ಸಿಎಂ ಬಿಎಸ್‍ವೈ ಬೆಂಬಲಕ್ಕೆ ನಿಂತ ಲಿಂಗಾಯತ ಸಮುದಾಯದ ನಾಯಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.20- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ಕಾಂಗ್ರೆಸ್‍ನಲ್ಲಿರುವ ಲಿಂಗಾಯತ ಸಮುದಾಯದ ನಾಯಕರು ಬೆಂಬಲ ವ್ಯಕ್ತಪಡಿಸುವ ಮೂಲಕ ಬಿಜೆಪಿಗೆ ಇರಿಸು-ಮುರಿಸು ಉಂಟುಮಾಡುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಲಿಂಗಾಯತ ಸಮುದಾಯ ಸುಮಾರು ಎರಡು ದಶಕಗಳಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದೆ. ಅದಕ್ಕೆ ಮೂಲ ಕಾರಣ ಯಡಿಯೂರಪ್ಪ ಅವರ ನಾಯಕತ್ವ. ಬಿಜೆಪಿಯಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ಆರಂಭವಾಗಿವೆ.

ಕಾಂಗ್ರೆಸ್‍ನಲ್ಲಿನ ನಾಯಕರು ಎಷ್ಟೇ ಸರ್ಕಸ್ ಮಾಡಿದರೂ ಲಿಂಗಾಯತ ಸಮುದಾಯವನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ. ಕೆಲವು ಲಿಂಗಾಯತ ಸಮುದಾಯದವರು ಶಾಸಕರಾಗಿ ಆಯ್ಕೆಯಾಗುತ್ತಿದ್ದಾರಾದರೂ ಅದು ವೈಯಕ್ತಿಕ ಸಾಮಥ್ರ್ಯ. ನಿರ್ಣಾಯಕ ಪಾತ್ರ ವಹಿಸುವ ಸಮುದಾಯಗಳ ಪೈಕಿ ಒಕ್ಕಲಿಗ ಮತ್ತು ಲಿಂಗಾಯತ ರಾಜ್ಯದಲ್ಲಿ ಪ್ರಬಲ ಜಾತಿಗಳಾಗಿವೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಕ್ಕಲಿಗ ಸಮುದಾಯದ ಮತಗಳು ಹಂಚಿಕೆಯಾದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಲಿಂಗಾಯತ ಸಮುದಾಯದ ಮತಗಳಿಗಾಗಿ ಹಣಾಹಣಿ ನಡೆಸುತ್ತಿವೆ.

ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಎಷ್ಟೇ ವಿರೋಧ ಮಾಡಿದರೂ ವಿರೋಧ ಪಕ್ಷದಲ್ಲಿರುವ ಲಿಂಗಾಯತ ನಾಯಕರು ಅಂತಿಮವಾಗಿ ಸಮುದಾಯದ ನಾಯಕತ್ವವನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಧರ್ಮದ ಸಾಂವಿಧಾನಿಕ ಹಕ್ಕಿನ ವಿವಾದ ಚರ್ಚೆಗೆ ಬಂದಿತ್ತು.

ಇದರಿಂದ ಕಾಂಗ್ರೆಸ್‍ಗೆ ಲಾಭವಾಗುವ ನಿರೀಕ್ಷೆಗಳಿದ್ದವಾದರೂ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕಾಂಗ್ರೆಸ್ ಹಿನ್ನಡೆ ಅನುಭವಿಸುವಂತಾಯಿತು. ಆನಂತರ ಧರ್ಮದ ವಿಚಾರಕ್ಕೆ ಕೈ ಹಾಕಿದ್ದಕ್ಕಾಗಿ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೂಡ ಯಾಚಿಸಿದ್ದರು. ಈಗ ಕಾಂಗ್ರೆಸ್‍ನ ಪ್ರಭಾವಿ ನಾಯಕರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್ ಸೇರಿದಂತೆ ಅನೇಕ ನಾಯಕರು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರಂತೂ ಪ್ರತಿಬಾರಿ ಯಡಿಯೂರಪ್ಪ ಅವರನ್ನು ಅಧಿವೇಶನದಲ್ಲಿ ಹೊಗಳದೆ ಇದ್ದರೆ ಸಮಾಧಾನವೇ ಆಗುವುದಿಲ್ಲ. ಆ ಮಟ್ಟಿಗೆ ಕಾಂಗ್ರೆಸಿಗರು ಯಡಿಯೂರಪ್ಪ ಅವರನ್ನು ಆಂತರಿಕವಾಗಿ ಬೆಂಬಲಿಸುತ್ತಾರೆ. ಈಗ ಬಹಿರಂಗವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿಗೆ ಮುಜುಗರ ಉಂಟುಮಾಡುವ ಪ್ರಯತ್ನ ನಡೆಸಿದ್ದಾರೆ.

ಒಂದು ವೇಳೆ ನಾಯಕತ್ವ ಬದಲಾವಣೆಯಾಗಿದ್ದೇ ಆದರೆ ಅದರ ಬೆನ್ನಲ್ಲೇ ಬಿಜೆಪಿಯಲ್ಲಿ ಒಂದಷ್ಟು ಅಸಮಾಧಾನ ಹೊಗೆಯಾಡುವುದಂತೂ ಖಚಿತ. ಲಿಂಗಾಯತ ಸಮುದಾಯ ನಿಶ್ಚಿತವಾಗಿ ಬಿಜೆಪಿ ವಿರುದ್ಧ ಸಿಟ್ಟಾಗಲಿದೆ. ಈ ಸಂದರ್ಭದ ಲಾಭ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದ್ದು, ಯಡಿಯೂರಪ್ಪ ಅವರನ್ನು ಬೆಂಬಲಿಸಿ ಮಾತನಾಡಲಾರಂಭಿಸಿದೆ.
ಯಡಿಯೂರಪ್ಪ ಅವರ ಮೇಲಿನ ಅನುಕಂಪಕ್ಕೆ ತಮ್ಮ ದನಿಗೂಡಿಸಿ ಒಂದಷ್ಟು ರಾಜಕೀಯ ಲಾಭ ಮಾಡಿಕೊಳ್ಳುವ ತಯಾರಿಗಳು ಕಾಂಗ್ರೆಸ್‍ನ ಒಳ ವಲಯದಲ್ಲಿ ನಡೆದಿವೆ.

Facebook Comments