ವಿಪ್‍ಗೆ ಕ್ಯಾರೇ ಎನ್ನದ ಅತೃಪ್ತ ಶಾಸಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.12- ವಿಧಾನಮಂಡಲ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಜಾರಿಗೊಳಿಸಲಾದ ವಿಪ್‍ಗೆ, ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಡೋಂಟ್ ಕೇರ್ ಎನ್ನುವ ನಿಲುವು ತಳೆದಿದ್ದಾರೆ.

ಸದನಕ್ಕೆ ಗೈರಾಗಿ ವಿಪ್ ಉಲ್ಲಂಘಿಸಿದ್ದಕ್ಕೆ ಅನರ್ಹತೆಗೊಳಿಸಿದರೆ ಕಾನೂನು ಹೋರಾಟ ಮಾಡಲು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಎಂಎಲ್‍ಎಗಳು ನಿರ್ಧಾರ ಮಾಡಿದ್ದಾರೆಂದು ತಿಳಿದುಬಂದಿದೆ.

ಇಂದಿನಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಶಾಸಕರಿಗೆ ಜಾರಿಗೊಳಿಸಿರುವ ವಿಪ್‍ಗೆ ಬಂಡಾಯ ಶಾಸಕರು ಹೆಚ್ಚಿನ ಮಹತ್ವ ನೀಡಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೇ ನೀಡಿರುವಾಗ ತಮ್ಮ ಮೇಲೆ ವಿಪ್ ಹೇಗೆ ಜಾರಿಗೊಳಿಸಲು ಬರುತ್ತದೆ ಎನ್ನುವುದು ಬಂಡಾಯ ಶಾಸಕರ ವಾದವಾಗಿದೆ.

ರಾಜೀನಾಮೆಯನ್ನು ಸ್ಪೀಕರ್ ಅವರು ಇನ್ನೂ ಅಂಗೀಕರಿಸದಿದ್ದಾಗ ಅವರು ತಾಂತ್ರಿಕವಾಗಿ ಪಕ್ಷದ ಶಾಸಕರಾಗಿರುತ್ತಾರೆ. ಹಾಗಾಗಿ ಅವರಿಗೆ ಶಾಸಕರಿಗೆ ನೀಡುವ ವಿಪ್ ಅನ್ವಯವಾಗುತ್ತದೆ. ಸದನಕ್ಕೆ ಗೈರು ಹಾಜರಾದರೆ, ಸದನದಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ವಿಪ್ ಉಲಂಘಿಸಿದಂತಾಗುತ್ತದೆ ಎನ್ನುವುದು ಆಡಳಿತ ಪಕ್ಷಗಳ ವಾದವಾಗಿದೆ.

ವಿಪ್ ಉಲ್ಲಂಘನೆ ಮಾಡಿದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅನುಚ್ಛೇದ 10ರಲ್ಲಿ ತಿಳಿಸಿದಂತೆ ಅಂತಹ ಶಾಸಕರನ್ನು ಅನರ್ಹಗೊಳಿಸುವಂತೆ ಹಾಗೂ ಆರು ವರ್ಷ ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸುವಂತೆ ದೂರು ದಾಖಲಿಸಲಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಅತೃಪ್ತ ಶಾಸಕರಿಗೆ ರವಾನಿಸಿದ್ದಾರೆ.

ದೋಸ್ತಿ ಪಕ್ಷಗಳು ವಿಪ್ ಹೆಸರಲ್ಲಿ ಹೆದರಿಸುವ ತಂತ್ರಕ್ಕೆ ಮಣಿಯದೆ ಅನರ್ಹತೆಗೊಳಿಸಿದರೆ ಅದರ ವಿರುದ್ಧ ಸ್ಪೀಕರ್, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ನಡೆಸುವ ಅಭಿಲಾಷೆ ಹೊಂದಿದ್ದಾರೆಂದು ಹೇಳಲಾಗಿದೆ.

ರಾಜಕೀಯ ಅಸ್ಥಿರತೆ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ವಿಪ್‍ನ್ನು ಬಂಡಾಯ ಶಾಸಕರ ಮೇಲೆ ಅಸ್ತ್ರವನ್ನಾಗಿ ದೋಸ್ತಿ ಪಕ್ಷಗಳು ಬಳಸಿಕೊಂಡಿವೆ. ಇದೇ ಅಸ್ತ್ರವನ್ನು ಆಡಳಿತ ಪಕ್ಷಗಳ ಮೇಲೆ ತಿರುಗು ಬಾಣವಾಗುವಂತೆ ಪ್ರಯೋಗಿಸಲು ರೆಬೆಲ್ ಶಾಸಕರು ಸಿದ್ದರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಪ್ರೀಂಕೋರ್ಟ್ ಆದೇಶದಂತೆ ನಿನ್ನೆ ಸಂಜೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಶಾಸಕರು, ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದರು.

# ಕಾಂಗ್ರೆಸ್‍ನಿಂದ ವಿಪ್ ಜಾರಿ:
ಜೆಡಿಎಸ್‍ನ ಹುಣಸೂರು ಶಾಸಕ ಎಚ್. ವಿಶ್ವನಾಥ್, ಕೆ. ಆರ್. ಪೇಟೆ ಶಾಸಕ ನಾರಾಯಣ ಗೌಡ, ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ. ಗೋಪಾಲಯ್ಯ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ.

ಇದೇ ರೀತಿ ಕಾಂಗ್ರೆಸ್ಸಿನ 10 ಶಾಸಕರ ರಾಜೀನಾಮೆ ಸ್ವೀಕೃತಗೊಂಡಿದ್ದರೂ ಅಂಗೀಕಾರವಾಗಿಲ್ಲ. ರಾಜೀನಾಮೆಗಳು ಅಂಗೀಕಾರವಾಗಿಲ್ಲದ ಕಾರಣ ಕಾಂಗ್ರೆಸ್ -ಜೆಡಿಎಸ್ ಪಕ್ಷಗಳು ತಮ್ಮ ರೆಬೆಲ್ ಶಾಸಕರಿಗೆ ವಿಪ್ ಜಾರಿಗೊಳಿಸಿ ಸದನಕ್ಕೆ ಹಾಜರಾಗಿ, ಇಲ್ಲದಿದ್ದರೆ ಅನರ್ಹತೆ ಎದುರಿಸಿ ಎಂದು ಸೂಚನೆ ಕೊಟ್ಟಿವೆ.

# ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದೇಕೆ?:
ಇದಲ್ಲದೆ, ಜೆಡಿಎಸ್ ಪರವಾಗಿ ವಕೀಲ ರಂಗನಾಥ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಕಾಂಗ್ರೆಸ್ ಸಹ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‍ಗೆ ದೂರು ನೀಡಿದೆ. ಆದರೆ, ಯಾವುದೇ ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಸ್ಪೀಕರ್ ರಮೇಶ್‍ಕುಮಾರ್ ಅವರು ಯಾವುದೇ ತೀರ್ಮಾನಗಳನ್ನು ಕೈಗೊಂಡಿಲ್ಲ.

# ಜೆಡಿಎಸ್‍ನ ಮೂವರಿಗೆ ವಿಪ್:
ಒಂದು ವೇಳೆ ವಿಪ್ ಉಲ್ಲಂಘಿಸಿದ್ದಕ್ಕೆ ರೆಬೆಲ್ ಶಾಸಕರನ್ನು ಅನರ್ಹಗೊಳಿಸಿದರೆ, ಸರ್ಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಿದರೆ ಅಗತ್ಯ ಸಂಖ್ಯಾಬಲ ಸಿಗುವುದಿಲ್ಲ, ಅನರ್ಹತೆ ಆದೇಶವನ್ನು ಪ್ರಶ್ನಿಸಿ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಬಹುದು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin