ಕಾರು ಅಡ್ಡಗಟ್ಟಿ ಕಾಂಗ್ರೆಸ್ ಮುಖಂಡನ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಆ.7- ಕಾರಿನಲ್ಲಿ ಹೋಗುತ್ತಿದ್ದ ಕಾಂಗ್ರೆಸ್ ಮುಖಂಡನ ಕಾರು ಅಡ್ಡಗಟ್ಟಿದ ನಾಲ್ವರು ದರೋಡೆಕೋರರು ಮುಖಂಡನ ಮೇಲೆ ಹಲ್ಲೆ ಮಾಡಿ 50 ಗ್ರಾಂ ಸರ, 3 ಉಂಗುರ, 25 ಸಾವಿರ ಹಣ, ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೂವಳ್ಳಿ ಗ್ರಾಮದ ಹನುಮಂತಯ್ಯ ದರೋಡೆಗೊಳಗಾಗಿರುವ ಕಾಂಗ್ರೆಸ್ ಮುಖಂಡ.

ಚಿಕ್ಕಮಗಳೂರಿಗೆ ಹೋಗುವ ಸಲುವಾಗಿ ರಾತ್ರಿ 8 ಗಂಟೆ ಸುಮಾರಿನಲ್ಲಿ ಬೂವಳ್ಳಿ ಗ್ರಾಮದ ನರಿಗುಡ್ಡ ರಸ್ತೆಯಲ್ಲಿರುವ ತಮ್ಮ ತೋಟದ ಮೂಲಕ ಸ್ಕಾರ್ಪಿಯೋ ಕಾರಿನಲ್ಲಿ ಬರುತ್ತಿದ್ದರು. ಇದೇ ಸಮಯ ಕಾದಿದ್ದ ನಾಲ್ವರು ಮುಸುಕುಧಾರಿ ದರೋಡೆಕೋರರು ದಾರಿಯಲ್ಲಿ ಕಲ್ಲುಗಳನ್ನು ಅಡ್ಡ ಇಟ್ಟಿದ್ದಾರೆ.

ಹನುಮಂತಯ್ಯ ಅವರು ಇದೇ ಮಾರ್ಗವಾಗಿ ಬಂದಾಗ ರಸ್ತೆಯಲ್ಲಿ ಕಲ್ಲು ಅಡ್ಡವಿರುವುದನ್ನು ಗಮನಿಸಿ ಕಾರು ಇಳಿಯುತ್ತಿದ್ದಂತೆ ಏಕಾಏಕಿ ದರೋಡೆಕೋರರು ದಾಳಿ ಮಾಡಿ ಅವರ ಮೇಲೆ ಹಲ್ಲೆ ನಡೆಸಿ ಅವರ ಮೈಮೇಲಿದ್ದ ಸರ, ಉಂಗುರ ಹಾಗೂ 25 ಸಾವಿರ ಹಣ, ಮೊಬೈಲ್, ಕಾರಿನ ದಾಖಲೆಗಳು ಹಾಗೂ ಕೀಯನ್ನು ಕಿತ್ತುಕೊಂಡು ಪರಾರಿಯಾಗುವ ಮಾರ್ಗಮಧ್ಯೆ ಕಾರಿನ ಕೀ ಎಸೆದು ಹೋಗಿದ್ದಾರೆ.

ಸುದ್ದಿ ತಿಳಿದ ಅಕ್ಕೂರು ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯರ ಆಕ್ರೋಶ: ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕಳ್ಳತನ, ದರೋಡೆಗಳು ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗಸ್ತನ್ನು ಹೆಚ್ಚಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೂವಳ್ಳಿಯಲ್ಲಿ ಕಳೆದ ವಾರ 15 ಕುರಿಗಳ ಕಳ್ಳತನವಾಗಿತ್ತು. ಅಲ್ಲದೆ, ಇದೇ ಅವಧಿಯಲ್ಲಿ ಮನೆಗಳ್ಳತನ ನಡೆದು ಚಿನ್ನಾಭರಣ ಲೂಟಿ ಮಾಡಲಾಗಿತ್ತು. ಈ ವ್ಯಾಪ್ತಿಯಲ್ಲಿ ಕತ್ತಲಾಗುತ್ತಿದ್ದಂತೆ ದರೋಡೆಗಳು ಹೆಚ್ಚಾಗುತ್ತಿವೆ. ಕೂಡಲೇ ಪೊಲೀಸರು ಈ ಬಗ್ಗೆ ಗಮನ ಹರಿಸಿ ದರೋಡೆ, ಕಳ್ಳತನ ತಡೆಗಟ್ಟಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

Facebook Comments