ಆಂಜನೇಯನ ಬಾಲದ ರೀತಿ ಬೆಳೆಯುತ್ತಲೇ ಇದೆ ಕಾಂಗ್ರೆಸ್ ಅತೃಪ್ತರ ಪಟ್ಟಿ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 21- ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಕಂಠಕವಾಗುವ ಬೆಳವಣಿಗೆಗಳು ಹೆಚ್ಚಾಗುತ್ತಿದ್ದು, ಅತೃಪ್ತರ ಸಂಖ್ಯೆ ಇಮ್ಮಡಿಸುತ್ತಿದೆ. ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಾ.ಕೆ.ಸುಧಾಕರ್ ಸೇರಿದಂತೆ ಅನೇಕರು ಕಾಂಗ್ರೆಸ್ ಶಾಸಕರ ನಾಯಕತ್ವ ಮತ್ತು ಸಮ್ಮಿಶ್ರ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ.

ಅವರೆಲ್ಲರನ್ನೂ ಮೀರಿಸಿ ಒಂದು ಹೆಜ್ಜೆ ಮುಂದೆ ಹೋಗಿರುವ ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ತಮ್ಮ ಸಿಟ್ಟನ್ನು ಸ್ಫೋಟಿಸಿದ್ದಾರೆ.

ಸಚಿವ ಸಂಪುಟ ಸಭೆಯಿಂದ ರೋಷನ್ ಬೇಗ್ ಅವರನ್ನು ಹೊರಗಿಡಲಾಗಿದೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ರೋಷನ್ ಬೇಗ್‍ರನ್ನು ಸ್ಟಾರ್ ಪ್ರಚಾರಕರೆಂದು ಪರಿಗಣಿಸಿಲ್ಲ.

ಈ ಎಲ್ಲಾ ಬೆಳವಣಿಗೆಗಳಿಂದ ರೊಚ್ಚಿಗೆದ್ದಿರುವ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ವಿರುದ್ಧ ಬಹಿರಂಗ ವಾಗ್ಧಾಳಿ ನಡೆಸಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರೋಷನ್‍ಬೇಗ್ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶ ಪೂರ್ವಕವಾಗಿಯೇ ಸಂಪುಟದಿಂದ ಹೊರಗಿಟ್ಟಿದ್ದರು. ಆದರೆ, ಈ ಇಬ್ಬರು ಹಠಕ್ಕೆ ಬಿದ್ದು ಹೈಕಮಾಂಡ್ ಕೃಪಾಕಟಾಕ್ಷದ ಮೂಲಕ ಸಂಪುಟ ಸೇರಿಕೊಂಡರು.

ಸಿದ್ದರಾಮಯ್ಯ ಅವರು ರೋಷನ್‍ಬೇಗ್ ವಿರೋಧಿ ಬಣದಲ್ಲಿ ಗುರುತಿಸಿಕೊಂಡ ಅಲ್ಪಸಂಖ್ಯಾತ ನಾಯಕರಿಗೇ ಹೆಚ್ಚು ಒತ್ತು ನೀಡುತ್ತಾ ವಿಧಾನಪರಿಷತ್ ಸದಸ್ಯರನ್ನಾಗಿಯೂ ಮಾಡಿದ್ದರು.

ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ಸೇರಿಕೊಳ್ಳಲು ಹರಸಾಹಸ ನಡೆಸಿದ್ದ ರೋಷನ್‍ಬೇಗ್ ವಿಫಲರಾಗಿದ್ದರು. ಇದು ಅವರ ಸಹನೆಯನ್ನು ಗೆಡಿಸಿದೆ. ಸಾಲದೆಂಬಂತೆ ಜೆಡಿಎಸ್‍ನಿಂದ ಹೊಸದಾಗಿ ಬಂದ ಜಮೀರ್ ಅಹಮ್ಮದ್‍ಖಾನ್ ಅವರನ್ನು ಸಂಪುಟ ಸಚಿವರನ್ನಾಗಿ ಮಾಡಿ ಮೆರೆಸುತ್ತಿರುವುದು ನುಂಗಲಾರದ ತುತ್ತಾಗಿದೆ.

ಕಾಂಗ್ರೆಸ್ ನಿಷ್ಠರು ಸಹಜವಾಗಿ ಕೆರಳಿದ್ದಾರೆ. ಜಮೀರ್ ಅಹಮದ್ ಬೆನ್ನ ಹಿಂದೆ ಸಿದ್ದರಾಮಯ್ಯ ಇರುವುದು, ಅವರ ಬಣದಲ್ಲಿ ದಿನೇಶ್ ಗುಂಡುರಾವ್ ಗುರುತಿಸಿಕೊಂಡಿರುವುದು ರೋಷನ್ ಬೇಗ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿರುವ ರೋಷನ್ ಬೇಗ್ ಅವರ ಸಿಟ್ಟು ಪಕ್ಷದಲ್ಲಿ ಮತ್ತೊಮ್ಮೆ ಗುಂಪುಗಾರಿಕೆಗೆ ನಾಂದಿಹಾಡಿದೆ. ಹಿರಿಯ ನಾಯಕರನ್ನು ನಿಯಂತ್ರಿಸಲಾಗದೆ ದಿನೇಶ್ ಗುಂಡುರಾವ್ ಅಸಹಾಯಕ ಸ್ಥಿತಿಯಲ್ಲಿ ನಿಲ್ಲುವಂತಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