ಕೊರೋನಾ ವಾರಿಯರ್ಸ್‌ಗೆ ದುಪ್ಪಟ್ಟು ವೇತನ ನೀಡುವಂತೆ ಸಿಎಂಗೆ ಕಾಂಗ್ರೆಸ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.19- ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಮುಂದಾಳುಗಳಿಗೆ ದುಪ್ಪಟ್ಟು ವೇತನ ನೀಡಬೇಕು. ರೈತ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಬೇಕು, ಆರ್‍ ಬಿ ಐ ಘೋಷಿಸಿದ ಆರ್ಥಿಕ ನೆರವನ್ನು ತಕ್ಷಣ ಜನರಿಗೆ ತಲುಪಿಸಬೇಕು, ಕುಲಶಕರ್ಮಿಗಳಿಗೆ ತಲಾ 10 ಸಾವಿರ ರೂ. ನೆರವು ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ಹಲವು ಸಲಹೆಗಳನ್ನು ನೀಡಿದರು.
ವಿಶ್ವದ ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೋನಾ (ಕೋವಿಡ್-19) ರೋಗವನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡ ಚಪ್ಪಾಳೆ ತಟ್ಟುವಿಕೆ, ದೀಪ ಬೆಳಗುವಿಕೆ ಹಾಗೂ ಲಾಕ್‍ಡೌನ್ ಮುಂತಾದ ಎಲ್ಲ ನಿರ್ಣಯಗಳಿಗೆ ನಾವುಗಳು ಸಹಮತವನ್ನು ತೋರುತ್ತಾ ಬಂದಿದ್ದೇವೆ.

ಆದರೆ ರೋಗ ಹರಡುವಿಕೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಏರುಮುಖವಾಗಿದೆಯೇ ಹೊರತು ನಿಯಂತ್ರಣಕ್ಕೆ ಬಂದಿರುವ ಸೂಚನೆಗಳು ಕಾಣುತ್ತಿಲ್ಲ. ಅದಕ್ಕೆ ಕಾರಣಗಳನ್ನು ಸರ್ಕಾರವೇ ತಿಳಿಸಬೇಕಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ ಕೊರೋನಾ ರೋಗ ನಿಯಂತ್ರಣಕ್ಕೆ ಪ್ರಾಥಮಿಕವಾಗಿ 10 ಲಕ್ಷ ಜನಸಂಖ್ಯೆಗೆ 10 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿರುತ್ತದೆ.

ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಪ್ರತಿ 10 ಲಕ್ಷಕ್ಕೆ ಕೇವಲ 152 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದರೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಾ ಬಂದಿದೆ. ಒಂದು ಕಡೆ ಕೊರೋನಾ ರೋಗ ಪರೀಕ್ಷೆಗೆ ರ್ಯಾಪಿಡ್ ಟೆಸ್ಟ್ ಕಿಟ್‍ಗಳು ಹಾಗೂ ಪಿ.ಸಿ.ಆರ್. ಮೆಷಿನ್‍ಗಳ ಕೊರತೆಯಾದರೆ, ಮತ್ತೊಂದು ಕಡೆ ವೈದ್ಯರ, ದಾದಿಯರ ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳಿಗೆ ಅವಶ್ಯವಾಗಿರುವ ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್, ಪಿ.ಪಿ.ಇ. ಕಿಟ್ ಮುಂತಾದವುಗಳ ಕೊರತೆಯಾಗಿದೆ.

ಒಟ್ಟು 12 ಲಕ್ಷ ಕಿಟ್‍ಗಳ ಅಗತ್ಯವಿದ್ದರೆ ಈಗ 2,27,000 ಕಿಟ್‍ಗಳು ಮಾತ್ರ ಲಭ್ಯವಿವೆ. ಎನ್-95 ಮಾಸ್ಕ್‍ಗಳು ಕೇವಲ 5,46,721 ಮಾತ್ರ ಲಭ್ಯವಿವೆ ಮತ್ತು ಹೈಡ್ರಾಕ್ಸಿ ಕ್ಲೋರಾಕ್ಸಿನ್ ಮಾತ್ರೆಗಳು ಕೇವಲ 2,79,999 ರಷ್ಟು ಲಭ್ಯವಿವೆ. ಇತ್ತೀಚಿನವರೆಗೂ ಕೇವಲ ರಾಜೀವ್‍ಗಾಂಧಿ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ರಂಗದೊರೈ ಆಸ್ಪತ್ರೆ ಮತ್ತು ಆನಂದ್ ಲ್ಯಾಬ್‍ಗಳಲ್ಲಿ ಮಾತ್ರ ಕೊರೋನಾ ರೋಗದ ಪರೀಕ್ಷೆ ಮಾಡಲಾಗುತ್ತಿತ್ತು.

ಈಗ ರಾಜ್ಯದಲ್ಲಿರುವ 18 ಲ್ಯಾಬ್‍ಗಳಲ್ಲಿ ಕೊರೋನಾ ರೋಗದ ಪರೀಕ್ಷೆ ನಡೆಯುತ್ತಿದೆ ಎಂದು ಸರ್ಕಾರ ಹೇಳಿದೆ. ಇವುಗಳ ಪೈಕಿ 9 ಲ್ಯಾಬ್‍ಗಳು ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿವೆ ಹಾಗೂ 12,500 ರ್ಯಾಪಿಡ್ ಟೆಸ್ಟ್ ಕಿಟ್‍ಗಳು ಬರಲಿವೆ ಎಂದು ಸರ್ಕಾರ ತಿಳಿಸಿದೆ. ಇಲ್ಲಿಯವರೆಗೂ ನಮ್ಮ ರಾಜ್ಯಕ್ಕೆ ಕೊರೋನಾ ರೋಗ ಪತ್ತೆಗೆ ಬೇಕಾಗಿರುವ ರ್ಯಾಪಿಡ್ ಟೆಸ್ಟ್ ಕಿಟ್‍ಗಳು ಲಭ್ಯವಾಗಿರುದಿಲ್ಲ. ಲ್ಯಾಬ್‍ಗಳ ಮೂಲಕ ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ 17,594 ಜನರಿಗೆ ಕೊರೋನಾ ರೋಗ ಪರೀಕ್ಷೆ ಮಾಡಲಾಗಿದೆ.

ಈ ವೈದ್ಯಕೀಯ ಸೌಲಭ್ಯಗಳು ಕೊರೋನಾ ರೋಗ ತಡೆಗೆ ಏನೇನೂ ಸಾಲದು. ಇದರಿಂದ ಕೊರೋನಾ ರೋಗ ಹರಡುವುದನ್ನು ತಡೆಯಲು ಸಾಧ್ಯವಾಗಿಲ್ಲವೆಂದು ಅನೇಕ ವೈದ್ಯರು, ತಜ್ಞರ ಅಭಿಪ್ರಾಯವಾಗಿರುತ್ತದೆ ಎಂದಿದ್ದಾರೆ. ಲಾಕ್‍ಡೌನ್ ಆಗಿ 25 ದಿನಗಳು ಕಳೆದಿದ್ದರೂ ಜನಸಾಮಾನ್ಯರ ಬದುಕಿಗೆ ಅವಶ್ಯಕವಾಗಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯಾಡಳಿತ ಸಂಪೂರ್ಣ ವಿಫಲವಾಗಿದೆ. ಆ ಕಾರಣ ಜನರ ಬದುಕು ಅತ್ಯಂತ ದುಸ್ತರವಾಗಿದೆ.

ರಾಜ್ಯದ 6 ಕೋಟಿ 60 ಲಕ್ಷ ಜನಸಂಖ್ಯೆಯಲ್ಲಿ ಸರ್ಕಾರ ಒದಗಿಸಿರುವ ಮಾಹಿತಿಯ ಪ್ರಕಾರ ಸಂಘಟಿತ ಕಾರ್ಮಿಕರ ಸಂಖ್ಯೆ 21 ಲಕ್ಷಗಳಿದ್ದು, ಅಸಂಘಟಿತ ಕಾರ್ಮಿಕರ ಸಂಖ್ಯೆ ಸುಮಾರು 1 ಕೋಟಿ 32 ಲಕ್ಷ ಇರುತ್ತದೆ. ಇದಲ್ಲದೇ ಕೋಟ್ಯಾಂತರ ಕೃಷಿ ಕಾರ್ಮಿಕರು ರಾಜ್ಯದ ಉದ್ದಗಲಕ್ಕೂ ನೆಲೆಸಿದ್ದಾರೆ ಇವರಷ್ಟೇ ಅಲ್ಲದೇ ಕುಶಲಕರ್ಮಿಗಳಿಗೆ ದುಡಿಮೆಯಿಲ್ಲದೇ ಅವರ ಕುಟುಂಬಗಳು ತೀವ್ರ ರೀತಿಯ ಸಂಕಷ್ಟಕ್ಕೆ ಗುರಿಯಾಗಿವೆ ಎಂದು ವಿವರಿಸಿದ್ದಾರೆ.

ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದಿರುವ ಕಾರ್ಮಿಕರು ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಅವರವರ ಊರುಗಳಿಗೆ ಹೋಗಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿದ್ದು, ಅನೇಕರು ಕಾಲ್ನಡಿಗೆಯಲ್ಲೇ ಊರುಗಳಿಗೆ ಪ್ರಯಾಣ ಮಾಡಿದ್ದಾರೆ. ಇದರಲ್ಲಿ ಕೆಲವರು ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಸಾವನ್ನಪ್ಪಿರುತ್ತಾರೆ ಎಂದು ವಿಷಾಧಿಸಿದ್ದಾರೆ.

ಸರ್ಕಾರದ ಮಾಹಿತಿಯ ಪ್ರಕಾರವೇ ಈ ವರ್ಷದ ಬೇಸಿಗೆ ಋತುವಿನಲ್ಲಿ ರಾಜ್ಯದ ಉದ್ದಗಲಕ್ಕೂ ಸುಮಾರು 64,340 ಹೆಕ್ಟೇರ್ ಪ್ರದೇಶದಲ್ಲಿ 17 ಲಕ್ಷದ 38 ಸಾವಿರ ಕ್ವಿಂಟಾಲ್ ಇಳುವರಿಯ ತರಕಾರಿ ಬೆಳೆಗಳು ಮತ್ತು 1,91,895 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳ ಇಳುವರಿ ಅಂದಾಜು 32,55,969 ಟನ್‍ಗಳನ್ನು ನಮ್ಮ ರೈತರು ಬೆಳೆದಿದ್ದಾರೆ.

ವಿವಿಧ ರೀತಿಯ ಹೂಗಳನ್ನು ಸುಮಾರು 11,027 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುತ್ತಾರೆ. ಹಾಗೂ ಸುಮಾರು 1,08,168 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆದಿರುತ್ತಾರೆ. ಅದೇ ರೀತಿ ಭತ್ತ, ರಾಗಿ, ಮುಸುಕಿನ ಜೋಳ, ಕಬ್ಬು, ನೆಲಗಡಲೆ, ಸೂರ್ಯಕಾಂತಿ, ಮುಂತಾದ ಬೆಳೆಗಳನ್ನು ರೈತರು ಬೇಸಿಗೆಯಲ್ಲೂ ಬೆಳೆದಿರುತ್ತಾರೆ. ರೈತರು ಬೆಳೆದಿರುವ ಹೂವು, ತರಕಾರಿ, ಹಣ್ಣು ಹಾಗೂ ಇನ್ನಿತರ ಬೆಳೆಗಳನ್ನು ಕಟಾವು ಮಾಡಿ, ಮಾರಾಟ ಮಾಡಲು ಲಾಕ್‍ಡೌನ್ ಅವಧಿಯಲ್ಲಿ ಸಾಧ್ಯವಾಗದೆ ರೈತರ ಹಾಗೂ ರೈತ ಕಾರ್ಮಿಕರ ಬದುಕು ದುಸ್ತರವಾಗಿದೆ ಎಂದು ವಿಷಾದಿಸಿದ್ದಾರೆ.

ರಾಜ್ಯ ಸರ್ಕಾರ ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ ಯುದ್ಧೋಪಾದಿಯಲ್ಲಿ ರಾಜ್ಯದ ಜನರನ್ನು ಕೊರೋನಾ ರೋಗದಿಂದ ದೂರ ಮಾಡಲು ಮತ್ತು ಜನರು ನೆಮ್ಮದಿಯಿಂದ ಜೀವನ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೊನಾ ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಜನರ ಸಂಕಷ್ಟಕ್ಕೆ ಆರ್ಥಿಕ ಹಾಗೂ ಇನ್ನಿತರ ಸಹಾಯ ನೀಡಲು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಬೇಕು.

ಕೊರೊನಾ ರೋಗದ ಪರೀಕ್ಷೆಯನ್ನು ಯುದ್ಧದೋಪಾದಿಯಲ್ಲಿ ನಡೆಸಲು ಪ್ರತಿ ಜಿಲ್ಲೆಯಲ್ಲಿ ಕೂಡಲೇ ಸುಸಜ್ಜಿತವಾದ ಲ್ಯಾಬ್ ಅನ್ನು ತೆರೆಯಲು ಕ್ರಮ ಜರುಗಿಸುವುದು ಜೊತೆಗೆ ಉತ್ತಮ ಗುಣಮಟ್ಟದ ರ್ಯಾಪಿಡ್ ಟೆಸ್ಟ್ ಕಿಟ್‍ಗಳು, ಪಿ.ಪಿ.ಇ. ಕಿಟ್‍ಗಳು, ಗ್ಲೌಸ್‍ಗಳು, ಸ್ಯಾನಿಟೈಜರ್ಸ್, ಔಷಧಿಗಳು ಹಾಗೂ ಸಾಕಷ್ಟು ಪ್ರಮಾಣದ ವೈದ್ಯರು, ದಾದಿಯರು ಹಾಗೂ ಇನ್ನಿತರ ಸಿಬ್ಬಂದಿಯನ್ನು ಒದಗಿಸಬೇಕು. ಪ್ರಾಣವನ್ನೇ ಪಣವಾಗಿಟ್ಟು ಕೊರೋನಾ ರೋಗದ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಮುಂತಾದ ಸಿಬ್ಬಂದಿಗೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಸಂಬಳವನ್ನು ನೀಡಿರುವುದಿಲ್ಲವೆಂದು ತಿಳಿದುಬಂದಿದೆ.

ಕೂಡಲೇ ಸರ್ಕಾರ ಅವರುಗಳ ಸಂಬಳವನ್ನು ಪಾವತಿಸುವುದು ಮತ್ತು ಅವರುಗಳಿಗೆ ವಿಶೇಷ ಭತ್ಯೆಯನ್ನು (ಕನಿಷ್ಠ ಸಂಬಳದ ಎರಡು ಪಟ್ಟು) ನೀಡಬೇಕು ಎಂದು ಒತ್ತಾಯಿಸಲಾಗಿದೆ. ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳನ್ನು ತೆರೆದು ರೋಗಿಗಳಿಗೆ ಕಡ್ಡಾಯವಾಗಿ ಚಿಕಿತ್ಸೆ ನೀಡಲು ಸರ್ಕಾರ ಕ್ರಮ ಜರುಗಿಸುವುದು. ಖಾಸಿಯವರಿಗೂ ಕೊರೊನಾ ನಿರೋಧಕ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು.

ಕೊರೊನಾ ರೋಗ ಹರಡಿರುವ ರೆಡ್ ಜೋನ್ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಸೀಲ್‍ಡೌನ್ ಮಾಡಬೇಕು, ಎಲ್ಲಾ ಪ್ರದೇಶಗಳಲ್ಲಿ ಜನರು ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸುವುದು ಎಂದು ಒತ್ತಾಯಿಸಿದ್ದಾರೆ.

ಲಾಕ್‍ಡೌನ್ ಅವಧಿಯಲ್ಲಿ ಎಲ್ಲಾ ಕಾರ್ಮಿಕರು, ಕುಶಲಕರ್ಮಿಗಳಾದ ಸವಿತಾ ಸಮಾಜದವರು, ಮಡಿವಾಳರು, ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್‍ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರುಗಳಿಗೆ ಹಾಗೂ ಇನ್ನಿತರ ಬಡವರಿಗೆ ತಲಾವಾರು ಪ್ರತಿ ತಿಂಗಳು ಕನಿಷ್ಠ 10 ಕೆ.ಜಿ. ಅಕ್ಕಿ, ಹಾಲು, 2 ಲೀಟರ್ ಅಡುಗೆ ಎಣ್ಣೆ, ತರಕಾರಿ ಮುಂತಾದ ಪದಾರ್ಥಗಳನ್ನು ಪ್ರತಿ ತಿಂಗಳ ಮೊದಲ ವಾರ ಒದಗಿಸಲು ಕ್ರಮ ಕೈಗೊಳ್ಳುವುದು.

ಹಾಗೆಯೇ ಆಹಾರವಿಲ್ಲದೇ ಪ್ರತಿನಿತ್ಯವೂ ಹಸಿವಿನಿಂದ ನರಳುತ್ತಿರುವ ಎಲ್ಲಾ ವರ್ಗದ ಜನರಿಗೆ ಇಂದಿರಾ ಕ್ಯಾಂಟಿನ್ ಅನ್ನು ಸಮರ್ಥವಾಗಿ ಬಳಸಿಕೊಂಡು ಉಚಿತವಾಗಿ ಪ್ರತಿನಿತ್ಯ ಆಹಾರ ಪೂರೈಸಲು ಅಗತ್ಯ ಕ್ರಮ ವಹಿಸುವುದು. ಯಾವ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಊರುಗಳಲ್ಲಿ ಜೀವನೋಪಾಯಕ್ಕೆ ದಾರಿಯಿಲ್ಲದೇ ಕಷ್ಟವನ್ನು ಅನುಭವಿಸುತ್ತಿದ್ದಾರೋ ಹಾಗೆಯೇ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದಿರುವ ಕಾರ್ಮಿಕರು ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಅವರವರ ಊರುಗಳಿಗೆ ಹೋಗಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿರುವವರ ಕೊರೋನಾ ರೋಗದ ವೈದ್ಯಕೀಯ ತಪಾಸಣೆ ಮಾಡಿ, ಅವರವರ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು.

ರಾಜ್ಯವ್ಯಾಪಿ ರೈತರು ಬೆಳೆದಿರುವ ಹೂವು, ಹಣ್ಣು, ತರಕಾರಿ ಹಾಗೂ ಬೆಳೆಗಳ ಕಟಾವಿಗೆ ಅವಕಾಶ ಕಲ್ಪಿಸುವುದು ಮತ್ತು ಮಾರಾಟ ಮಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಮತ್ತು ಮಾರುಕಟ್ಟೆ ಒದಗಿಸುವುದು. ರೈತರು ಬೆಳೆದಿರುವ ಸದರಿ ಪದಾರ್ಥಗಳನ್ನು ವ್ಯಾಪಾರಸ್ಥರು ತೆಗೆದುಕೊಳ್ಳದೇ ಇದ್ದ ಸಂದರ್ಭದಲ್ಲಿ ಸರ್ಕಾರವೇ ರೈತರ ಹೊಲದಿಂದ ನೇರವಾಗಿ ಬೆಳೆದ ಪದಾರ್ಥಗಳನ್ನು ಖರೀದಿಸಿ, ರೈತರಿಗೆ ಸಹಾಯ ಮಾಡುವುದು. ಹಾಗೆಯೇ ರೈತರು ಬಯಸಿದ ಕಡೆಗಳಲ್ಲಿ ತಾವು ಬೆಳೆದ ಬೆಳೆಗಳನ್ನು ದಾಸ್ತಾನು ಮಾಡಲು ಶೈತ್ಯಾಗಾರಗಳನ್ನು ಮತ್ತು ಗೋಡೌನ್‍ಗಳನ್ನು ಉಚಿತವಾಗಿ ಒದಗಿಸುವುದು.

ಲಾಕ್‍ಡೌನ್ ಅವಧಿಯಲ್ಲಿ ಕೊಯಿಲಿಗೆ ಬಂದ ಹಣ್ಣು, ಹೂವು, ತರಕಾರಿ ಹಾಗೂ ಇನ್ನಿತರ ಬೆಳೆಗಳನ್ನು ಸಾಗಾಣಿಕೆ ಮಾಡಲು ಹಾಗೂ ಮಾರಾಟ ಮಾಡಲು ಅವಕಾಶವಾಗದೇ ನಷ್ಟ ಅನುಭವಿಸಿರುವ ರೈತರಿಗೆ ಹಾಗೂ ಕೋಳಿ ಸಾಕಾಣಿಕೆ ಮಾಡಿ ಮಾರಾಟವಾಗದೇ ನಷ್ಟ ಅನುಭವಿಸಿರುವ ರೈತರಿಗೂ ಸೂಕ್ತ ನಷ್ಟ ಪರಿಹಾರವನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ನೀಡುವುದು.

ಕೊರೊನಾ ಸೋಂಕಿಗೂ ನಿರ್ಧಿಷ್ಠ ಧರ್ಮ ಕಾರಣ ಎಂದು ಬಿಜೆಪಿ ಜನಪ್ರತಿನಿಧಿಗಳು ಹೇಳಿಕೆ ನೀಡುತ್ತಿದ್ದಾರೆ. ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಸರ್ಕಾರ ವರ್ಗಾವಣೆ ಮತ್ತು ಕಡ್ಡಾಯ ರಜೆ ಎಂಬ ಶಿಕ್ಷೆ ವಿಧಿಸಿದೆ ಎಂದು ಅಸಮದಾನ ವ್ಯಕ್ತ ಪಡಿಸಲಾಗಿದೆ.

ನರೇಗಾ ಅಡಿ ನೋಂದಣಿಯಾಗಿರುವವರಿಗೆ ಲಾಕ್ ಡೌನ್ ಅವಧಿಯ ಕೂಲಿಯನ್ನು ಪಾವತಿ ಮಾಡಬೇಕು. ಕುಶಲಕರ್ಮಿಗಳಿಗೆ ವಿಶೇಷ ಪ್ಯಾಕೇಜ್ ರೂಪಿಸಿ, ಪ್ರತಿಯೊಬ್ಬರಿಗೆ ಪ್ರತಿ ತಿಂಗಳಿಗೆ ಕನಿಷ್ಠ 10,000 ರೂ.ಗಳನ್ನು ನೀಡಬೇಕು. ಸರ್ಕಾರ ಹಂಚಿಕೆ ಮಾಡುತ್ತಿರುವ ಆಹಾರ ಪೊಟ್ಟಣಗಳ ಮೇಲೆ ಬಿಜೆಪಿ ನಾಯಕರು ತಮ್ಮ ಪೋಟೋ ಮತ್ತು ಚಿನ್ನೆ ಹಾಕುವುದನ್ನು ತಡೆದು ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜೀವ ಮತ್ತು ಜೀವನವನ್ನು ಉಳಿಸಿ, ಬೆಳೆಸಲು ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕೂಡಲೇ ರಾಜಕೀಯ ತಜ್ಞರು, ಆರ್ಥಿಕ ತಜ್ಞರು, ಉದ್ಯಮಿಗಳು, ಕಾರ್ಮಿಕ ಸಂಘಟನೆಗಳ ನಾಯಕರಗಳನ್ನು ಒಳಗೊಂಡಿರುವ ಕಾರ್ಯಪಡೆಯನ್ನು ರಚಿಸಲು ಸರ್ಕಾರ ಕ್ರಮ ಕೈಗೊಳ್ಳುವುದು.

ಶಾಲಾ ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆಗಳು ಯಾವಾಗ ನಡೆಯಲಿವೆ ಎಂಬ ಗೊಂದಲವನ್ನು ಬಗೆ ಹರಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ವಿಶೇಷ ಪ್ಯಾಕೇಜ್‍ಗಳನ್ನು ಎಲ್ಲಾ ಫಲಾನುಭವಿಗಳಿಗೆ ಯುದ್ಧೋಪಾದಿಯಲ್ಲಿ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Facebook Comments

Sri Raghav

Admin