ನಾಳೆ ವೇಣುಗೋಪಾಲ್ ನೇತೃತ್ವದಲ್ಲಿ ಕಾಂಗ್ರೆಸ್ ಮಹತ್ವದ ಮೀಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.14- ಉಪ ಚುನಾವಣೆಯ ತಯಾರಿಗೆ ಸಂಬಂಧಪಟ್ಟಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಾಳೆ ಹಿರಿಯ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ.
ಇತ್ತೀಚೆಗೆ ತೆರವಾಗಿರುವ 17 ವಿಧಾನಸಭಾ ಕ್ಷೇತ್ರಗಳ ಪೈಕಿ 15ಕ್ಕೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಣೆ ಮಾಡಿದೆ.

ಅವುಗಳ ತಯಾರಿಗಾಗಿ ಕಾಂಗ್ರೆಸ್ ಈಗಾಗಲೇ ಎರಡ್ಮೂರು ಸಭೆಗಳನ್ನು ಮಾಡಿದ್ದು, ನಾಳೆ ನಡೆಯುವ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಲಾಗುತ್ತದೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ ಶತಾಯಗತಾಯ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು.

ತನ್ನ ಮೂಲ ಶಕ್ತಿಯನ್ನು ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಹಲವು ರೀತಿಯ ಕಸರತ್ತುಗಳನ್ನು ನಡೆಸುತ್ತಿದೆ. ಕೆಲವು ಕ್ಷೇತ್ರಗಳಿಗೆ ಬಿಜೆಪಿಯ ಅತೃಪ್ತರನ್ನು ಕರೆತಂದು ನಿಲ್ಲಿಸುವ ಚಿಂತನೆಯೂ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವಾಗ ಹಿರಿಯ ಕಾಂಗ್ರೆಸಿಗರನ್ನು ನಿರ್ಲಕ್ಷಿಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಇತ್ತೀಚೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತಂತೆ ನಡೆದ ಮಹತ್ವದ ಸಭೆಯಲ್ಲಿ ಬಹಳಷ್ಟು ಮಂದಿ ಹಿರಿಯ ಕಾಂಗ್ರೆಸಿಗರು ಮೂಲ ಕಾಂಗ್ರೆಸಿಗರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದರು. ಆದರೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಹೈಕಮಾಂಡ್ ಮತ್ತೆ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಿದೆ.

ಉಪ ಚುನಾವಣೆ ಸಂದರ್ಭದಲ್ಲಿ ಇದೇ ರೀತಿಯ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟಂತೆ ಎಲ್ಲರ ಜತೆ ಚರ್ಚೆ ನಡೆಸಿ ಒಮ್ಮತದ ನಿರ್ಣಯ ಕೈಗೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಹೀಗಾಗಿ ನಾಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಹಿರಿಯ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ವೀಕ್ಷಕರ ನೇಮಕ, ಚುನಾವಣೆ ಉಸ್ತುವಾರಿ ಸೇರಿದಂತೆ ಹಲವಾರು ವಿಷಯಗಳಿಗೆ ನಾಳಿನ ಚರ್ಚೆ ವೇದಿಕೆಯಾಗಲಿದೆ.

Facebook Comments

Sri Raghav

Admin