ತಾವು ಮಂಡಿಸಿದ ಬಜೆಟ್‍ನಲ್ಲಿ ಈ ವಿಷಯ ಪ್ರಕಟಿಸಿದ ಅವರು, ಇದಕ್ಕಾಗಿ 2018-19ನೆ ಸಾಲಿಗೆ ಒಂದು ಕೋಟಿ ಒದಗಿಸಲಾಗುವುದು ಎಂದರು. ತಲಘಟ್ಟಪುರದಲ್ಲಿರುವ ರಾಜ್ಯ ರೇಷ್ಮೆ ಸಂಶೋಧನಾ ಅಭಿವೃದ್ಧಿಯ ಪುನಃಶ್ಚೇತನಕ್ಕೆ 5 ಕೋಟಿ ರೂ.ಗಳನ್ನು ನೀಡಲಾಗುವುದು. ಸಾಂಪ್ರದಾಯಿಕ ರೇಷ್ಮೆ ವಸ್ತ್ರ ಉತ್ಪಾದನೆಯ ಜತೆಗೆ ಉಪ ಉತ್ಪನ್ನಗಳಾದ ಉಗುರು ಪಾಲಿಶ್, ಲಿಪ್‍ಸ್ಟಿಕ್, ರೇಷ್ಮೆ ಬಣ್ಣೆಗಳಿಗೆ ವಿಶ್ವ ವ್ಯಾಪಿ ಬೇಡಿಕೆ ಇದ್ದು ಈ ಮಾರುಕಟ್ಟೆಯ ಅವಕಾಶವನ್ನು ಬಳಸಿಕೊಳ್ಳಲು ಅಗತ್ಯ ತಂತ್ರಕ್ಕೆ 2 ಕೋಟಿ ನೀಡಲಾಗುವುದು. ಚನ್ನಪಟ್ಟಣದಲ್ಲಿರುವ ಕೆಎಸ್‍ಐಸಿ ಘಟಕದ ಪುನಃಶ್ಚೇತನಕ್ಕಾಗಿ 5 ಕೋಟಿ ಒದಗಿಸಲಾಗುವುದು ಎಂದರು.

******************

#  3 ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸರ್ಕಾರ ನಿರ್ಧಾರ
ಬೆಂಗಳೂರು, ಜು.5- ಶಿವಮೊಗ್ಗದಲ್ಲಿ ತಾಯಿ ನಾಡು ಭದ್ರತಾ ವಿಶ್ವವಿದ್ಯಾಲಯ, ತುಮಕೂರಿನಲ್ಲಿ ಕ್ರೀಡಾ ಮತ್ತು ಅಂಗ ಸಾಧನಾ ವಿವಿ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಭದ್ರತಾ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ತಾಯಿ ನಾಡು ಭದ್ರತಾ ವಿವಿ ಆರಂಭಿಸಲು ಬಜೆಟ್‍ನಲ್ಲಿ 3 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.  ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ ಕ್ರೀಡೆ ಮತ್ತು ಅಂಗಸಾಧನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯ ಸ್ಥಾಪಿಸಲು 3 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಮಾನವ ಸಂಪನ್ಮೂಲವನ್ನು ಉತ್ತೇಜಿಸುವ ಉದ್ದೇಶದಿಂದ ಐತಿಹಾಸಿಕ ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪಿಸಲು 3 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಪದವಿ ಪೂರ್ವ ಮತ್ತು ಪದವಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ ನೀಡಲಾಗುವುದು. ರಾಜ್ಯದ ಸರ್ಕಾರಿ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.

******************

#  ಬಡ ರೋಗಿಗಳ ಅಂಗಾಂಗ ಕಸಿಗೆ 30 ಕೋಟಿ ರೂ. ಅನುದಾನ

ಬೆಂಗಳೂರು, ಜು.5-ಬಡ ರೋಗಿಗಳಿಗೆ ಹೃದಯ, ಮೂತ್ರಪಿಂಡ, ಯಕೃತ್ ಇತ್ಯಾದಿ ಅಂಗಾಂಗ ಕಸಿಗಾಗಿ 30 ಕೋಟಿ ರೂ.ಗಳ ಅನುದಾನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಯ್ದಿರಿಸಿದ್ದಾರೆ.  ವಿಧಾನಸಭೆಯಲ್ಲಿಂದು ಬಜೆಟ್ ಮಂಡಿಸಿದ ಅವರು, ಬಡವರ ವೈದ್ಯಕೀಯ ವೆಚ್ಚದ ನೆರವಿಗೆ ಧಾವಿಸಲು ಪ್ರತ್ಯೇಕವಾಗಿ ಹಣ ಮೀಸಲಿಡುವ ಮೂಲಕ ಜನತಾದರ್ಶನದಲ್ಲಿ ತಾವು ಪಡೆದ ಅನುಭವಗಳನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ.

108 ಮತ್ತು 104 ಆರೋಗ್ಯ ತುರ್ತು ಕರೆಗಳ ವೈದ್ಯಕೀಯ ಸಹಾಯವಾಣಿ ಗುಣಮಟ್ಟವನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತದೆ. ಸಹಾಯವಾಣಿ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಲಭ್ಯತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ವ್ಯವಸ್ಥೆಯನ್ನು ಪುನರ್ ರೂಪಿಸಲಾಗುವುದು. ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ ಹಾಗೂ ಮಾನಸಿಕ ಆರೋಗ್ಯ ರಕ್ಷಣಾ ಸೇವೆಗಳನ್ನು ಇದರಲ್ಲಿ ಸಂಯೋಜಿಸಲಾಗುವುದು ಎಂದಿದ್ದಾರೆ.

ಔಷಧ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಲು 40 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನ ಎರಡು ವರ್ಷದಲ್ಲಿ ಇದನ್ನು ಜಾರಿಗೊಳಿಸಲಾಗುವುದು. ಇದಕ್ಕಾಗಿ ಈ ವರ್ಷ 10 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕಾರ್ಡಿಯಾಲಜಿ ಮತ್ತು ಅಂಕಾಲಜಿ ಸೇವೆ ಒದಗಿಸುವ ಟ್ರಾಮಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.  ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹಲವಾರು ಹೊಸ ಯೋಜನೆಗಳನ್ನು ಪ್ರಸ್ತಾಪಿಸಿರುವ ಕುಮಾರಸ್ವಾಮಿ, ರಾಮನಗರ ಜಿಲ್ಲೆ ಕನಕಪುರದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.  ರಾಮನಗರ ಶೀಘ್ರವಾಗಿ ಬೆಳೆಯುತ್ತಿರುವ ನಗರವಾಗಿರುವುದರಿಂದ ಅಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು 40 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸುವುದಾಗಿ ಹೇಳುವ ಮೂಲಕ ತವರು ಜಿಲ್ಲೆಗೆ ಮುಖ್ಯಮಂತ್ರಿಯವರು ಹೆಚ್ಚು ಒತ್ತು ನೀಡಿದ್ದಾರೆ.

ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಸ್ಪತ್ರೆಯನ್ನು 30 ಕೋಟಿ ರೂ. ವೆಚ್ಚದಲ್ಲಿ 800 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್‍ಪ್ಲಾಂಟ್‍ಗೆ ಪ್ರತ್ಯೇಕ ಚಿಕಿತ್ಸಾ ಕೇಂದ್ರ ಸ್ಥಾಪಿಸಲು 12 ಕೋಟಿ ರೂ.ಗಳನ್ನು ನೀಡಿದ್ದಾರೆ.
ಬೆಳಗಾವಿ, ಕಲಬುರಗಿ, ಮೈಸೂರು ನಗರಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ರೋಗಗಳಿಗೆ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ. ಗದಗ ಕೊಪ್ಪಳ ಮತ್ತುಹಾಸನ ನಗರಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ 400 ಹಾಸಿಗೆ ಸಾಮಥ್ರ್ಯದ ಹೊಸ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ 200 ಕೋಟಿ ರೂ. ಒದಗಿಸುವುದಾಗಿ ಬಜೆಟ್‍ನಲ್ಲಿ ಹೇಳಿದ್ದಾರೆ.

******************

#  ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ

ಬೆಂಗಳೂರು, ಜು.5- ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿ ಜತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿದೆ. ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುವ ಉದ್ದೇಶದಿಂದ ಆಂಗ್ಲ ಮಾಧ್ಯಮ ಆರಂಭಿಸಲು ಮನಸ್ಸು ಮಾಡಿರುವ ಸರ್ಕಾರ ಆರಂಭಿಕವಾಗಿ ಒಂದು ಸಾವಿರ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.  ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಇದಕ್ಕಾಗಿ 150 ಕೋಟಿ ರೂ.ಗಳನ್ನು ಮೀಸಲಿರಿಸಿದೆ.  ಎನ್‍ಸಿಸಿ ತರಬೇತಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಉದ್ದೇಶದಿಂದ 5 ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ.

ರಾಜ್ಯದ 48 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿಗೆ ಬಯೋಮೆಟ್ರಿಕ್ ಸಾಧನಾ ಅಳವಡಿಸಲು ನಿರ್ಧರಿಸಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆ ಜಾರಿಗೊಳಿಸಲು ಬಜೆಟ್‍ನಲ್ಲಿ 5 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಅಂಗನವಾಡಿ ಕೇಂದ್ರಗಳನ್ನು ಆಯ್ದ 4100 ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸಿ ಆ ಪ್ರದೇಶವನ್ನು ಬಾಲಸ್ನೇಹಿ ಕೇಂದ್ರಗಳನ್ನಾಗಿ ಬಲವರ್ಧನೆಗೊಳಿಸಲು ಸರ್ಕಾರ ಮನಸ್ಸು ಮಾಡಿದೆ. ಮುಂದಿನ ದಿನಗಳಲ್ಲಿ ಈ ಬಾಲಸ್ನೇಹಿ ಕೇಂದ್ರಗಳನ್ನೇ ಸರ್ಕಾರಿ ಶಾಲೆಗಳ ಎಲ್‍ಕೆಜಿ, ಯುಕೆಜಿ ತರಗತಿಗಳನ್ನಾಗಿ ಪರಿವರ್ತನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ದಾಖಲಾತಿ ಕಡಿಮೆ ಇರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ.

******************

#  ಕರ್ನಾಟಕದಲ್ಲಿ ಹೊಸ ಕನಸುಗಳನ್ನು ಬಿತ್ತಿ ಬೆಳೆಯುವುದು ನಮ್ಮ ಬಯಕೆ : ಎಚ್‍ಡಿಕೆ
ಬೆಂಗಳೂರು, ಜು.5-ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಮಂಡಿಸಿದ್ದ ಬಜೆಟ್‍ನಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರೆಸುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸಾಲ ಮನ್ನಾ ಹಾಗೂ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ್ದಾರೆ.  ಹಣಕಾಸು ಖಾತೆ ಹೊಂದಿರುವ ಕುಮಾರಸ್ವಾಮಿ ಅವರು ಹಿಂದಿನ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಆರೋಗ್ಯ ಕರ್ನಾಟಕ, ಹೋಬಳಿಗೊಂದು ವಸತಿ ಶಾಲೆ, ಮಾತೃಪೂರ್ಣ, ಸೌರಶಕ್ತಿ ನೀತಿ, ನವೋದ್ಯಮ, ಮತ್ತಿತರ ಯೋಜನೆಗಳ ಪ್ರಗತಿ ಹಾಗೂ ಪರಿಣಾಮಗಳ ಬಗ್ಗೆ ಕೊಂಡಾಡಿದ್ದಾರೆ.

ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಮೈತ್ರಿ ಸರ್ಕಾರಗಳು ಅನಿವಾರ್ಯವಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಸೆಣಸಾಡಿದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವುದು ಪ್ರಜಾಪ್ರಭುತ್ವದ ಒಂದು ಸೊಬಗು. ಸಮನ್ವಯ ಸಮಿತಿಯ ಆಶಯದಂತೆ 2 ಪಕ್ಷಗಳ ಪ್ರಣಾಳಿಕೆಗಳ ಪ್ರಮುಖ ಅಂಶಗಳನ್ನು ಆಧರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ ಅನುಷ್ಟಾನಗೊಳಿಸುತ್ತಿದ್ದೇವೆ ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರದ ಬಗ್ಗೆ ಜನ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಅವುಗಳನ್ನು ಹುಸಿಗೊಳಿಸದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ರೈತರ ಸಾಲ ಮನ್ನಾ ಮತ್ತು ಆರನೇ ವೇತನ ಆಯೋಗದಂತೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯಕ್ಕಾಗುತ್ತಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಅದಕ್ಕಾಗಿ ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಜೊತೆಗೆ ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತಿದ್ದೇವೆ. ಮುಖ್ಯಮಂತ್ರಿ ಸಚಿವಾಲಯದಿಂದಲೇ ಮಿತವ್ಯಯವನ್ನು ಆರಂಭಿಸಲಾಗಿದೆ. ಸಹೋದ್ಯೋಗಿ ಸಚಿವರು ಸಹ ಮಿತವ್ಯಯ ನಡೆಯನ್ನು ಅನುಸರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಹೊಸ ಕನಸುಗಳನ್ನು ಬಿತ್ತಿ ಬೆಳೆಯುವುದು ನಮ್ಮ ಬಯಕೆ ಯುವ ಸಮುದಾಯದಲ್ಲಿ ಚೈತನ್ಯ ತುಂಬಿಸುವುದು, ಮಹಿಳೆಯರ ಅಂಗಳದಲ್ಲಿ ತಂಗಾಳಿ ತರುವುದು, ರೈತಾಪಿ ಜನರ ಬದುಕಿನಲ್ಲಿ ನೆಮ್ಮದಿ ಮೂಡಿಸುವುದು ನಮ್ಮ ಸಂಕಲ್ಪ ಎಂದು ಹೇಳಿದ್ದಾರೆ.

******************

# ಪೆಟ್ರೋಲ್ ಉತ್ಪನ್ನ, ಮದ್ಯದ ಮೇಲಿನ ಸೆಸ್ ಹೆಚ್ಚಳ
ಬೆಂಗಳೂರು, ಜು.5-ರೈತರ ಸಾಲಮನ್ನಾಕ್ಕೆ 34 ಸಾವಿರ ಕೋಟಿ ರೂ.ಗಳ ಅನಿವಾರ್ಯತೆ ಇರುವುದರಿಂದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿರುವ ಮುಖ್ಯಮಂತ್ರಿಗಳು ತೈಲ ಉತ್ಪನ್ನಗಳು ಹಾಗೂ ಮದ್ಯದ ಮೇಲಿನ ಸೆಸ್ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ.30 ರಿಂದ ಶೇ.32ಕ್ಕೆ, ಡೀಸೆಲ್ ಮೇಲಿನ ತೆರಿಗೆ ದರವನ್ನು ಶೇ.19ರಿಂದ ಶೇ.21ಕ್ಕೆ ಹೆಚ್ಚಿಸುವ ವಿಚಾರವನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.  ಸೆಸ್ ಹೆಚ್ಚಳದಿಂದ ಇನ್ನು ಮುಂದೆ 1 ಲೀಟರ್ ಪೆಟ್ರೋಲ್‍ಗೆ 1 ರೂ. 14 ಪೈಸೆ ಹಾಗೂ ಡೀಸೆಲ್ 1 ಲೀಟರ್‍ಗೆ 1ರೂ. 12 ಪೈಸೆಯಷ್ಟು ಹೆಚ್ಚಳವಾಗಲಿದೆ.  ಸೆಸ್ ದರ ಹೆಚ್ಚಳ ಮಾಡಿದರೂ ನೆರೆ ರಾಜ್ಯಗಳಿಗೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ದರ ಕರ್ನಾಟಕದಲ್ಲಿ ಕಡಿಮೆಯಾಗಿರುತ್ತದೆ ಎಂಬುದನ್ನು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ.  ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲ್ಯಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.4ರಷ್ಟು ಹೆಚ್ಚಳವಾಗಲಿದೆ. ಇದರಿಂದ ಸರ್ಕಾರ 19,750 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ.  ಸರ್ಕಾರದ ಈ ನಿಧಾರದಿಂದ ಪೆಟ್ರೋಲ್ ಬೆಲೆ ಹೆಚ್ಚಳವಾಗಲಿದ್ದು, ಮದ್ಯ ದುಬಾರಿಯಾಗಲಿದೆ.

