ಕುಸುಮಾ ಪರ ಜಂಟಿಯಾಗಿ ಅಖಾಡಕ್ಕಿಳಿದ ಡಿಕೆಶಿ, ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.30 – ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಂಟಿಯಾಗಿ ರೋಡ್ ಶೋ ನಡೆಸಿ ಭರ್ಜರಿ ಪ್ರಚಾರ ನಡೆಸಿದರು. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಏಕ ಕಾಲಕ್ಕೆ ಜಂಟಿಯಾಗಿ ಪ್ರಚಾರ ನಡೆಸಿದ್ದು , ಕ್ಷೇತ್ರದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಪ್ರಚಾರದುದ್ದಕ್ಕೂ ಮತದಾರರು ಹೂ ಮಳೆ ಸುರಿಸಿ ಜಯಘೋಷಗಳ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಡಿ.ಕೆ, ಡಿ.ಕೆ, ಹೌದು ಹುಲಿಯಾ ಎಂಬ ಘೋಷಣೆಗಳು ಸಾಮಾನ್ಯವಾಗಿದ್ದವು. ಕಿಕ್ಕಿರಿದ ಜನ ಸಾಗರದ ನಡುವೆ ದಿಗ್ಗಜರಿಬ್ಬರ ರೋಡ್ ಶೋ ಇಡೀ ದಿನ ಕ್ಷೇತ್ರಾದ್ಯಂತ ಸಂಚರಿಸಿತ್ತು. ಅಲ್ಲಲ್ಲಿ ಬಹಿರಂಗ ಸಭೆಗಳು ಕೂಡ ನಡೆದವು. ಸಭೆಗಳಲ್ಲಿ ಹಿಂದಿನ ಸರ್ಕಾರದ ಕೊಡುಗೆಗಳ ಬಗ್ಗೆ ಇಬ್ಬರು ನಾಯಕರು ವಿವರಿಸಿದ್ದಲ್ಲದೆ ಬಿಜೆಪಿ ನಾಯಕರ ವೈಫಲ್ಯ , ಬಿಜೆಪಿ ಅಭ್ಯರ್ಥಿಯ ದ್ರೋಹದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರು.

ಬೆಳಗ್ಗೆ 11 ಗಂಟೆಗೆ ಜಾಲಹಳ್ಳಿ, ಎಚ್‍ಎಂಟಿ ಲೇಔಟ್, ಲಕ್ಷ್ಮೀದೇವಿನಗರ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ಆರ್‍ಆರ್‍ನಗರ ವಾರ್ಡ್‍ಗಳ ಪ್ರಮುಖ ಬಡಾವಣೆ ಹಾಗೂ ರಸ್ತೆಗಳಲ್ಲಿ ಜಂಟಿ ರೋಡ್‍ಶೋ ನಡೆಯಿತು. ಶಾರದಾನಗರ ಶಾಂಭವಿ ಕಾಲೋನಿ, ಬಾಹುಬಲಿ ನಗರದಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿದ ಇಬ್ಬರು ಪ್ರಮುಖ ನಾಯಕರು ಹೋಯ್ಸಳ ಸರ್ಕಲ್‍ನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜ್ಞಾನಭಾರತಿ ವಾರ್ಡ್‍ನ ಕೆಂಗುಂಟೆ ಮೈದಾನದಲ್ಲಿ, ಆರ್‍ಆರ್‍ನಗರದ ಚನ್ನಸಂದ್ರದಲ್ಲಿ ಬಹಿರಂಗ ಸಮಾವೇಶದಲ್ಲಿ ಇಬ್ಬರೂ ನಾಯಕರು ಮಾತನಾಡಿ, ಬಿಜೆಪಿ ನಾಯಕರು ಹಾಗೂ ಅಭ್ಯರ್ಥಿಯ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿದ್ಯಾವಂತೆ, ಸುಸಂಸ್ಕøತೆ. ಆಕೆಯನ್ನು ಬೆಂಬಲಿಸಿ. ಕ್ಷೇತ್ರದಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸಲು ಅವಕಾಶ ಮಾಡಿಕೊಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ದೂರದೃಷ್ಟಿಯಿಂದ ಕಾಂಗ್ರೆಸ್ ವಿದ್ಯಾವಂತೆ ಹಾಗೂ ಒಳ್ಳೆಯ ಹೆಣ್ಣು ಮಗಳನ್ನು ರಾಜ ರಾಜೇಶ್ವರಿ ನಗರಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಕ್ಷೇತ್ರದಲ್ಲಿ ಈವರೆಗೂ ಇರುವ ಭಯದ ವಾತಾವರಣಕ್ಕೆ ಕೊನೆ ಹಾಡಬೇಕಿದೆ. ನೀಚ ರಾಜಕಾರಣವನ್ನು ತೊಲಗಿಸಬೇಕಿದೆ. ಆ ಕಾರಣಕ್ಕಾಗಿ ಕ್ಷೇತ್ರದ ಜನ ಕುಸುಮಾ ಅವರನ್ನು ಬೆಂಬಲಿಸಬೇಕು ಎಂದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಮುನಿರತ್ನ ಅವರ ಸೋಲು ಕಟ್ಟಿಟ್ಟ ಬುತ್ತಿ. ಹೆದರಿಸಿ, ಬೆದರಿಸಿ ಮತ ಹಾಕಿಸಿಕೊಂಡು ಗೆಲ್ಲುವ ಬಿಜೆಪಿ ಅಭ್ಯರ್ಥಿಯ ಕನಸು ಈಡೇರುವುದಿಲ್ಲ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕಾಂಗ್ರೆಸ್‍ನ ಹಿರಿಯ ನಾಯಕ ಐವಾನ್ ಡಿಸೋಜಾ ಮತ್ತಿತರ ನಾಯಕರು ರೋಡ್ ಶೋನಲ್ಲಿ ಹಾಜರಿದ್ದರು. ರೋಡ್ ಶೋ ಉದ್ದಕ್ಕೂ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದು ಬೆಂಬಲ ವ್ಯಕ್ತಪಡಿಸಿದರು.

Facebook Comments