ದೋಸ್ತಿ  ಸರ್ಕಾರದ ಸಾಧನೆ ಬಣ್ಣಿಸಲು ಬಿಡುಗಡೆಯಾಗಲಿದೆ “ಮೈತ್ರಿಪರ್ವ’ ಕೃತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ,19-ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ಭರ್ತಿಯಾದ ಬೆನ್ನಲ್ಲೇ ಅದರ ಸಾಧನೆಯನ್ನು ಬಣ್ಣಿಸುವ ಮೈತ್ರಿಪರ್ವ ಎಂಬ ಕೃತಿ ಗುರುವಾರ ಬಿಡುಗಡೆಯಾಗಲಿದೆ.

ಜೂನ್ ಇಪ್ಪತ್ತರ ಗುರುವಾರ ಬಿಡುಗಡೆಯಾಗಲಿರುವ ಮೈತ್ರಿಪರ್ವ ಕೃತಿ ಒಂದು ವರ್ಷದ ಸರ್ಕಾರದ ಸಾಧನೆಯನ್ನು ವಿವರವಾಗಿ ಬಣ್ಣಿಸಲಿದೆ.

ವಿಧಾನಸಭಾ ಚುನಾವಣೆಯ ನಂತರ ರೂಪುಗೊಂಡ ಅತಂತ್ರ ಪರಿಸ್ಥಿತಿ,ಅದನ್ನು ನಿವಾರಿಸಲು ಜೆಡಿಎಸ್-ಕಾಂಗ್ರೆಸ್ ಒಗ್ಗೂಡಿ ಸರ್ಕಾರ ರಚಿಸಬೇಕಾದ ಸೂಕ್ಷ್ಮ ಸನ್ನಿವೇಶ.ನಂತರದ ದಿನಗಳಲ್ಲಿ ಎದುರಾದ ಆತಂಕಗಳ ನಡುವೆ ಸರ್ಕಾರ ಒಂದು ವರ್ಷದಲ್ಲಿ ಮಾಡಿದ ಸಾಧನೆಯ ವಿವರ ಕೃತಿಯಲ್ಲಿರಲಿದೆ.

ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡು ಬಜೆಟ್ ಮಂಡಿಸಿದ್ದು ಆ ಮೂಲಕ 430 ಭರವಸೆಗಳ ಪೈಕಿ 400 ಭರವಸೆಗಳನ್ನು ಈಡೇರಿಸಿದ ಕುರಿತ ವಿವರ ಕೃತಿಯಲ್ಲಿರಲಿದೆ.

ಅಧಿಕಾರಕ್ಕೆ ಬಂದ ನಂತರ ರೈತರ ಸಾಲ ಮನ್ನಾ ಮಾಡುವ ಘೋಷಣೆ ಯಶಸ್ವಿಯಾಗಿ ಅನುಷ್ಟಾನವಾಗಿದ್ದು,ಶುರುವಿನಲ್ಲಿ ರೈತರ ಎರಡು ಲಕ್ಷ ರೂವರೆಗಿನ ಸಾಲ ಮನ್ನಾಗೆ 43 ಸಾವಿರ ಕೋಟಿ ರೂ ಬೇಕು ಎಂದಾಗಿದ್ದು,ಆನಂತರ ಅದು 24 ಸಾವಿರ ಕೋಟಿ ರೂಗಳಿಗೆ ಇಳಿದ ಕುತೂಹಲಕಾರಿ ವಿದ್ಯಮಾನದ ವಿವರ ಕೃತಿಯಲ್ಲಿದೆ.

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಸರ್ಕಾರವೊಂದು ಎರಡು ಲಕ್ಷ ರೂಗಳವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಿದ ಬೆಳವಣಿಗೆ ಇದಾಗಿದ್ದು ಈಗಾಗಲೇ ಇಪ್ಪತ್ತು ಸಾವಿರ ಕೋಟಿ ರೂಗಳಷ್ಟು ಕೃಷಿ ಸಾಲ ಮನ್ನಾ ಹಣ ಬಿಡುಗಡೆ ಮಾಡಲಾಗಿದೆ.

ಉಳಿದಂತೆ ನಾಲ್ಕು ಸಾವಿರ ಕೋಟಿ ರೂಪಾಯಿಗಳು ಸಹಕಾರ ಸಂಘಗಳಲ್ಲಿ ರೈತರು ಮಾಡಿದ ಕೃಷಿ ಸಾಲವಾಗಿದ್ದು ಅವಧಿ ಪೂರ್ಣಗೊಂಡಂತೆಲ್ಲ ತನ್ನಿಂತಾನೇ ಮಾಫಿಯಾಗಲಿರುವ ಕುರಿತು ವಿವರಿಸಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೃಹ ಕಛೇರಿ ಕೃಷ್ಣಾ,ವಿಧಾನಸೌಧ ಹಾಗೂ ಜೆಪಿ ನಗರದ ತಮ್ಮ ನಿವಾಸದ ಬಳಿ ನಡೆಸುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಂದ ಅರ್ಜಿಗಳ ವಿವರ,ಈ ಅರ್ಜಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆಯ ವಿವರ ಕೃತಿಯಲ್ಲಿದೆ.

ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯಿಂದ ಆಗಿರುವ ಅನುಕೂಲದ ಕುರಿತು ಕೃತಿಯಲ್ಲಿ ಮಾಹಿತಿ ನೀಡಲಾಗಿದ್ದು ಇದೇ ರೀತಿ ರೈತರು,ಮಹಿಳೆಯರು,ಕೂಲಿ-ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳಿಗೆ ಯಾವ್ಯಾವ ರೀತಿ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಲಾಗಿದೆ?ಎಂಬ ವಿವರ ಕೃತಿಯಲ್ಲಿದೆ.

ಕಟ್ಟಡಗಳ ನಕ್ಷೆಗೆ ಅನುಮತಿ ನೀಡುವುದರಿಂದ ಹಿಡಿದು ವಿವಿಧ ಯೋಜನೆಗಳನ್ನು ಆನ್‌ಲೈನ್ ಮೂಲಕ ಅನುಷ್ಟಾನಗೊಳಿಸಿದ ವಿವರಗಳು ಕೃತಿಯಲ್ಲಿದ್ದು ಬಡವರ ಆರೋಗ್ಯ ರಕ್ಷಿಸುವ ಆಯುಷ್ಮಾನ್ ಕರ್ನಾಟಕ ಯೋಜನೆಯ ಕುರಿತು ವಿವರಗಳಿವೆ.

ಪರಿಶಿಷ್ಟ ಜಾತಿ,ಪಂಗಡಕ್ಕೆ ಮೀಸಲಾದ ಹಣವನ್ನು ಸಮರ್ಪಕವಾಗಿ ಬಳಸುವ ಕುರಿತು ಕೈಗೊಂಡ ಕ್ರಮ,ರಾಜ್ಯದ ವಿವಿಧ ಸಮುದಾಯಗಳಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವ ವಿಷಯದಲ್ಲಿ ತೆಗೆದುಕೊಂಡ ಎಚ್ಚರಿಕೆಗಳ ವಿವರವೂ ಇದರಲ್ಲಿದೆ.

ಒಟ್ಟಿನಲ್ಲಿ ಕಲ್ಲು-ಮುಳ್ಳಿನ ದಾರಿಯಲ್ಲಿ ನಡೆದರೂ ಕಳೆದ ಒಂದು ವರ್ಷದಲ್ಲಿ ಸರ್ಕಾರ ಯಶಸ್ವಿಯಾಗಿ ಹೆಜ್ಜೆ ಗುರುತು ಮೂಡಿಸಿದ ವಿವರಗಳು ಕೃತಿಯಲ್ಲಿರಲಿವೆ ಎಂದು ಮೂಲಗಳು ವಿವರಿಸಿವೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin