ಮಿಸ್ತ್ರಿ ಮೀಟಿಂಗ್, ಕಾಂಗ್ರೆಸ್‍ ಶಾಸಕರಲ್ಲಿ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.6- ಕಾಂಗ್ರೆಸ್‍ನಲ್ಲಿನ ವಿವಿಧ ಹುದ್ದೆಗಳ ಪುನಾರಚನೆಗಾಗಿ ಅಭಿಪ್ರಾಯದ ಸಂಗ್ರಹದ ವೇಳೆ ಕೆಲವು ಶಾಸಕರನ್ನು ನಿರ್ಲಕ್ಷಿಸಿರುವ ಆರೋಪ ಕೇಳಿ ಬಂದಿದೆ. ಖಾಸಗಿ ಹೋಟೆಲ್‍ನಲ್ಲಿ ತಂಗಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ಹಿರಿನಾಯಕರು, ಶಾಸಕರು, ವಿಧಾನಪರಿಷತ್ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದರು.

ಇದಕ್ಕಾಗಿ ಆಯ್ದ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿತ್ತು.ಮಧುಸೂದನ್ ಮಿಸ್ತ್ರಿ ಅವರ ಸಭೆಯ ಮಾಹಿತಿ ಪಡೆದ ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ್ ನಾಯಕ್ ಕೂಡ ತಮ್ಮ ಅಭಿಪ್ರಾಯ ತಿಳಿಸಲು ಬಂದಿದ್ದರು. ಆದರೆ, ಆಹ್ವಾನಿತರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ. ನಿಮ್ಮ ಅಭಿಪ್ರಾಯವನ್ನು ಪರಿಗಣಿಸಲು ಆಗುವುದಿಲ್ಲ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಇದರಿಂದ ಸಿಟ್ಟಾದ ಪರಮೇಶ್ವರ್ ನಾಯಕರ್ ಅವರು, ಮಧುಸೂದನ್ ಮಿಸ್ತ್ರಿ ಅವರನ್ನು ಭೇಟಿ ಮಾಡಿ, ಲಂಬಾಣಿ ಸಮಾಜದಿಂದ ಕಾಂಗ್ರೆಸ್‍ನಲ್ಲಿ ಇರುವುದೇ ಇಬ್ಬರು ಶಾಸಕರು, ಭೀಮಾನಾಯಕ್ ಮತ್ತು ನಾನು. ನಮ್ಮ ಅಭಿಪ್ರಾಯವನ್ನೇ ತಿರಸ್ಕರಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದು, ವಿಪಕ್ಷ ನಾಯಕನ ಆಯ್ಕೆ ಸಂದರ್ಭದಲ್ಲಿ ನಮ್ಮ ನಿಲುವುಗಳನ್ನು ಹೇಳಲು ನೂರಾರು ಕಿ.ಮೀ. ಪ್ರಯಾಣ ಮಾಡಿ ಬಂದಿದ್ದೆ. ಆದರೆ, ಇಲ್ಲಿ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ ಎಂಬ ಕಾರಣಕ್ಕಾಗಿ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಇದೇ ರೀತಿ ಬಹಳಷ್ಟು ಮಂದಿ ಶಾಸಕರ ಅಭಿಪ್ರಾಯ ಸಂಗ್ರಹಿಸದೆ ವಾಪಸ್ ಕಳುಹಿಸಿರುವುದಾಗಿ ಮಾಹಿತಿ ಇದೆ. ಇನ್ನೂ ಕೆಲವು ನಾಯಕರ ಬಳಿ ಕೇವಲ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಮಾತ್ರ ಅಭಿಪ್ರಾಯ ಸಂಗ್ರಹಿಸಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಉಪನಾಯಕ ಸ್ಥಾನಗಳಿಗೆ ಅಭಿಪ್ರಾಯ ಹೇಳುವ ಅಗತ್ಯವಿಲ್ಲ ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಮೂರು ತಿಂಗಳ ನಂತರ ಕಸರತ್ತು ಆರಂಭಿಸಿದ ಕಾಂಗ್ರೆಸ್ ಅಭಿಪ್ರಾಯ ಸಂಗ್ರಹದಲ್ಲೂ ಯಡವಟ್ಟು ಮಾಡಿಕೊಂಡಿರುವುದು ಕುತೂಹಲ ಕೆರಳಿಸಿದೆ.

Facebook Comments