******************

# ವಾಹನ ಸವಾರರು ಮತ್ತು ಕುಡುಕರಿಗೆ ಕುಮಾರಸ್ವಾಮಿ ಶಾಕ್..!
ಬೆಂಗಳೂರು, ಜು.5-ರೈತರ ಸಾಲಮನ್ನಾಕ್ಕೆ 34 ಸಾವಿರ ಕೋಟಿ ರೂ.ಗಳ ಅನಿವಾರ್ಯತೆ ಇರುವುದರಿಂದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿರುವ ಮುಖ್ಯಮಂತ್ರಿಗಳು ತೈಲ ಉತ್ಪನ್ನಗಳು ಹಾಗೂ ಮದ್ಯದ ಮೇಲಿನ ಸೆಸ್ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ.30 ರಿಂದ ಶೇ.32ಕ್ಕೆ, ಡೀಸೆಲ್ ಮೇಲಿನ ತೆರಿಗೆ ದರವನ್ನು ಶೇ.19ರಿಂದ ಶೇ.21ಕ್ಕೆ ಹೆಚ್ಚಿಸುವ ವಿಚಾರವನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.  ಸೆಸ್ ಹೆಚ್ಚಳದಿಂದ ಇನ್ನು ಮುಂದೆ 1 ಲೀಟರ್ ಪೆಟ್ರೋಲ್‍ಗೆ 1 ರೂ. 14 ಪೈಸೆ ಹಾಗೂ ಡೀಸೆಲ್ 1 ಲೀಟರ್‍ಗೆ 1ರೂ. 12 ಪೈಸೆಯಷ್ಟು ಹೆಚ್ಚಳವಾಗಲಿದೆ. ಸೆಸ್ ದರ ಹೆಚ್ಚಳ ಮಾಡಿದರೂ ನೆರೆ ರಾಜ್ಯಗಳಿಗೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ದರ ಕರ್ನಾಟಕದಲ್ಲಿ ಕಡಿಮೆಯಾಗಿರುತ್ತದೆ ಎಂಬುದನ್ನು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ. ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲ್ಯಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.4ರಷ್ಟು ಹೆಚ್ಚಳವಾಗಲಿದೆ. ಇದರಿಂದ ಸರ್ಕಾರ 19,750 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. ಸರ್ಕಾರದ ಈ ನಿಧಾರದಿಂದ ಪೆಟ್ರೋಲ್ ಬೆಲೆ ಹೆಚ್ಚಳವಾಗಲಿದ್ದು, ಮದ್ಯ ದುಬಾರಿಯಾಗಲಿದೆ.

******************

# ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ರೂ.
ಬೆಂಗಳೂರು, ಜು.5- ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ತಲಾ 5 ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ಕೃಷಿ ಮಾಡಲು 150 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ತಾವು ಮಂಡಿಸಿದ ಚೊಚ್ಚಲ ಬಜೆಟ್‍ನಲ್ಲಿ ತಿಳಿಸಿದರು. ಇಸ್ರೇಲ್‍ಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ನಡೆಸಿದ್ದು, ಅದೇ ವ್ಯವಸ್ಥೆಯನ್ನು ಇಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಮೂಲಕ ಕೃಷಿಕರ ಬದುಕನ್ನು ಹಸನುಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಲಹಾ ಸಮಿತಿಯನ್ನು ರಚನೆ ಮಾಡಲು ಯೋಚನೆ ಮಾಡಿದ್ದು, ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡಿರುವ ಈ ಸಲಹಾ ಸಮಿತಿ ಜತೆ ನಾನು ಪ್ರತಿ 2 ತಿಂಗಳಿಗೊಮ್ಮೆ ಚರ್ಚೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಶೂನ್ಯ ಬಂಡವಾಳ , ಸಹಜ ಕೃಷಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗಿದೆ. ಇದು ನೆರೆಯ ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಕ್ರಮದ ಇದಕ್ಕೆ ತಾಂತ್ರಿಕ ಸಹಾಯ ನೀಡಲು ಹಲವರು ಮುಂದೆ ಬಂದಿದ್ದಾರೆ. ಈ ಯೋಜನೆಗಾಗಿ 50 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲಿಡಲಾಗಿದೆ ಎಂದು ಅವರು ಹೇಳಿದರು. ರೈತರ ಸಂಕಷ್ಟ ನಿವಾರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಚಿವರನ್ನೊಳಗೊಂಡ ಕೃಷಿ ಸಮನ್ವಯ ಉನ್ನತ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯು ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಬೀಜದಿಂದ ಮಾರುಕಟ್ಟೆವರೆಗೆ ಉಂಟಾಗಿರುವ ಪರಿಣಾಮಗಳ ಮೌಲ್ಯಮಾಪನ ಮಾಡುತ್ತದೆ ಎಂದು ತಿಳಿಸಿದರು.

ರೈತರನ್ನು ಸಂಘಟಿಸಲು ಅವರ ಉತ್ಪಾದಕತೆಯನ್ನೇ ಹೆಚ್ಚಿಸುವುದಲ್ಲದೆ ಅವರ ಸಂಘಟನೆ ಹಾಗೂ ಸಾಮಥ್ರ್ಯ ಬಲವರ್ಧನೆ ಮಾಡಲು ರಾಜ್ಯದ ರೈತ ಉತ್ಪಾದಕ ಸಂಸ್ಥೆ ನೀತಿಯನ್ನು ಜಾರಿಗೆ ತರಲಾಗುವುದು. ಸಿರಿ ಧಾನ್ಯ , ಬೇಳೆಕಾಳು, ಎಣ್ಣೆ ಕಾಳು, ಮುಸುಕಿನ ಜೋಳ ಇತ್ಯಾದಿ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ವಿಶೇಷ ಒತ್ತು ನೀಡಲಾಗುವುದು ಎಂದರು. ಬೆಂಗಳೂರು ಮಹಾನಗರದ ಬೆಳ್ಳಂದೂರು , ಬೈರಮಂಗಲ ಕೆರೆಗಳ ನೀರು ಅತ್ಯಂತ ಕಲುಷಿತವಾಗಿದ್ದು , ನೊರೆ ಹಾರಾಡುತ್ತಿರುವುದರಿಂದ ಸೋಪು , ಡಿಟರ್ಜೆಂಟ್ ಇರುವ ನೀರು ಹರಿದು ಬೆಳ್ಳಂದೂರು ಕೆರೆಗೆ ಬರುತ್ತಿರುವುದು ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಅಂಟುವಾಳ ಕಾಯಿ ಬೆಳೆಯಲು 10 ಕೋಟಿ ರೂ. ಮೀಸಲು: ಈ ಹಿಂದೆ ನಾವು ಮನೆ ಬಳಕೆಯ ಶುದ್ಧತೆಗಾಗಿ ಪ್ರಕೃತಿಯಲ್ಲಿ ಬೆಳೆಯುವ ಅಂಟು ಕಾಯಿಯನ್ನು ಬಳಸುತ್ತಿದ್ದೆವು.ಈಗ ಇದು ಮರೆಯಾಗಿ ಪರಿಸರಕ್ಕೆ ಹಾನಿಕಾರವಾದ ಪೌಡರ್, ಡಿಟರ್ಜೆಂಟ್‍ಗಳ ಬಳಕೆಗೆ ಬಂದಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮುಂದುವರೆದ ದೇಶಗಳಲ್ಲಿ ಪರಿಸರ ಸ್ನೇಹಿಯಾದ ಅಂಟುವಾಳದ ಡಿಶ್‍ವಾಶ್, ಸೋಪು, ವಾಶಿಂಗ್ ಮೆಷಿನ್ ಸೋಪುಗಳು ವ್ಯಾಪಕವಾಗಿ ಬಳಕೆಗೆ ಬಂದಿದೆ. ಆದ್ದರಿಂದ ಅಂಟುವಾಳ ಕಾಯಿ ಆಧಾರಿತ ಸೋಪು ಹಾಗೂ ಡಿಟರ್ಜೆಂಟ್‍ಗಳ ಉತ್ಪಾದನೆಗೆ ಅನುಕೂಲವಾಗುವಂತೆ ಅಂಟುವಾಳ ಕಾಯಿ ಮರಗಳ ಬೇಸಾಯಕ್ಕಾಗಿ ಒಂದು ಕಾರ್ಯಕ್ರಮ ರೂಪಿಸುವ ಉದ್ದೇಶಕ್ಕಾಗಿ 10 ಕೋಟಿ ರೂ. ಮೀಸಲಿಡಲಾಗುವುದು.

******************

#  ನಗರದ ಸಾರಿಗೆ ಸೇವೆ ಸುಧಾರಣೆಗಾಗಿ ಏಕೀಕೃತ ಭೂ ಸಾರಿಗೆ ಪ್ರಾಧಿಕಾರ ರಚನೆ

ಬೆಂಗಳೂರು, ಜು.5- ನಗರದ ಸಾರಿಗೆ ಸೇವೆಯ ಸಮಗ್ರ ಸುಧಾರಣೆಗಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಏಕೀಕೃತ ಭೂ ಸಾರಿಗೆ ಪ್ರಾಧಿಕಾರ ರಚನೆಯಾಗಲಿದೆ. ಬಿಎಂಆರ್‍ಸಿಎಲ್, ಬಿಎಂಟಿಸಿ, ಬಿಡಿಎ, ಬಿಬಿಎಂಪಿ ಸಂಸ್ಥೆಗಳ ನಡುವೆ ಸಮನ್ವಯ ವಹಿಸಿ ಕೈಗೆಟಕುವ ದರದಲ್ಲಿ ಅಡೆ-ತಡೆಗಳಿಲ್ಲದ ಅನುಕೂಲಕರ ಸಾರಿಗೆ ವ್ಯವಸ್ಥೆ ಕಲ್ಪಿಸುವುದೇ ಈ ಪ್ರಾಧಿಕಾರದ ಉದ್ದೇಶ. ಸಾರ್ವಜನಿಕರ ಉಪಯೋಗಕ್ಕಾಗಿ 4236 ಹೊಸ ಬಸ್‍ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಇದರ ಜತೆಗೆ 80 ಎಲೆಕ್ಟ್ರಿಕ್ ಬಸ್‍ಗಳನ್ನು ಓಡಿಸಲು ಚಿಂತನೆ ನಡೆಸಲಾಗಿದೆ.     ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿವಾರಿಸಿಕೊಂಡು ಉತ್ತಮ ಸಾರಿಗೆ ಸೇವೆ ಒದಗಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 100 ಕೋಟಿ ರೂ.ಗಳ ಸಹಾಯಧನ ನೀಡಲು ತೀರ್ಮಾನಿಸಲಾಗಿದೆ. ಏರುತ್ತಿರುವ ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಎಲೆಕ್ಟ್ರಾನಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು 4 ಕೋಟಿ ರೂ. ವೆಚ್ಚದಲ್ಲಿ 100 ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ.

******************

# ಬಜೆಟ್ ನಲ್ಲಿ ಕರೆಂಟ್ ಶಾಕ್ ಕೊಟ್ಟ ಕುಮಾರಣ್ಣ
ಬೆಂಗಳೂರು, ಜು.5- ಸ್ವಂತ ಬಳಕೆಯ ವಿದ್ಯುತ್ ಮೇಲಿನ ತೆರಿಗೆ ದರವನ್ನು ಪ್ರತಿ ಯುನಿಟ್‍ಗೆ 10 ಪೈಸೆಯಿಂದ 20 ಪೈಸೆಗೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ವಿದ್ಯುತ್ ಬಳಕೆ ಮೇಲಿನ ತೆರಿಗೆಯನ್ನು ಶೇ.6 ರಿಂದ 9ಕ್ಕೆ ಏರಿಕೆ ಮಾಡಲಾಗಿದೆ. ವಿದ್ಯುತ್ ತೆರಿಗೆ ಏರಿಕೆ ಮಾದರಿಯಲ್ಲಿ ಮೋಟಾರು ವಾಹನ ತೆರಿಗೆಯನ್ನು ಹೆಚ್ಚಳ ಮಾಡುವ ವಿಚಾರವನ್ನು ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ. ಖಾಸಗಿ ಸೇವಾ ವಾಹನ ತೆರಿಗೆಯನ್ನು ಪ್ರತಿ ಚದರ ಮೀಟರ್‍ಗೆ ಶೇ.50ರಷ್ಟು ಹೆಚ್ಚಳ ಮಾಡಲಾಗಿದೆ.

******************

#  ಹಾಸನ ತಾಲ್ಲೂಕಿನ 160 ಕೆರೆ ತುಂಬಿಸಲು 70 ಕೋಟಿ ರೂ.ಯೋಜನೆ
ಬೆಂಗಳೂರು,ಜು.5- ಕೃಷಿಕರಿಗೆ ಬೆಂಬಲವಾಗರುವ ಸಣ್ಣ ನೀರಾವರಿ ಇಲಾಖೆ ಅಭಿವೃದ್ದಿಗೊಳಿಸಲು ಕಟಿಬದ್ಧವಾಗಿರುವ ಸರ್ಕಾರ ಹೇಮಾವತಿ ನದಿಯಿಂದ ಹಾಸನ ತಾಲ್ಲೂಕು ದುದ್ದ ಮತ್ತು ಶಾಂತಿ ಗ್ರಾಮ ಹೋಬಳಿ ವ್ಯಾಪ್ತಿಯ 160 ಕೆರೆಗಳಿಗೆ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸುವ ಯೋಜನೆಯನ್ನು 70 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.  ಇಂದು ತಾವು ಮಂಡಿಸಿದ ಬಜೆಟ್‍ನಲ್ಲಿ ಈ ವಿಷಯ ಪ್ರಕಟಿಸಿದ ಅವರು, ಮಂಡ್ಯ ಜಿಲ್ಲೆಯ ಲೋಕಪಾವನಿ ನದಿಯಿಂದ ದುದ್ದ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸಲು ಮಂಡ್ಯ ತಾಲ್ಲೂಕುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು 30 ಕೋಟಿ ರೂ.ಗಳ ಅನುದಾನದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.  ಬೆಳಗಾವಿ, ಚಿಕ್ಕೋಡಿ ತಾಲ್ಲೂಕಿನ, ಹಿರೆಕೋಡಿ, ನಾಗವಾಳ, ನೇಜ ಇತ್ಯಾದಿ ಗ್ರಾಮಗಳ 10.225 ಹೆಕ್ಟೇರ್ ಪ್ರದೇಶದ ಜಮೀನುಗಳ ನೀರಾವರಿ ಸೌಲಭ್ಯಕ್ಕಾಗಿ 100 ಕೋಟಿ ರೂ. ವೆಚ್ಚದಲ್ಲಿ ಏತನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

******************

#  ಕುಮಾರಣ್ಣದ ಬಜೆಟ್ ನಲ್ಲಿ ಜನಸಾಮಾನ್ಯರಿಗೆ ಶಾಕಿಂಗ್ ಸುದ್ದಿ..!
ಬೆಂಗಳೂರು,ಜು.5- ರೈತರ ಸಾಲ ಮನ್ನಾದಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾಗುತ್ತಿರುವ ಹೊರೆಯನ್ನು ತಗ್ಗಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಬಜೆಟ್‍ನಲ್ಲಿ ಪೆಟ್ರೋಲ್,ಡೀಸೆಲ್, ಮದ್ಯ ಹಾಗೂ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೂ ಬಿಸಿ ತಟ್ಟಿಸಿದ್ದಾರೆ.
ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರು ಪಡೆದಿರುವ 34 ಸಾವಿರ ಕೋಟಿ ಸಾಲವನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡುತ್ತಿರುವುದರಿಂದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಅವರು ಈ ಮಾರ್ಗ ಕಂಡುಕೊಂಡಿದ್ದಾರೆ.

ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ.30ರಿಂದ 32ಕ್ಕೆ( 1.ರೂ. 14 ಪೈಸೆ) ಹಾಗೂ ಡೀಸೇಲ್ ಮೇಲಿನ ತೆರಿಗೆ ದರವನ್ನು ಶೇ.19ರಿಂದ 21ಕ್ಕೆ (1 ರೂ. 12 ಪೈಸೆ) ಏರಿಕೆ ಮಾಡಿದ್ದಾರೆ.   ಇದೇ ರೀತಿ ಮದ್ಯದ ಮೇಲಿನ ಶೇ.4ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದ್ದು , ಪ್ರಸಕ್ತ ವರ್ಷ ಈ ಇಲಾಖೆಯಿಂದ 19,750 ಕೋಟಿ ರಾಜಸ್ವ ಸಂಗ್ರಹಣೆಯ ಗುರಿಯನ್ನು ಹೊಂದಲಾಗಿದೆ. ಮೋಟಾರ್ ವಾಹನ ತೆರಿಗೆಯನ್ನು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ ಖಾಸಗಿ ಸೇವಾ ವಾಹನ ತೆರಿಗೆಯನ್ನು ಪ್ರತಿ ಚದರ ಕಿ.ಮೀಗೆ ಶೇ50ರಂತೆ ಹೆಚ್ಚಳ ಮಾಡಿದೆ. ಇದರಿಂದ ಇನ್ನುಮುಂದೆ ಪ್ರತಿ ಚದರ ಕಿ.ಮೀಗೆ ಖಾಸಗಿ ಸೇವಾ ವಾಹನ ತೆರಿಗೆಯು 1650ರಿಂದ 1800 ಹಾಗೂ 1950ರಿಂದ 2220ವರೆಗೆ ಏರಿಕೆಯಾಗಲಿದೆ.

******************

# ವೃದ್ದರ ಮಾಸಾಶನ 1000 ರೂ.ಗೆ ಹೆಚ್ಚಳ, ನವೆಂಬರ್ 1ರಿಂದ ಜಾರಿ
ಬೆಂಗಳೂರು,ಜು.5- ಹಿರಿಯರ ನಾಗರಿಕರ ಕಲ್ಯಾಣಕ್ಕಾಗಿ ಬದ್ಧವಾಗಿರುವ ನಮ್ಮ ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ 600 ರೂ.ಗಳ ಮಾಸಾಶನವನ್ನು ಒಂದು ಸಾವಿರ ರೂ.ಗೆ ಹೆಚ್ಚಿಸಿ ನ.1ರಿಂದ ಜಾರಿಗೊಳಿಸಲು ನಿರ್ಧರಿಸಿದೆ. 65 ವರ್ಷ ಮೀರಿದ 32.92 ಲಕ್ಷ ವೃದ್ಧರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇದಕ್ಕಾಗಿ ಬಜೆಟ್‍ನಲ್ಲಿ 660 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಇಂದು ತಾವು ಮಂಡಿಸಿದ ಆಯವ್ಯಯದಲ್ಲಿ ತಿಳಿಸಿದರು.  ಸಂಧ್ಯಾ ಸುರಕ್ಷಾ ಯೋಜನೆಯಡಿ ಫಲಾನುಭವಿಗಳು ಪ್ರಸ್ತುತ 600 ರೂ.ಗಳ ಮಾಸಾಶನವನ್ನು ಪಡೆಯುತ್ತಿದ್ದಾರೆ. ಇದನ್ನು ಒಂದು ಸಾವಿರ ರೂ.ಗೆ ಹೆಚ್ಚಿಸಿ 2018ರ ನವೆಂಬರ್ 1ರಿಂದ ಜಾರಿಗೊಳಿಸಲಾಗುವುದು. ಈ ಮೊತ್ತವನ್ನು ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.

******************

#  ಮಾತೃಶ್ರೀ ಯೋಜನೆಯಡಿ ಗರ್ಭಿಣಿ-ಬಾಣಂತಿಯರಿಗೆ 1000 ಮಾಸಾಶನ

ಬೆಂಗಳೂರು,ಜು.5- ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬದ ಗರ್ಭಿಣಿಯರಿಗೆ ಮಾಸಾಶನ ನೀಡಲು ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ನವೆಂಬರ್ 1ರಿಂದ ರಾಜ್ಯಾದ್ಯಂತ ಜಾರಿಯಾಗಲಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ವಿಧಾನಸೌಧದಲ್ಲಿ ಮಂಡಿಸಿದ ಬಜೆಟ್ ಮಂಡನೆಯಲ್ಲಿ ಇದನ್ನು ಘೋಷಣೆ ಮಾಡಿದರು.   ಮುಖ್ಯಮಂತ್ರಿ ಮಾತೃ ಯೋಜನೆಯ ಪ್ರಕಾರ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಹೆರಿಗೆ ಪೂರ್ವದ ಮೂರು ತಿಂಗಳು ಹಾಗೂ ಬಾಣಂತಿಯರಿಗೆ ಮಾಸಿಕ ಒಂದು ಸಾವಿರ ಆರ್ಥಿಕ ನೆರವು ಸಿಗಲಿದೆ.
ಈ ಯೋಜನೆಯು ಇದೇ ನವೆಂಬರ್ 1ರಿಂದ ಪ್ರಾರಂಭವಾಗಲಿದ್ದು , ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ಸರ್ಕಾರದ ವತಿಯಿಂದಲೇ ಫಲಾನುಭವಿಗಳಿಗೆ ಹಣ ದೊರಕಲಿದೆ.

ಈ ಯೋಜನೆಯು ತಾಯಿಯ ಮೊದಲ ಎರಡು ಮಕ್ಕಳಿಗೆ ಮಾತ್ರ ಅನ್ವಯವಾಗಲಿದೆ. ಇದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 350 ಕೋಟಿ ಮೀಸಲಿಡಲಾಗಿದೆ. ರಾಜ್ಯ ಸರ್ಕಾರದ ಮಾತೃಪೂರ್ಣ ಹಾಗೂ ಕೇಂದ್ರ ಸರ್ಕಾರದ ಮಾತೃ ವಂದನೆ ಕಾರ್ಯಕ್ರಮದಂತೆ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಈ ಯೋಜನೆ ಉತ್ತೇಜನಕಾರಿಯಾಗಿದೆ ಎಂಬುದು ಸರ್ಕಾರದ ವಿಶ್ವಾಸವಾಗಿದೆ.

******************

# ಇಂಧನ ಇಲಾಖೆ ಬಲವರ್ಧನೆಗೆ 35 ಉಪ ವಿದ್ಯುತ್ ಕೇಂದ್ರಗಳ ಸ್ಥಾಪನೆ
ಬೆಂಗಳೂರು, ಜು.5- ಇಂಧನ ಇಲಾಖೆಯನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ 35 ಉಪ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ತಾವು ಮಂಡಿಸಿದ ಚೊಚ್ಚಲ ಬಜೆಟ್‍ನಲ್ಲಿ ತಿಳಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮೂಲಕ ಉಪ ಕೇಂದ್ರಗಳ ಸ್ಥಾಪನೆ , 75 ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಬೆಂಗಳೂರು ನಗರದಲ್ಲಿ ಎಲ್ಲ ಓವರ್‍ಹೆಡ್ ಮಾರ್ಗಗಳನ್ನು ಭೂಗತ ಮಾರ್ಗ (ಅಂಡರ್‍ಗ್ರೌಂಡ್ ಕೇಬಲ್)ಗಳಾಗಿ ಪರಿವರ್ತಿಸಲು ವಿಸ್ತೃತ ಯೋಜನೆಯನ್ನು ತಯಾರಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

******************

# ಮುಖ್ಯಮಂತ್ರಿಗಳ 1 ಲಕ್ಷ ಮನೆಗಳ ಯೋಜನೆ ಎಲ್ಲ ನಗರಗಳಿಗೂ ವಿಸ್ತರಣೆ
ಬೆಂಗಳೂರು, ಜು.5- ಬೆಂಗಳೂರು ನಗರದ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವ ಮುಖ್ಯಮಂತ್ರಿಯವರ 1 ಲಕ್ಷ ಮನೆಗಳು ಎಂಬ ಯೋಜನೆಯನ್ನು ಮುಂದಿನ ವರ್ಷಗಳಲ್ಲಿ ಎಲ್ಲ ನಗರಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.  ಇಂದು ತಾವು ಮಂಡಿಸಿದ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ಬೆಂಗಳೂರು ನಗರದಲ್ಲಿ ಬಡವರಿಗೆ ಮನೆಗಳನ್ನು ಒದಗಿಸುವಲ್ಲಿ ಇರುವ ತೊಂದರೆಗಳನ್ನು ನಿವಾರಿಸಲು ಆಯ್ದ ಸ್ಥಳಗಳಲ್ಲಿ ಬಹುಮಹಡಿ ಕಟ್ಟಡಗಳನ್ನು ಜಿ+14 ನಿರ್ಮಿಸಲು (ನೆಲಮಹಡಿ ಮತ್ತು 14 ಅಂತಸ್ತು) ಸರ್ಕಾರ ಉದ್ದೇಶಿಸಿದೆ ಎಂದರು.

ರಾಜ್ಯದ ಕೊಳಗೇರಿಗಳಲ್ಲಿರುವ ಜನಸಂಖ್ಯೆ 44 ಲಕ್ಷಕ್ಕೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದ್ದು ಕೊಳಗೇರಿಗಳನ್ನು ಅಭಿವೃದ್ಧಿಪಡಿಸುವ ಹಕ್ಕನ್ನು ವರ್ಗಾಯಿಸುವ (ಟಿಡಿಆರ್) ಬದಲಿಗೆ ಹೆಚ್ಚುವರಿ ನೆಲಗಟ್ಟು ಪ್ರದೇಶದ ಅನುಪಾತ (ಎಫ್‍ಎಆರ್) ಒದಗಿಸುವ ಮೂಲಕ ನಗರ ಪ್ರದೇಶಗಳಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು ಈ ಬಗ್ಗೆ ವಿಸ್ತೃತವಾದ ಮಾರ್ಗಸೂಚಿಯನ್ನು 2019-20 ರಿಂದ ಜಾರಿಗೆ ತರಲಾಗುವುದು ಎಂದು ಹೇಳಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 14 ಲಕ್ಷ ಮನೆಗಳು ನಿರ್ಮಾಣವಾಗಿದ್ದು ನಮ್ಮ ಮೈತ್ರಿ ಸರ್ಕಾರವು ವಸತಿ ಯೋಜನೆಯನ್ನು ಮುಂದುವರಿಸಲು ಉದ್ದೇಶಿಸಿದೆ. ಬೇಡಿಕೆಗೆ ಅನುಗುಣವಾಗಿ ಮನೆಗಳನ್ನು ನಿರ್ಮಾಣ ಮಾಡಲು ಸಂಕಲ್ಪ ತೊಟ್ಟಿದೆ. ಪ್ರಸ್ತುತ ವಸತಿ ಯೋಜನೆಯಲ್ಲಿ ವಿಕಲಚೇತನರಿಗೆ ಶೇ.3ರಷ್ಟು ಮೀಸಲಾತಿ ಇದ್ದು ಬೇಡಿಕೆಯ ಮೇರೆಗೆ ಆನ್‍ಲೈನ್ ಅರ್ಜಿಗಳನ್ನು ಕರೆದು ಮನೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

******************

# ಚೀನಾ ಕೈಗಾರಿಕೆಯೊಂದಿಗೆ ಪೈಪೋಟಿ ನಡೆಸಲು ಎಚ್‍ಡಿಕೆ ಮಾಸ್ಟರ್ ಪ್ಲ್ಯಾನ್

ಬೆಂಗಳೂರು, ಜು.5-ಕೈಗಾರಿಕಾ ಕ್ಷೇತ್ರದಲ್ಲಿ ಚೀನಾ ದೇಶವನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಕಾಂಪಿಟ್ ವಿತ್ ಚೀನಾ (ಚೀನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ) ಎಂಬ ಯೋಜನೆಯನ್ನು ಜಾರಿಗೆ ತರುತ್ತಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‍ನ್ನು ವಿಧಾನಸಭೆಯಲ್ಲಿಂದು ಮಂಡಿಸಿದರು. ಚೀನಾ ಉತ್ಪಾದಿತ ಪೀಠೋಪಕರಣ, ಸೌರಶಕ್ತಿ, ಎಲೆಕ್ಟ್ರಿಕ್ ಲೈಟಿಂಗ್ ವಸ್ತುಗಳು, ಸ್ನಾನಗೃಹ ವಸ್ತುಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಆಟಿಕೆಗಳು ಕಳೆದೆರಡು ದಶಕಗಳಿಂದ ಮಾರುಕಟ್ಟೆಗೆ ದಾಳಿ ಇಟ್ಟಿವೆ. ಇದರಿಂದ ಸ್ವಂತ ಉದ್ದಿಮೆ ಮುಚ್ಚುವ ಸ್ಥಿತಿ ಬಂದಿದೆ. ಉತ್ಪಾದಿಸು ಇಲ್ಲವೆ, ನಾಶವಾಗು ಎಂಬ ಉಕ್ತಿಯಂತೆ ನಮ್ಮ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಹೀಗಾಗಿ ಚೀನಾದೊಂದಿಗೆ ಸ್ಪರ್ಧೆಗಿಳಿಯಲು ಕರ್ನಾಟಕವನ್ನು ಸಜ್ಜುಗೊಳಿಸಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.

ಈ ಯೋಜನೆಯಲ್ಲಿ ಯಶಸ್ವಿ ಉದ್ಯಮಿಗಳ ನೇತೃತ್ವದಲ್ಲಿ ಯೋಜನಾ ಗುರಿ ಘಟಕ ಸ್ಥಾಪಿಸಲಾಗುತ್ತದೆ. ಹಳ್ಳಿಗಳ ಮಟ್ಟದಲ್ಲಿ ಬಿಡಿಭಾಗಗಳನ್ನು ಉತ್ಪಾದಿಸಿ, ತಾಲೂಕು ಮಟ್ಟದಲ್ಲಿ ಜೋಡಣೆ ಮಾಡಿ, ಜಿಲ್ಲಾ ಕೇಂದ್ರದಲ್ಲಿ ಅವುಗಳ ಮಾರುಕಟ್ಟೆಗಾಗಿ ಮಾಲ್‍ಗಳನ್ನು ತೆರೆಯಲಾಗುವುದು. ಇದಕ್ಕಾಗಿಯೇ ಜಿಲ್ಲಾ ಕೇಂದ್ರಗಳಲ್ಲಿ ಪ್ಲಗ್ ಅಂಡ್ ಪ್ಲೇ ಕೈಗಾರಿಕಾ ಶೆಡ್‍ಗಳನ್ನು ನಿರ್ಮಿಸಲಾಗುವುದು. ಪೂರಕವಾದ ಮಾನವಸಂಪನ್ಮೂಲ ವೃದ್ಧಿಗೊಳಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಆಯಾ ಪ್ರದೇಶದ ಸಂಪನ್ಮೂಲ ವೃತ್ತಿ ಕೌಶಲ್ಯಗಳನ್ನು ಆಧರಿಸಿ ವಿವಿಧ ಜಿಲ್ಲೆಗಳಲ್ಲಿ ಉತ್ಪಾದನಾ ವಲಯಗಳನ್ನು ಸ್ಥಾಪಿಸಲಾಗುತ್ತದೆ.

ಕಲಬುರಗಿ ಜಿಲ್ಲೆಯಲ್ಲಿ ಭಾರತದ ಸೋಲಾರ್ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದಿಸಲು ಅಗತ್ಯವಿರುವ ಸೋಲಾರ್ ಪ್ಯಾನಲ್, ಇನ್ವರ್ಟರ್‍ಗಳು, ಕ್ಯಾಪಸಿಟರ್‍ಗಳು ಮತ್ತು ಲ್ಯುಮಿನೇಟರ್‍ಗಳನ್ನು ಉತ್ಪಾದಿಸಲಾಗುತ್ತದೆ. ಭಾರತ ದೇಶದಲ್ಲಿ ವಿದ್ಯುತ್ ದೀಪದ ಉದ್ಯಮ ಸ್ಥಳೀಯವಾಗಿ 46 ಸಾವಿರ ಕೋಟಿ ಮೌಲ್ಯದ್ದಾಗಿದೆ. ಅಷ್ಟೂ ವಿದ್ಯುತ್ ದೀಪಗಳು ಚೀನಾದಿಂದ ಆಮದಾಗುತ್ತಿರುವ ಎಲ್‍ಇಡಿಗಳು ಆಕ್ರಮಿಸಿವೆ. ಅದಕ್ಕಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಗೃಹಪಯೋಗಿ ಎಲ್‍ಇಡಿ ಗಳನ್ನು ಉತ್ಪಾದಿಸುವ ಉದ್ಯಮವನ್ನು ಸ್ಥಾಪಿಸಲಾಗುವುದು.

ಸ್ನಾನಗೃಹದ ನೆಲಹಾಸುಗಳು, ಸ್ಯಾನಿಟರಿ ಉಪಕರಣಗಳು ಚೀನಾದಿಂದಲೇ ಆಮದಾಗುತ್ತಿವೆ. ಅದಕ್ಕೆ ಬದಲಾಗಿ ಹಾಸನ ಜಿಲ್ಲೆಯಲ್ಲೇ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಮ್ಮ ಸರ್ಕಾರ ಹೊಂದಿದೆ. ದೇಶಿ ಆಟಿಕೆಗಳ ಸಣ್ಣ ಉದ್ಯಮಗಳು ನಮ್ಮಲ್ಲಿದ್ದರೂ ಬ್ಯಾಟರಿ ಮತ್ತು ವಿದ್ಯುತ್ ಚಾಲಿತ ಆಟಿಕೆಗಳು ಚೀನಾದಿಂದಲೇ ಬರುತ್ತಿವೆ. ಅವುಗಳಲ್ಲಿ ಐಸಿಬಿ, ಚಿಪ್, ಮೈಕ್ರೋ ಡಿಸಿ ಮೋಟಾರ್‍ಗಳನ್ನು ಅಳವಡಿಸಿರುತ್ತಾರೆ. ಇಂತಹ ಆಟಿಕೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದ್ದು, ಅವುಗಳನ್ನು ಚೀನಾಕ್ಕೆ ಸವಾಲೊಡ್ಡುವಂತೆ ಕೊಪ್ಪಳದಲ್ಲಿ ತಯಾರಿಸುವ ಕ್ಲಸ್ಟರ್‍ಗಳನ್ನು ಸ್ಥಾಪಿಸಲಾಗುವುದು.

******************

# ಅಮೆರಿಕದ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಕೆಆರ್‍ಎಸ್ ಉದ್ಯಾನವನವ ಅಭಿವೃದ್ಧಿ

ಬೆಂಗಳೂರು, ಜು.5- ಮೈಸೂರಿನ ವಿಶ್ವವಿಖ್ಯಾತ ಕೆಆರ್‍ಎಸ್ ಉದ್ಯಾನವನವನ್ನು ಅಮೆರಿಕದ ಡಿಸ್ನಿ ಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸಲಾಗುವುದು ಎಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ. 80ರ ದಶಕದಲ್ಲಿ ವಿಶ್ವ ವಿಖ್ಯಾತಿ ಹೊಂದಿದ್ದ ಕೆಆರ್‍ಎಸ್ ಅಣೆಕಟ್ಟಿನ ಬೃಂದಾವನ ಉದ್ಯಾನವನ ಇತ್ತೀಚಿನ ದಿನಗಳಲ್ಲಿ ಕಳೆಗುಂದಿದೆ. ಹೀಗಾಗಿ ಬೃಂದಾವನದ ವೈಭವವನ್ನು ಮರುಕಳಿಸಬೇಕು ಎಂಬ ಉದ್ದೇಶದಿಂದ ಆ ಉದ್ಯಾನವನವನ್ನು ಖಾಸಗಿ ಸಹಭಾಗಿತ್ವದಲ್ಲಿ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸಲಾಗುವುದು.

ಈ ಯೋಜನೆಗೆ ಬಂಡವಾಳ ಹೂಡಲು ವಿಶ್ವಮಟ್ಟದ ಉದ್ಯಮಿಗಳು ಉತ್ಸುಕರಾಗಿದ್ದು, ಈ ಯೋಜನೆಯ ಕಾರ್ಯರೂಪಕ್ಕೆ 5 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ನಿಗದಿಪಡಿಸಲಾಗಿದೆ ಎಂದರು. ಮೇಕೆದಾಟು ಯೋಜನೆಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಯೋಜನೆಯನ್ನು ಚುರುಕುಗೊಳಿಸಿ ತಿರುವಳಿ ಪಡೆದು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

******************

# ಮೊದಲ ಬಜೆಟ್ ಆದ್ದರಿಂದ ಉದ್ವೇಗಕ್ಕೆ ಒಳಗಾಗಿದ್ದೇನೆ : ಸಿಎಂ ಕುಮಾರಸ್ವಾಮಿ
ಬೆಂಗಳೂರು,ಜು.5-ಹಣಕಾಸು ಮಂತ್ರಿಯಾಗಿ ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ಸಹಜವಾಗಿ ಉದ್ವೇಗಕ್ಕೆ ಒಳಗಾಗಿದ್ದೇನೆ. ಆದರೂ ರಾಜ್ಯ ರಾಜಧಾನಿಗೆ ಸಿಹಿ ಸುದ್ದಿಯನ್ನೇ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಬಜೆಟ್ ಮಂಡನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದರೂ ಬಜೆಟ್ ಮಂಡನೆ ಮಾಡಲು ಅವಕಾಶವಿರಲಿಲ್ಲ. ಇದು ನಾನೇ ಮಂಡಿಸುತ್ತಿರುವ ಬಜೆಟ್ ಆಗಿರುವುದರಿಂದ ಸಹಜವಾಗಿಯೇ ಉದ್ವೇಗಕ್ಕೆ ಒಳಗಾಗಿದ್ದೇನೆ ಎಂದು ಭಾವುಕರಾಗಿ ನುಡಿದರು.

ಜನರ ನಿರೀಕ್ಷೆಗಳು ಏನೆಂಬುದು ನನಗೆ ತಿಳಿದಿದೆ. ಅವರ ನಿರೀಕ್ಷೆಗೆ ತಕ್ಕಂತೆಯೇ ಬಜೆಟ್ ಮಂಡನೆ ಮಾಡಲಿದ್ದೇನೆ. ಯಾರೂ ಕೂಡ ಮುನಿಸಿಕೊಳ್ಳದಂತಹ ಸಿಹಿ ಸುದ್ದಿಯನ್ನು ನೀಡಲಿದ್ದೇನೆ. ಸರ್ವರು ಒಪ್ಪಿಕೊಳ್ಳುವಂತಹ ಬಜೆಟ್ ಇದಾಗಿದೆ. ಅಲ್ಲಿಯ ತನಕ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.
ನನ್ನ ಬಜೆಟ್ ಏನೆಂಬುದು ಮಂಡನೆಯಾಗುವವರೆಗೂ ಯಾರಿಗೂ ಅರ್ಥವಾಗುವುದಿಲ್ಲ. ಜನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದು ಜನೋಪಯೋಗಿ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ ಅಲ್ಲಿಯ ತನಕ ಕಾದು ನೋಡಿ ಎಂದರು.

# ಬಜೆಟ್ ಮಂಡನೆ ಹಿನ್ನೆಲೆ : ದೇವೇಗೌಡರ ಮನೆಯಲ್ಲಿ ವಿಶೇಷ ಪೂಜೆ
ಸಮ್ಮಿಶ್ರ ಸರ್ಕಾರದ ಮೊದಲ ಬಹುನಿರೀಕ್ಷಿತ ಬಜೆಟ್ ಗೆ ಕ್ಷಣಗಣನೆ ಆರಂಭವಾಗಿದ್ದು, ಹೆಚ್.ಡಿ. ದೇವೇಗೌಡರ ಮನೆಯಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಹೆಚ್ಚಾಗಿ ದೇವರನ್ನು ನಂಬುವ ದೊಡ್ಡ ಗೌಡರ ಕುಟುಂಬ ಇಂದು ಸಿಎಂ ಹೆಚ್.ಡಿ. ಕುಮಾರ ಸ್ವಾಮಿ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಪದ್ಮಾನಾಭ ನಗರದ ಹೆಚ್.ಡಿ. ದೇವೇಗೌಡರ ಮನೆಯಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಪೂಜೆ ಮುಗಿಯುವವರೆಗೂ ಪಕ್ಷದಿಂದ ಯಾರೇ ಬಂದರೂ ಒಳ ಬಿಡದಂತೆ ತಾಕೀತು ಮಾಡಲಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಉತ್ತಮ ಬಜೆಟ್ ಮಂಡಿಸಲಿ ಎಂದು ದೇವೇಗೌಡರು ದೇವರ ಮೊರೆ ಹೋಗಿದ್ದಾರೆ.

# ಬಜೆಟ್ ಮಂಡನೆಗೂ ಮುನ್ನ ಸಿಎಂ ಆದಿಚುಂಚನಗಿರಿ ಮಠಕ್ಕೆ ಸಿಎಂ ಭೇಟಿ
ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಮೊದಲ ಬಜೆಟ್ ಮಂಡಿಸಲಿರುವ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗುರುವಾರ ಬೆಳಗ್ಗೆ ಬಜೆಟ್ ಮಂಡನೆಗೂ ಮುನ್ನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ವಿಜಯ ನಗರದಲ್ಲಿರುವ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಸಿಎಂ ಕುಮಾರಸ್ವಾಮಿ ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದರು. ಅಲ್ಲಿಂದ ಗೃಹ ಕಚೇರಿ ಕೃಷ್ಣಾಕ್ಕೆ ತೆರಳಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಪ್ರತಿಯುಳ್ಳ ಸೂಟ್ ಕೇಸ್ ಜತೆ ವಿಧಾನಸೌಧಕ್ಕೆ ಆಗಮಿಸಿದರು.

******************

# ಮೈತ್ರಿ ಸರ್ಕಾರದ ಮೊದಲ ಬಜೆಟ್ ನ ಹೈಲೈಟ್ಸ್ ಇಲ್ಲಿದೆ ನೋಡಿ
* ಆರೋಗ್ಯ ಕರ್ನಾಟಕ ಯೋಜನೆ ಜಾರಿ
* ಹೋಬಳಿಗೊಂದು ವಸತಿ ಶಾಲೆ
*ಗರ್ಭಿಣಿ ಮತ್ತು ಬಾಣಂತಿಯರಿಗೆ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ
*ಹೊಸ ಸೌರಶಕ್ತಿ ನೀತಿ
*ಎಲ್ಲಾ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟಿನ್
*ರಾಜ್ಯದ 27 ನಗರಗಳಲ್ಲಿ ಅಮೃತ್ ಅಭಿಯಾನದಡಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ
* ಪೌರಕಾರ್ಮಿಕರಿಗೆ ವಸತಿ ಗೃಹ
*ಕಾರವಾರ, ತುಮಕೂರು, ಯಾದಗಿರಿ, ಹಾವೇರಿ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿ ನೀರಾವರಿ ಜಾರಿಗೆ 150 ಕೋಟಿ
*ತೆಂಗು ಬೆಳೆಗಾರರ ಹಿತರಕ್ಷಣೆಗೆವಿಶೇಷ ಯೋಜನೆ
*ಮೈಸೂರಿನಲ್ಲಿ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪನೆ
*ಚನ್ನಪಟ್ಟಣದ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮ ಪುನಃಶ್ಚೇತನ
*ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ.
* ಸ್ವಸಹಾಯ ಗುಂಪುಗಳ ಕೌಶಾಲ್ಯಾಭಿವೃದ್ಧಿಗಾಗಿ ಕಾಯಕ ಯೋಜನೆ
*5 ನಗರಗಳಲ್ಲಿ ಬೀದಿಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳ ನೆರವಿಗಾಗಿ ಬಡವರ ಬಂಧು ಕಿರು ಸಾಲ ಯೋಜನೆ
*ಕರ್ನಾಟಕ ಅಂತರ್ ರಾಷ್ಟ್ರೀಯ ವಲಸಿಗ ಕೇಂದ್ರದ ಅಭಿವೃದ್ಧಿ
*ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ
*ಸರ್ಕಾರಿ ಶಾಲೆಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ
* ಹೃದಯ, ಮೂತ್ರಪಿಂಡ, ಯಕೃತ್ ಇತ್ಯಾದಿ ಅಂಗಗಳ ಕಸಿಗಾಗಿ ಬಡವರಿಗೆ ಪ್ರತ್ಯೇಕ ಯೋಜನೆ
*ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ, ಅಂಕಾಲಜಿ ಘಟಕ ಸ್ಥಾಪನೆ
*ಕನಕಪುರದಲ್ಲಿ ಹೊಸ ಮೆಡಿಕಲ್ ಕಾಲೇಜ್
*ಮಂಡ್ಯ ಜಿಲ್ಲಾಸ್ಪತ್ರೆಯನ್ನು 800 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಕೆ
*ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
*ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಗೆ 80 ಕೋಟಿ ರೂ ಅನುದಾನ
*ಹೆದ್ದಾರಿಗಳಲ್ಲಿ ರಸ್ತೆಬದಿ ಸೌಲಭ್ಯ ನಿರ್ಮಾಣ
* ಗಗನ ಚುಕ್ಕಿ, ಭರಚುಕ್ಕಿ ಜಲಪಾತ ಪ್ರದೇಶದ ಅಭಿವೃದ್ಧಿ
*ರಾಮನಗರ ಜಿಲ್ಲೆಯ ಕಣ್ವ ಜಲಾಶಯ ಪ್ರದೇಶದಲ್ಲಿ ಚಿಲ್ಡ್ರನ್ ವಲ್ರ್ಡ್
*ಗಂಗಾ ಕಲ್ಯಾಣ ಯೋಜನೆಯಡಿ ಸಹಾಯಧನ ಹೆಚ್ಚಳ
*ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ
*ಪ್ರಗತಿ ಕಾಲೋನಿ ಯೋಜನೆ ಜಾರಿ
*ವಿಕಲಚೇತನ ವ್ಯಕ್ತಿಗಳ ಸಮೀಕ್ಷೆ
*ಚೀನಾ ದೇಶದೊಂದಿಗೆ ಸ್ಪರ್ಧಾತ್ಮಕ ಸ್ಪರ್ಧೆ ಎಂಬ ಯೋಜನೆ ಜಾರಿ
* ಕಲಬುರಗಿ ಜಿಲ್ಲೆ ಭಾರತದ ಸೋಲಾರ್ ಜಿಲ್ಲೆಯಾಗಿ ಅಭಿವೃದ್ಧಿ
*ಚಿತ್ರದುರ್ಗದಲ್ಲಿ ಎಲ್‍ಇಡಿ ಬಲ್ಬ್ ಉತ್ಪಾದನಾ ಘಟಕ ಸ್ಥಾಪನೆ
*ತುಮಕೂರಿನಲ್ಲಿ ಕ್ರೀಡೆ ಹಾಗೂ ಫಿಟ್ನೆಸ್ ಉತ್ಪನ್ನಗಳ ತಯಾರಿಕಾ ಘಟಕ
*ಬೆಂಗಳೂರು ನಗರದ ಬಡ ವಸತಿಹೀನರಿಗೆ ಆಯ್ದ ಸ್ಥಳಗಳಲ್ಲಿ ಬಹುಮಹಡಿ ಮನೆ ನಿರ್ಮಾಣ
*ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಜಾರಿ
*ಕೆಆರ್‍ಎಸ್ ಖಾಸಗಿ ಸಹಭಾಗಿತ್ವದಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ದಿ
*ಕೃಷ್ಣಾ ಮೇಲ್ದಂಡೆ ಯೋಜನೆ ತ್ವರಿತಗತಿ ಅನುಷ್ಠಾನ
*ಹಿರಿಯ ನಾಗರಿಕರ ಮಾಸಾಶನ 1ಸಾವಿರ ರೂಗೆ ಏರಿಕೆ
*ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆ
*ಜಿಲ್ಲೆಗೊಂದು ಕಾಡು ಯೋಜನೆ
*ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಪ್ರೋತ್ಸಾಹಿಸಲು 100 ಚಾರ್ಜಿಂಗ್ ಘಟಕ ಸ್ಥಾಪನೆ
*ಸಾರಿಗೆ ಸಂಸ್ಥೆಗಳಿಗೆ 4236 ಹೊಸ ಬಸ್ ಖರೀದಿ
*ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂಹವನ ಸೌಲಭ್ಯ
*ಪ್ರತೀ ವರ್ಷ ಆದಿ ಶಂಕರಾಚಾರ್ಯ ಜಯಂತಿ ಆಚರಣೆ
*ಡಾ.ರಾಜ್‍ಕುಮಾರ್ ಸ್ಮರಣಾರ್ಥ ಕಂಠೀರವ ಸ್ಟುಡಿಯೋ ಆವರಣದಲ್ಲಿ ಯೋಗ ಕೇಂದ್ರ ಸ್ಥಾಪನೆ
*ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ
*ಬೆಂಗಳೂರಿನಲ್ಲಿ 6 ಎಲಿವೇಟೆಡ್ ಕಾರಿಡಾರ್
*ಬೆಳ್ಳಂದೂರು ಕೆರೆಯ ಸರ್ವಾಂಗೀಣ ಅಭಿವೃದ್ಧಿ
*ಮಂಡ್ಯ ನಗರದ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್
*ಬೆಂಗಳೂರಿನ ಪೀಣ್ಯದಲ್ಲಿ ರಾಸಾಯನಿಕ ತಾಜ್ಯ ವಸ್ತುಗಳ ಶುದ್ಧೀಕರಣ ಘಟಕ
*ದಂಡ ಮತ್ತು ಬಡ್ಡಿ ಮನ್ನಾ ಮಾಡಲು ಕರ ಸಮಾಧಾನ ಯೋಜನೆ
*ಮೈಸೂರು ಜಿಲ್ಲೆಯಲ್ಲಿ 3ಕೋಟಿ ವೆಚ್ಚದಲ್ಲಿ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪನೆ
*ಶಿವಮೊಗ್ಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ತಾಯಿನಾಡು ಭದ್ರತಾ ವಿವಿ
*ಹಂಪಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾನಿಲಯ
*ಕೃಷಿ ಭೂಮಿಯಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ

 

( ಕುಮಾರಣ್ಣನ ಲೆಕ್ಕಾಚಾರದ ಕಂಪ್ಲೀಟ್ ಡೀಟೇಲ್ಸ್ )

 

 

 

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin