ಮಾ.8ರಂದು ಕಾಂಗ್ರೆಸ್ ಶಾಸಕಾಂಗ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.6- ರಾಜ್ಯ ಬಜೆಟ್ ಕುರಿತಂತೆ ಚರ್ಚಿಸುವುದು ಹಾಗೂ ಪ್ರಸ್ತುತ ಮಹತ್ವ ಪಡೆದಿರುವ ರಾಜಕೀಯ ವಿಷಯಗಳ ಬಗ್ಗೆ ಸಮಾಲೋಚಿಸುವ ಕಾರಣಕ್ಕಾಗಿ ಮಾ.8ರಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ಆಯೋಜಿಸಲಾಗಿದೆ.ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಖಾಸಗಿ ಹೊಟೇಲ್‍ನಲ್ಲಿ ಸಭೆ ನಡೆಯಲಿದ್ದು, ಬಜೆಟ್ ಅವೇಶನದಲ್ಲಿ ಸರ್ಕಾರವನ್ನು ಕಟ್ಟಿ ಹಾಕಲು ರಣತಂತ್ರ ರೂಪಿಸಲಾಗುತ್ತಿದೆ.

ಒಂದು ದೇಶ, ಒಂದು ಚುನಾವಣೆ ಎಂಬ ವಿಷಯ ಕುರಿತಂತೆ ಚರ್ಚೆಗೆ ಸ್ಪೀಕರ್ ಅವರು ಸಮಯ ನಿಗದಿಪಡಿಸಿದ್ದರಿಂದ ಆರಂಭದ ಎರಡು ದಿನ ವಿಧಾನಸಭೆಯಲ್ಲಿ ಯಾವುದೇ ಜನಪರ ವಿಚಾರಗಳ ಬಗ್ಗೆ ಕಲಾಪಗಳು ನಡೆಯದೆ ಗದ್ದಲ, ಕೋಲಾಹಲದಲ್ಲೇ ಕಾಲಹರಣವಾಗಿದೆ.

ಈ ನಡುವೆ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ ಅವರ ಕುಟುಂಬದ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಚರ್ಚೆ ಕೂಡ ಸಾಕಷ್ಟು ಸಮಯ ನುಂಗಿ ಹಾಕಿದ್ದು , ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ.

ಅದರಲ್ಲಿರುವ ಕಾರ್ಯಕ್ರಮಗಳು, ಯೋಜನೆಗಳನ್ನು ಆಧರಿಸಿ ಮುಂದಿನ ಹಂತದಲ್ಲಿ ಚರ್ಚೆ ಮಾಡಲು ಕೂಡ ನಿರ್ಧರಿಸಲಾಗಿದೆ.ಈ ನಡುವೆ ರಾಜಕೀಯವಾಗಿ ಸಾಕಷ್ಟು ವಿಷಯಗಳು ಪ್ರತಿಪಕ್ಷಗಳಿಗೆ ಅಸ್ತ್ರ ಕೊಟ್ಟಿವೆ. ರಾಸಲೀಲೆ ಸಿಡಿ ಪ್ರಕರಣ, ಕೊರೊನಾ ನಿರ್ವಹಣೆಯಲ್ಲಿನ ವೈಫಲ್ಯ , ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ನಾನಾ ರೀತಿಯ ವಿಷಯಗಳು ಪ್ರತಿಪಕ್ಷಗಳಿಗೆ ಅಸ್ತ್ರ ಕೊಟ್ಟಿವೆ.

ಆದರೆ ಪ್ರಸ್ತುತ ವಿಷಯದ ಸಂದರ್ಭದಲ್ಲಿ ರಚನಾತ್ಮಕ ವಿಷಯಗಳಿಗಿಂತಲೂ ಭಾವನಾತ್ಮಕ ವಿಷಯಗಳಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ಅನಗತ್ಯ ವಿಚಾರಗಳು ವೈಭವೀಕರಣಗೊಳ್ಳುತ್ತಿವೆ. ಹೀಗಾಗಿ ಚರ್ಚೆಯ ಹಾದಿ ತಪ್ಪದಂತೆ ಎಚ್ಚರಿಕೆ ವಹಿಸಲು ಕಾಂಗ್ರೆಸ್ ನಾಯಕರು ಮುಂಜಾಗ್ರತೆ ವಹಿಸಿದ್ದಾರೆ. ಇತ್ತೀಚೆಗೆ ನಡೆದಂತಹ ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗ ಜಿಲ್ಲೆಗಳ ಕಲ್ಲು ಕ್ವಾರಿ ಸೋಟ ಪ್ರಕರಣಗಳಂತೂ ಭಾರೀ ಗದ್ದಲವನ್ನೇ ಸೃಷ್ಟಿಸುವ ಸಾಧ್ಯತೆ ಇದೆ.

ವಿವಿಧ ಸಮುದಾಯಗಳ ಮೀಸಲಾತಿ ಹೋರಾಟಗಳು ಕೂಡ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಂಗೀ ಕುಸ್ತಿಯ ವಾತಾವರಣ ನಿರ್ಮಿಸಲಿವೆ. ಕಳೆದ ಬಾರಿ ನಡೆದ ಅವೇಶನದಲ್ಲಿ ಹೆಚ್ಚು ಚರ್ಚೆಯಾಗಲಿಲ್ಲ. ಆದರೆ ಈ ಬಾರಿ ಬಹಳಷ್ಟು ವಿಷಯಗಳಿದ್ದು, ಚರ್ಚೆಗೆ ಸಾಕಷ್ಟು ಸಮಯ ಕೂಡ ಇದೆ.

ರಚನಾತ್ಮಕ ವಿಷಯಗಳ ಚರ್ಚೆ ನಡೆಯಲಿದೆಯೇ ಅಥವಾ ಹಿಂದಿನಂತೆ ಗದ್ದಲದಲ್ಲಿಯೇ ಮುಗಿದು ಹೋಗಲಿದೆಯೇ ಎಂಬ ಕುತೂಹಲ ಸೃಷ್ಟಿಸಿದೆ.  ಕಾಂಗ್ರೆಸ್ ಪಕ್ಷ ಇದೇ ಅವೇಶನದ ಅವಯಲ್ಲಿ ಎರಡನೆ ಬಾರಿಗೆ ಶಾಸಕಾಂಗ ಸಭೆ ಕರೆದಿದ್ದು, ರಚನಾತ್ಮಕ ಚರ್ಚೆಗೆ ಪೂರ್ವ ತಯಾರಿಯಲ್ಲಿ ತೊಡಗಿದೆ.

Facebook Comments

Sri Raghav

Admin