ಡಿಕೆಶಿ ನಾಯಕತ್ವ ಬಲಪಡಿಸಲು ಕಾಂಗ್ರೆಸ್ ಹಿರಿಯ ನಾಯಕರು ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23- ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಅವರ ಅಧಿಕಾರ ಕೇಂದ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರು ನಿನ್ನೆ ಮಹತ್ವದ ಸಭೆ ನಡೆಸಿದ್ದಾರೆ. ಬಣ ರಾಜಕೀಯದಿಂದ ಪಕ್ಷವನ್ನು ವಿಮುಕ್ತಿ ಗೊಳಿಸಿ ಪಕ್ಷವನ್ನು ಸದೃಢಗೊಳಿಸಿ ಡಿಕೆಶಿ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಿನ್ನೆ ತಡರಾತ್ರಿ ವರೆಗೂ ಹಲವು ಕಾಂಗ್ರೆಸ್ ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆ.

ಬಿ.ಎಲ್.ಶಂಕರ್, ಡಿ.ಕೆ.ಸುರೇಶ್, ಕೃಷ್ಣ ಭೈರೇಗೌಡ ಸೇರಿದಂತೆ ಹಲವು ಮುಖಂಡರು ಸಭೆ ನಡೆಸಿ ಮುಂಬರುವ ಸ್ಥಳೀಯ ಚುನಾವಣೆ ಗಳಲ್ಲಿ ಪಕ್ಷ ಸಂಘಟನೆ ಅಷ್ಟೇ ಅಲ್ಲದೆ ಎಲ್ಲಾ ಸಮುದಾಯಗಳ ಮತ ಸೆಳೆಯುವುದಕ್ಕೆ ಕಾರ್ಯ ತಂತ್ರ ರೂಪಿಸಿ ದಸರಾ ನಂತರ ಕಾರ್ಯಾನುಷ್ಠಾನ ಮಾಡುವ ಸಮಾಲೋಚನೆ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿಕೆಶಿ ಬಣ ಎಂಬ ಬಣಗಳು ರೂಪುಗೊಂಡು ಪಕ್ಷ ಸಂಘಟನೆ ಯಲ್ಲಿ ಹಿನ್ನಡೆಯಾಗುತ್ತಿದೆ. ಇತ್ತೀಚೆಗೆ ಸಿದ್ದು ಬಣ ಮೇಲುಗೈ ಆಗುತ್ತಿರುವುದನ್ನು ಮನಗಂಡ ಡಿಕೆಶಿ ಬಣದ ನಾಯಕರು ಸಭೆ ಸೇರಿ ಡಿಕೆಶಿ ನಾಯಕತ್ವ ಬಲಪಡಿಸುವ ನಿಟ್ಟಿನಲ್ಲಿ ಹಲವು ಕಾರ್ಯ ತಂತ್ರಗಳನ್ನು ರೂಪಿಸಿದ್ದು ದಸರಾ ಬಳಿಕ ಈ ಕಾರ್ಯಕ್ರಮಗಳನ್ನು ಮುನ್ನಲೆಗೆ ತರುವ ಮೂಲಕ ಅವರ ಅಧಿಕಾರ ಕೇಂದ್ರ ವನ್ನು ಗಟ್ಟಿಗೊಳಿಸುವ ತಂತ್ರ ಹೆಣೆದಿದ್ದಾರೆ.

ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಈಗಾಗಲೇ ಜೆಡಿಎಸ್ ನ ಹಲವು ಶಾಸಕರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಡಿಕೆಶಿ ನಾಯಕತ್ವ ದಲ್ಲಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಡಿಕೆ ಶಿವಕುಮಾರ್ ತಳಹಂತದಿಂದ ಪಕ್ಷವನ್ನು ಗಟ್ಟಿಗೊಳಿಸುತ್ತಿದ್ದಾರೆ. ಈ ಹಂತದಲ್ಲಿ ಅವರ ನಾಯಕತ್ವ ವನ್ನು ಬಲಪಡಿಸುವುದು ಸೂಕ್ತ ಎಂದು ಮನಗಂಡ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ.

ದಲಿತರು, ಹಿಂದುಳಿದವರು, ವಕ್ಕಲಿಗರು, ಲಿಂಗಗಾಯತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗಗಳ ಮತಗಳನ್ನು ಸೆಳೆಯುವ ಸಲುವಾಗಿ ಆ ನಾಯಕರುಗಳು ಡಿಕೆಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಬಣಗಳಿಗೆ ಅವಕಾಶ ನೀಡದಂತೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.

Facebook Comments

Sri Raghav

Admin