ಕಾಂಗ್ರೆಸ್ ನಾಯಕರನ್ನು ಕಂಗೆಡಿಸಿದ ಹೈಕಮಾಂಡ್‍ನ ದಿವ್ಯ ಮೌನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28-ಹೈಕಮಾಂಡ್‍ನ ದಿವ್ಯ ಮೌನ ರಾಜ್ಯ ಕಾಂಗ್ರೆಸ್ಸಿಗರನ್ನು ಕಂಗೆಡಿಸಿದ್ದು, ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ತಾವೇ ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ. ಕಳೆದ ಐದಾರು ವರ್ಷಗಳಿಂದಲೂ ಪರಸ್ಪರ ಒಬ್ಬರ ಕಾಲು ಒಬ್ಬರು ಎಳೆಯುತ್ತಾ, ವ್ಯಕ್ತಿ ಪೂಜೆಗೆ ಆದ್ಯತೆ ನೀಡಿ ಕಾಂಗ್ರೆಸ್ ಪಕ್ಷವನ್ನು ಹಳ್ಳ ಹಿಡಿಸಿದ ಪ್ರಮುಖ ನಾಯಕರಿಗೆ ಸೋನಿಯಾಗಾಂಧಿಯವರ ಮುತ್ಸದ್ಧಿತನದ ನಡವಳಿಕೆ ಚಾಟಿ ಬೀಸಿದಂತಿದೆ.

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಇನ್ನೇನು ಆಗಿಯೇ ಹೋಯಿತು. ತೀರ್ಮಾನ ಸಂಜೆಯೊಳಗೆ ಪ್ರಕಟಗೊಳ್ಳುತ್ತದೆ ಎಂಬೆಲ್ಲ ನಿರೀಕ್ಷೆಗಳನ್ನಿಟ್ಟುಕೊಂಡವರಿಗೆ ಭಾರೀ ನಿರಾಸೆಯಾಗಿದೆ. ಭೇಟಿ ಮಾಡಲು ಸಮಯ ಕೊಡಿ ಎಂದು ಒಂದಷ್ಟು ಮಂದಿ ಪತ್ರದ ಮೇಲೆ ಪತ್ರ ಬರೆದರೂ ಹೈಕಮಾಂಡ್ ಕೇಳಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯ ಅವರು ಖುದ್ದಾಗಿ ಭೇಟಿ ಮಾಡಿ ಬಂದ ನಂತರವೂ ಯಾವ ಬದಲಾವಣೆಗಳೂ ಆಗಿಲ್ಲ.

ಒಂದಷ್ಟು ಮಂದಿ ಹಿರಿಯ ನಾಯಕರು ಸೋನಿಯಾಗಾಂಧಿಯವರನ್ನು ಭೇಟಿ ಮಾಡಲು ಹರಸಾಹಸ ನಡೆಸಿದರು. ಈ ಮೊದಲು ಪೂರ್ವನಿಗದಿತ ಸಮಯವಿಲ್ಲದೆ ನೇರವಾಗಿ ಸೋನಿಯಾಗಾಂಧಿಯವರನ್ನು ಭೇಟಿ ಮಾಡಬಹುದಾದ ನಾಯಕರಿಗೂ ಈ ಬಾರಿ ಅವಕಾಶ ಸಿಕ್ಕಿಲ್ಲ.  ರಾಹುಲ್‍ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದಾಗ ಕರ್ನಾಟಕದಲ್ಲಿ ಕಾಂಗ್ರೆಸ್‍ನ ಗುಂಪುಗಾರಿಕೆ ಮಿತಿ ಮೀರಿತ್ತು.

ಕೆಲವರ ನಾಯಕತ್ವದ ವೈಭವೀಕರಣ ನಡೆದಿತ್ತು. ಪಕ್ಷದ ಸಿದ್ಧಾಂತದ ಹೊರತಾಗಿ ನಡೆದ ಬಹಳಷ್ಟು ಬೆಳವಣಿಗೆಗಳು ಸಂಘಟನೆ ಮೇಲೆ ಕೆಟ್ಟ ಪರಿಣಾಮ ಬೀರಿದವು. ಸೋನಿಯಾಗಾಂಧಿಯವರು ಅಧ್ಯಕ್ಷರಾದ ಬಳಿಕ ಬಹಳಷ್ಟು ರಾಜ್ಯಗಳಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಸರಿಪಡಿಸುತ್ತಾ ಬರುತ್ತಿದ್ದು, ಕರ್ನಾಟಕದ ಗುಂಪುಗಾರಿಕೆಗೂ ದಿವ್ಯನಿರ್ಲಕ್ಷ್ಯದ ಮದ್ದು ನೀಡಿದ್ದಾರೆ.

ಹೈಕಮಾಂಡ್‍ನ ಮೌನ ಮತ್ತು ಉದಾಸೀನ ರಾಜ್ಯ ಕಾಂಗ್ರೆಸ್ ನಾಯಕರನ್ನು ಕಂಗೆಡಿಸಿದೆ. ಹೀಗಾಗಿ ಗುಂಪುಗಾರಿಕೆಯನ್ನು ಪಕ್ಕಕ್ಕಿಟ್ಟು ಒಂದಾಗುವ ಚರ್ಚೆಗಳು ನಡೆದಿವೆ.
ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವಾರು ನಾಯಕರು ತಮ್ಮದೇ ಆದ ಅಜೆಂಡಾ ಇಟ್ಟುಕೊಂಡು ಗುಂಪುಗಾರಿಕೆ ನಡೆಸುತ್ತಿದ್ದರು.

ಇದು ಕಳೆದ 2017ರ ವಿಧಾನಸಭೆ ಚುನಾವಣೆ ಮೇಲೆ ಭಾರೀ ಪರಿಣಾಮ ಬೀರಿತ್ತು. ಕಾಂಗ್ರೆಸ್ ಸೋತು, ಬಿಜೆಪಿ ಗೆಲ್ಲುವಂತಾಗಿತ್ತು. ಉಪಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಸಮ್ಮಿಶ್ರ ಸರ್ಕಾರವೂ ಪತನಗೊಂಡಿತು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಹೈಕಮಾಂಡ್ ಉಪಚುನಾವಣೆ ನಂತರ ಕೆಪಿಸಿಸಿ ಅಧ್ಯಕ್ಷರಾಗಬೇಕೆಂದು ಆತುರ ತೋರಿದವರಿಗೆ ಮತ್ತು ವಿಪಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಹವಣಿಸಿದವರಿಗೆ ಸೋನಿಯಾಗಾಂಧಿ ಬ್ರೇಕ್ ಹಾಕಿದ್ದಾರೆ.

ಸರಿಸುಮಾರು ಒಂದೂವರೆ ತಿಂಗಳಿನಿಂದ ಕಾಂಗ್ರೆಸ್‍ನಲ್ಲಿ ನಾಯಕತ್ವವೇ ಇಲ್ಲವಾಗಿದೆ. ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯ ಅವರು ಹೈಕಮಾಂಡ್ ತಮ್ಮ ರಾಜೀನಾಮೆ ಒಪ್ಪಿಲ್ಲ, ಹಾಗಾಗಿ ಸದ್ಯಕ್ಕೆ ನಾನೇ ವಿರೋಧ ಪಕ್ಷದ ನಾಯಕನಾಗಿ ಮುಂದುವರೆಯುತ್ತಿದ್ದೇನೆ ಎಂದು ಸ್ವಘೋಷಣೆ ಮಾಡಿಕೊಂಡು ಕೆಲಸ ಮುಂದುವರೆಸಿದ್ದಾರೆ.
ದಿನೇಶ್‍ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಬಹಳಷ್ಟು ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರಿಂದ ರಾಜೀನಾಮೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತ ಎಂಬ ಸುದ್ದಿಗಳಿದ್ದರೂ ಅಧಿಕೃತ ಪ್ರಕಟಣೆಗೆ ಕಾಲಹರಣವಾಗುತ್ತಿದೆ. ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯನವರನ್ನೇ ಮುಂದುವರೆಸಬೇಕೆಂಬ ನಿರೀಕ್ಷೆಗಳಿದ್ದರೂ ಈ ಬಗ್ಗೆಯೂ ಯಾವುದೇ ಪ್ರಕಟಣೆ ಎಐಸಿಸಿಯಿಂದ ಬಂದಿಲ್ಲ. ಹೀಗಾಗಿ ಸಣ್ಣ ಪ್ರಮಾಣದ ತಲ್ಲಣಕ್ಕೆ ಒಳಗಾಗಿರುವ ಕಾಂಗ್ರೆಸ್ ನಾಯಕರು, ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಗುಂಪುಗಾರಿಕೆ ಪಕ್ಕಕ್ಕಿಟ್ಟು ಒಟ್ಟಾಗಿ ಚರ್ಚೆ ಮಾಡುವ ಸಲಹೆ ಮುಂದಿಟ್ಟಿದ್ದಾರೆ.

ಇದಕ್ಕೆ ಸಿದ್ದರಾಮಯ್ಯ ಕೂಡ ಸಮ್ಮತಿಸಿದ್ದಾರೆ. ಖರ್ಗೆ ಸೇರಿದಂತೆ ಕಾಂಗ್ರೆಸ್‍ನ ಎಲ್ಲಾ ಹಿರಿಯ ನಾಯಕರ ಜೊತೆ ತಾವು ಮಾತುಕತೆಗೆ ಸಿದ್ಧ. ಅನಂತರ ಬೇಕಾದರೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡೋಣ ಎಂಬ ಒಮ್ಮತಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ ಎನ್ನಲಾಗಿದೆ.

Facebook Comments