‘ಜೆಡಿಎಸ್ ಜೊತೆ ‘ಕೈ’ಜೋಡಿಸಿದ್ದೆ ಹೀನಾಯ ಸೋಲಿಗೆ ಕಾರಣ’ : ಉಪಹಾರ ಕೂಟದಲ್ಲಿ ಬಿಸಿಬಿಸಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 24-ಜೆಡಿಎಸ್ ಜೊತೆಗಿನ ಚುನಾವಣಾಪೂರ್ವ ಮೈತ್ರಿಯಿಂದಾಗಿಯೇ ನಾವು ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವಂತಾಯಿತು ಎಂದು ಉಪಹಾರ ಕೂಟದಲ್ಲಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸದಾಶಿವನಗರದಲ್ಲಿರುವ ಬಿಡಿಎ ಕ್ವಾಟ್ರರ್ಸ್‍ನ ಕಚೇರಿಯಲ್ಲಿ ಕಾಂಗ್ರೆಸ್‍ನ ಸಚಿವರಿಗಾಗಿ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಕಾಂಗ್ರೆಸ್‍ನ ಬಹುತೇಕ ಸಚಿವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ, ಆಪರೇಷನ್ ಕಮಲದಿಂದ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಆಪತ್ತು, ಸರ್ಕಾರದಲ್ಲಿ ಜೆಡಿಎಸ್ ನಾಯಕರ ಏಕಪಕ್ಷೀಯ ಧೋರಣೆಗಳು, ಸೊರಗುತ್ತಿರುವ ಕಾಂಗ್ರೆಸ್ ಪಕ್ಷದ ಸಂಘಟನೆ ಬಗ್ಗೆ ಗಂಭೀರ ಚರ್ಚೆಗಳಾಗಿವೆ.

ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 12 ರಿಂದ 13 ಸ್ಥಾನ ಗೆಲ್ಲುವ ನಿರೀಕ್ಷೆ ಕಾಂಗ್ರೆಸ್‍ಗಿತ್ತು. ಆದರೆ ಜೆಡಿಎಸ್ ಜೊತೆಗಿನ ಮೈತ್ರಿ ಮತ್ತು ಒಳಜಗಳಗಳಿಂದಾಗಿ ನಾವು ಗೆಲ್ಲುವ ಕ್ಷೇತ್ರಗಳನ್ನೂ ಕಳೆದುಕೊಂಡಿದ್ದೇವೆ.

ಲೋಕಸಭೆ ಚುನಾವಣಾ ಪೂರ್ವ ಮೈತ್ರಿ ರಾಜಕೀಯವಾಗಿ ತೆಗೆದುಕೊಂಡ ತಪ್ಪು ನಿರ್ಧಾರ. ಕಾಂಗ್ರೆಸ್ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮೊದಲು ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡಬೇಕು.

ರಾಜ್ಯ ನಾಯಕರು ಕೇಡರ್ ಬೇಸ್ ಮುಖಂಡರ ಜೊತೆ ಚರ್ಚಿಸಿ ಸ್ಥಳೀಯ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದು ನಂತರ ಹೈಕಮಾಂಡ್‍ಗೆ ಶಿಫಾರಸ್ಸು ಮಾಡಬೇಕು. ಅದನ್ನು ಬಿಟ್ಟು ತಮ್ಮಷ್ಟಕ್ಕೆ ತಾವೇ ರಾಜಕೀಯ ಪರಿಣಿತರಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಈ ರೀತಿಯ ಪ್ರಮಾದಗಳಾಗುತ್ತವೆ.

ಚುನಾವಣಾ ಪೂರ್ವ ಮೈತ್ರಿ ಕಾಂಗ್ರೆಸ್ ಪಾಲಿನ ನೇಣು ಕುಣಿಕೆಯಾಗಿತ್ತು. ಅದನ್ನು ಕೆಲವರು ಪ್ರಶ್ನಿಸಿದರು. ಆದರೆ ಹೈಕಮಾಂಡ್‍ನ ನಿರ್ಧಾರ ಎಂದು ರಾಜ್ಯ ನಾಯಕರು ಗದರಿಸಿ ಬಾಯಿ ಮುಚ್ಚಿಸಿದ್ದರಿಂದ ಈ ರೀತಿಯ ದುರಂತವಾಗಿದೆ. ಕಾರ್ಯಕರ್ತರಲ್ಲಿ ಭರವಸೆಯೇ ಹೋಗಿದೆ.

ಇನ್ನು ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರವನ್ನು ಕಳೆದುಕೊಂಡು ಬರಿಗೈಲಿ ಕುಳಿತುಕೊಂಡರೆ ಕಾಂಗ್ರೆಸ್ ಪಕ್ಷವನ್ನು ಮುಚ್ಚಿ ಮನೆಗೆ ಹೋಗುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಸಂಕಷ್ಟ ಕಾಲದಲ್ಲಿ ಎಲ್ಲರೂ ಒಟ್ಟಾಗಿ ನಿಂತು ಸರ್ಕಾರವನ್ನು ಉಳಿಸಿಕೊಳ್ಳಬೇಕು.

ಒಂದು ವೇಳೆ ಜೆಡಿಎಸ್ ನಾಯಕರು ಇದಕ್ಕೆ ಸಹಕರಿಸದಿದ್ದರೆ ಅವರ ದಾರಿ ಅವರಿಗೆ , ನಮ್ಮ ದಾರಿ ನಮಗೆ ಎಂಬ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂಬುದರ ಬಗ್ಗೆ ಚರ್ಚೆಗಳಾಗಿವೆ.
ಬಹುತೇಕ ಎಲ್ಲಾ ಸಚಿವರು ಉಸ್ತುವಾರಿಗಳಿದ್ದ ಜಿಲ್ಲೆಯಲ್ಲೂ ಸೋಲು ಕಂಡಿರುವುದರಿಂದ ಒಬ್ಬರ ಮೇಲೆ ಒಬ್ಬರು ದೂಷಿಸುಕೊಳ್ಳುವುದಕ್ಕಿಂತಲೂ ಎಲ್ಲರೂ ಸಮಾನ ದುಃಖಿಗಳಂತೆ ಸಭೆಯಲ್ಲಿ ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin