ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಸೈಕಲ್ ಸವಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.29:- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸುತ್ತಿದ್ದು, ಇದರಿಂದ ಸಾರ್ವಜನಿಕರ ಕಿಸೆಗೆ ಹೊರೆ ಬಿದ್ದಂತಾಗಿದೆ ಎಂದು ಆರೋಪಿಸಿ ಇಂದು ರಾಜ್ಯ ಕಾಂಗ್ರೆಸ್ ನಾಯಕರು ಸೈಕಲ್ ಸವಾರಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿ ಕಡೆಗೆ ಸೈಕಲ್ ಸವಾರಿ ನಡೆಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಜಮೀರ್ ಅಹಮ್ಮದ್, ಚೆಲುವರಾಯಸ್ವಾಮಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಹಕರಿಸಿದರು.

ನಂತರ ಮಾತನಾಡಿದ ಸಿದ್ದರಾಮಯ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‍ಗೆ 130 ರೂ. ಇದ್ದರೂ, ಭಾರತದಲ್ಲಿ ದರ ಏರಿಕೆ ಮಾಡಿದ್ದಾರೆ. ನನ್ನ ಪ್ರಕಾರ ಪ್ರತಿ ಲೀಟರ್‍ಗೆ 25 ರೂ. ಮಾಡಬೇಕಾಗಿತ್ತು. ಮನಮೋಹನ್ ಸಿಂಗ್ ಸರ್ಕಾರ ಸಬ್ಸಿಡಿ ಕೊಟ್ಟಿತ್ತು.

ಆದರೆ ಈಗ ಈ ಸರ್ಕಾರ ಯಾವುದನ್ನೂ ಕೊಟ್ಟಿಲ್ಲ. ಸಾಮಾನ್ಯ ಜನರ ಮೇಲೆ ದುಬಾರಿ ಬೆಲೆ ಹಾಕುತ್ತಿದೆ. ರೈತರಿಗೆ ಹಾಗೂ ಇಂಡಸ್ಟ್ರೀಸ್‍ಗೆ ದುಬಾರಿಯಾಗಿದೆ ಎಂದು ಕಿಡಿಕಾರಿದರು.

ದೇಶಾದ್ಯಂತ ಕೊರೋನಾ ಇದ್ದರೂ ಕಳೆದ 10 ದಿನಗಳಿಂದ 11 ರೂ ಹೆಚ್ಚಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ಬಡವರ ಮೇಲೆ ಬರೆ ಹಾಕಿದ್ದಾರೆ. ಕೇಂದ್ರ ಸರ್ಕಾರದ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲ ಆಗಿರುವುದರ ಬಗ್ಗೆಯೂ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

Facebook Comments