ಶಾಸಕ ವಿಶ್ವನಾಥ್ ಕೊಲೆಗೆ ಸಂಚು : ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿರುವ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.6- ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವನಾಥ್ ಅವರ ಕೊಲೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾನುಕುಂಟೆ ಠಾಣೆ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ. ಶಾಸಕ ವಿಶ್ವನಾಥ್ ಅವರು ಠಾಣೆಗೆ ಹಾಜರಾಗಿ ನೀಡಿರುವ ಹತ್ಯೆ ಸಂಚಿನ ಸಂಭಾಷಣೆಯ ಸಿಡಿಗಳನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್)ಕ್ಕೆ ಕಳುಹಿಸಿಕೊಡಲಾಗಿದೆ.

ಸಂಚಿನ ಬಗ್ಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ರೆಕಾರ್ಡ್‍ಅನ್ನು ಎಲ್ಲಿ, ಯಾವಾಗ, ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.  ಜಾಮೀನು ಪಡೆದಿರುವ ಗೋಪಾಲಕೃಷ್ಣ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ಪ್ರಮುಖ ಆರೋಪಿ ಕುಳ್ಳ ದೇವರಾಜ್‍ನನ್ನು ಸಹ ವಿಚಾರಣೆಗೆ ಒಳಪಡಿಸಿ ಸಂಚಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅವುಗಳನ್ನು ಪರಿಶೀಲಿಸುತ್ತಿದ್ದಾರೆ.

ಸಂಭಾಷಣೆಯಲ್ಲಿ ಶಾರ್ಪ್‍ಶೂಟರ್ ಬಗ್ಗೆ ಪ್ರಸ್ತಾಪವಾಗಿದ್ದು, ಆ ಶಾರ್ಪ್‍ಶೂಟರ್‍ಗಳು ಆಂಧ್ರ ಅಥವಾ ಪಾಂಡಿಚೇರಿ ಕಡೆಯವರಾ, ಅವರು ಬೆಂಗಳೂರಿಗೆ ಯಾವಾಗ ಬಂದಿದ್ದರು, ಯಾವ ಹೊಟೇಲ್‍ನಲ್ಲಿ ಉಳಿದುಕೊಂಡಿದ್ದರು, ಅವರಿಗೆ ಯಾರು ಹಣ ನೀಡಿದ್ದಾರೆ ಎಂಬಿತ್ಯಾದಿ ಅಂಶಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Facebook Comments